ಶ್ರೀಹರಿಕೋಟಾ: ಕೆಲ ದಿನಗಳ ಹಿಂದೆಯಷ್ಟೇ ಚಂದ್ರನ ದಕ್ಷಿಣ ಭಾಗದಲ್ಲಿ ಲ್ಯಾಂಡರ್ ಇಳಿಸಿ ವಿಕ್ರಮ ಮೆರೆದಿದ್ದ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇದೀಗ ತನ್ನ ಕಿರೀಟಕ್ಕೆ ಮತ್ತೊಂದು ಸಾಧನೆಯ ಗರಿ ಇಡಲು ಮುಂದಾಗಿದೆ. ಭಾರತವು ಇದೇ ಮೊದಲ ಬಾರಿಗೆ ಸೂರ್ಯನ ಸುತ್ತ ಅಧ್ಯಯನ ನಡೆಸಲು ಮುಂದಾಗಿದ್ದು, ಆಂಧ್ರ ಪ್ರದೇಶದ ಶ್ರೀಹರಿಕೋಟಾ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಆದಿತ್ಯ – ಎಲ್1 ಉಪಗ್ರಹವನ್ನು PSLV-C57 ರಾಕೆಟ್ ನಲ್ಲಿ ಉಡಾವಣೆ ಮಾಡಲಾಗಿದೆ.
ಇಂದು ಉಡಾವಣೆಯಾದ ನೌಕೆಯು ಎಲ್-1 ಬಿಂದುವಿನಲ್ಲಿ ನಿಯೋಜನೆಯಾಗಲಿದೆ. 125 ದಿನಗಳ ಸುದೀರ್ಘ ಪಯಣ ಕೈಗೊಳ್ಳಲಿರುವ ನೌಕೆಯು ಭೂಮಿಯಿಂದ 15 ಲಕ್ಷ ಕಿ,ಮೀ ದೂರ ಪ್ರಯಾಣಿಸಲಿದೆ. ಈ ಮೂಲಕ ಅತಿಹೆಚ್ಚು ದೂರ ಪ್ರಯಾಣ ಮಾಡಲಿರುವ ಭಾರತದ ಮೊಟ್ಟ ಮೊದಲ ನೌಕೆ ಎಂಬ ಹೆಗ್ಗಳಿಕೆಯೂ ಆದಿತ್ಯ-ಎಲ್ 1 ಪಾತ್ರವಾಗಲಿದೆ.
ಶ್ರೀಹರಿಕೋಟಾದಿಂದ ಇಂದು ಹೊರಟ ರಾಕೆಟ್, ನೌಕೆಯನ್ನು ಭೂಮಿಯ ಕೆಳಕಕ್ಷೆಗೆ ಸೇರಿಸಲಿದೆ. ಅಲ್ಲಿ ಭೂಮಿಯನ್ನು ಸುತ್ತುವ ನೌಕೆಯನ್ನು ಹಂತ ಹಂತವಾಗಿ ದೀರ್ಘವೃತ್ತಾಕಾರದ ಕಕ್ಷೆಗೆ ಬದಲಾಯಿಸಲಾಗುತ್ತದೆ. ನಿರ್ದಿಷ್ಟ ಕಕ್ಷೆಗೆ ತಲುಪಿದ ಬಳಿಕ ನೌಕೆಯ ಇಂಜಿನ್ ಶಕ್ತಿಯ ಬಲದಿಂದ ಗುರುತ್ವಾಕರ್ಷಣೆ ಮೀರಿ ಎಲ್-1ರ ಬಿಂದುವಿನಡೆ ತಳ್ಳಲಾಗುತ್ತದೆ.
ಆದಿತ್ಯ ಎಲ್ 1ರಲ್ಲಿ ಏಳು ಉಪಕರಣಗಳಿದ್ದು, ಅವು ಹಲವು ರೀತಿಯಲ್ಲಿ ಕೆಲಸ ಮಾಡಲಿದೆ. ಸೂರ್ಯನ ಕೊರೊನಾ ಭಾಗ ಮತ್ತು ಅಲ್ಲಿಂದ ಹೊರಹೊಮ್ಮುವ ಸೌರ ಶಾಖದ ಅಧ್ಯಯನ, ನೇರಳೆ ವಿಕಿರಣಗಳ ಪ್ರಮಾಣದ ಅಧ್ಯಯನ, ಸೌರ ಗಾಳಿ ಮತ್ತು ಶಕ್ತಿಯುತ ಅಯಾನುಗಳ ಅಧ್ಯಯನ, ಸೂರ್ಯ ಮತ್ತು ಭೂಮಿಯ ಗುರುತ್ವ ಬಲದಿಂದ ಉಂಟಾಗಿರುವ ಎಲ್-1ರ ಗುರುತ್ವ ಬಲವನ್ನು ಸೇರಿದಂತೆ ಹಲವು ಅಧ್ಯಯನಗಳನ್ನು ನಡೆಸಲಾಗುತ್ತದೆ.