ನವದೆಹಲಿ/ಬೆಂಗಳೂರು: ಭಾರತದಲ್ಲಿ ಬಾಹ್ಯಾಕಾಶ ಸ್ಟಾರ್ಟಪ್ ಗಳಿಗೆ ಪ್ರಗತಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇಸ್ರೋ ಮತ್ತು ಮೈಕ್ರೋಸಾಫ್ಟ್ ಕಂಪನಿ ಗುರುವಾರ ಒಪ್ಪಂದವೊಂದಕ್ಕೆ ಸಹಿ ಹಾಕಿವೆ.
ದೇಶಾದ್ಯಂತ ಇರುವಂಥ ಬಾಹ್ಯಾಕಾಶ ತಂತ್ರಜ್ಞಾನ ಸ್ಟಾರ್ಟಪ್ ಗಳಿಗೆ ತಂತ್ರಜ್ಞಾನದ ಪರಿಕರಗಳು ಮತ್ತು ವೇದಿಕೆಯನ್ನು ಕಲ್ಪಿಸುವುದು, ಮಾರುಕಟ್ಟೆ ಪ್ರವೇಶಕ್ಕೆ ಉತ್ತೇಜನ ನೀಡುವುದು ಮತ್ತು ಅವುಗಳು ಮತ್ತಷ್ಟು ಎತ್ತರಕ್ಕೇರಲು ಎಲ್ಲ ರೀತಿಯಲ್ಲಿ ನೆರವಾಗುವುದೇ ಈ ಒಪ್ಪಂದದ ಉದ್ದೇಶವಾಗಿದೆ.
ಮೈಕ್ರೋಸಾಫ್ಟ್ ಫ್ಯೂಚರ್ ರೆಡಿ ಟೆಕ್ನಾಲಜಿ ಸಮಿಟ್‌ನಲ್ಲಿ ಪಾಲ್ಗೊಳ್ಳಲೆಂದು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರು ಬೆಂಗಳೂರಿಗೆ ಆಗಮಿಸಿದ್ದು, ಈ ಸಂದರ್ಭದಲ್ಲೇ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಅದರಂತೆ, ಇಸ್ರೋ ಗುರುತಿಸುವಂಥ ಬಾಹ್ಯಾಕಾಶ ತಂತ್ರಜ್ಞಾನ ನವೋದ್ಯಮಗಳು “ಮೈಕ್ರೋಸಾಫ್ಟ್ ಫಾರ್ ಸ್ಟಾರ್ಟಪ್ಸ್ ಫೌಂಡರ್ಸ್ ಹಬ್ ಪ್ಲಾಟ್‌ಫಾರ್ಮ್’ಗೆ ಸೇರ್ಪಡೆಯಾಗಲಿವೆ.
ನವೋದ್ಯಮಗಳ ಹೊಸ ಪಯಣದಲ್ಲಿ ಈ ಪ್ಲಾಟ್‌ಫಾರ್ಮ್ ಬೆಂಬಲವಾಗಿ ನಿಲ್ಲಲಿದೆ. ಅಂದರೆ, ಇದೇ ವೇದಿಕೆಯು ಸ್ಟಾರ್ಟಪ್ ಗಳಿಗೆ ತಂತ್ರಜ್ಞಾನ ಪರಿಕರಗಳು ಮತ್ತು ಸಂಪನ್ಮೂಲಗಳನ್ನು ಉಚಿತವಾಗಿ ಒದಗಿಸಲಿದೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಛಾಪು ಮೂಡಿಸಲು ಹೊರಟಿರುವ ನವೋದ್ದಿಮೆಗಳಿಗೆ ಸಹಾಯಮಾಡಲು ನಾವು ಉತ್ಸುಕರಾಗಿದ್ದೇವೆ. ಇದರಿಂದ ದೇಶದ ಆರ್ಥಿಕತೆಗೂ ಅನುಕೂಲವಾಗಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಹೇಳಿದ್ದಾರೆ.