Advertisement

ಸಮರ್ಥ ಸ್ವದೇಶಿ ತಂತ್ರಜ್ಞಾನ –ಇಸ್ರೋ ಶಕ್ತ : ಜಿ. ಮಾಧವನ್‌ ನಾಯರ್‌

03:15 AM Jul 08, 2017 | Team Udayavani |

ಉಳ್ಳಾಲ: ವಿದೇಶಿ ತಂತ್ರಜ್ಞಾನಕ್ಕೆ ಸಮನಾದ ಯಶಸ್ವಿ ಮತ್ತು ಸಮರ್ಥ ಸ್ವದೇಶಿ ತಂತ್ರಜ್ಞಾನವನ್ನು ಇಸ್ರೋ ನಿರ್ಮಿಸಲು ಶಕ್ತವಾಗಿದೆ. ಇದೇನು ರಾತೋರಾತ್ರಿ ನಡೆದ ಬೆಳವಣಿಗೆಯಲ್ಲ. 70ರ ದಶಕದಿಂದ ನಿರಂತರವಾಗಿ ನಡೆಯುತ್ತಿದ್ದ ಪ್ರಯತ್ನದ ಫಲವಾಗಿ ಇಂದು ನಾವು ಜಾಗತಿಕವಾಗಿ ಇತರ ದೇಶಗಳ ಜತೆ ಪೈಪೋಟಿ ನಡೆಸಲು ಸಾಧ್ಯವಾಗಿದೆ ಎಂದು ಇಸ್ರೋದ ವಿಶ್ರಾಂತ ಅಧ್ಯಕ್ಷ ಪದ್ಮವಿಭೂಷಣ ಜಿ. ಮಾಧವನ್‌ ನಾಯರ್‌ ಅಭಿಪ್ರಾಯಪಟ್ಟರು.

Advertisement

ಅವರು ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾನಿಲಯದ ಅಂಗ ಸಂಸ್ಥೆಯಾದ ಎ.ಬಿ. ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯದ ಹಳೇ ವಿದ್ಯಾರ್ಥಿ ಅಸೋಸಿಯೇಶನ್‌ ಮತ್ತು ಪ್ರೊ| ಎನ್‌ ಶ್ರೀಧರ್‌ ಶೆಟ್ಟಿ ದತ್ತಿ ಉಪನ್ಯಾಸ ಸಮಿತಿ ಆಶ್ರಯದಲ್ಲಿ ಕೆ.ಎಸ್‌.ಹೆಗ್ಡೆ ಮೆಡಿಕಲ್‌ ಅಕಾಡೆಮಿ ಕ್ಯಾಂಪಸ್‌ನ ಕ್ಷೇಮ ಆಡಿಟೋರಿಯಂನಲ್ಲಿ ನಡೆದ ಪ್ರೊ| ಎನ್‌. ಶ್ರೀಧರ್‌ ಶೆಟ್ಟಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಚಾಲೆಂಜಸ್‌ ಇನ್‌ ಇಂಡಿಯನ್‌ ಹೆಲ್ತ್‌ಕೇರ್‌ ಸಿನಾರಿಯೊ’ ವಿಚಾರದಲ್ಲಿ ದತ್ತಿ ಉಪನ್ಯಾಸ ನೀಡಿದರು.

ಹೊಸ ಮೈಲಿಗಲ್ಲು
ತಿಂಗಳ ಹಿಂದೆ ಜಿಎಸ್‌ಎಲ್ವಿ ಮಾರ್ಕ್‌ 3 ಮೂಲಕ ನಾಲ್ಕು ಟನ್‌ ತೂಗುವ ಹಲವು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಉಡಾಯಿಸುವ ಮೂಲಕ ಇಸ್ರೊ ಹೊಸ ಮೈಲಿಗಲ್ಲೊಂದನ್ನು ನಿರ್ಮಿಸಿತು. ಈ ಸಾಧನೆಯ ಅನಂತರ ಭಾರತವು ಉಪಗ್ರಹಗಳನ್ನು ಉಡಾಯಿಸುವ ವಿಷಯದಲ್ಲಿ ಸ್ವಾವಲಂಬಿ ದೇಶವಾಗಿ ಹೊರಹೊಮ್ಮಿದೆ ಎಂದರು.

ಟೆಲಿ ಎಜುಕೇಶನ್‌, ಟೆಲಿಮೆಡಿಸಿನ್‌
ಟೆಲಿ ಎಜುಕೇಶನ್‌ ಮತ್ತು ಟೆಲಿ ಮೆಡಿಸಿನ್‌ನಂಥ ತಂತ್ರಜ್ಞಾನಗಳು ಸಮಾಜದ ರೂಪುರೇಷೆಯನ್ನೇ ಬದಲಿಸಿವೆ. ಕರ್ನಾಟಕವು ಟೆಲಿಎಜುಕೇಶನ್‌ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದೆ. ಟೆಲಿಮೆಡಿಸಿನ್‌ ವ್ಯವಸ್ಥೆಯನ್ನು ಕೂಡ ದೇಶದಲ್ಲಿ ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ. ಮುಖ್ಯವಾಗಿ ಸೇನೆ ಮತ್ತು ದೇಶದ ಅತ್ಯಂತ ಕಡಿದಾದ ಪ್ರದೇಶಗಳಲ್ಲಿ ಇರುವ ಆಸ್ಪತ್ರೆಗಳು ಟೆಲಿಮೆಡಿಸಿನ್‌ ಮೂಲಕ ಇತರ ಆಸ್ಪತ್ರೆಗಳ ಜತೆ ಸಂಪರ್ಕವನ್ನು ಹೊಂದಿವೆ. ಈ ತಂತ್ರಜ್ಞಾನದ ಮೂಲಕ ದೂರದ ಎಲ್ಲೋ ಇರುವ ವೈದ್ಯರು ರೊಬೋಟಿಕ್‌ ತಂತ್ರಜ್ಞಾನ ಬಳಸಿ ಶಸ್ತ್ರಚಿಕಿತ್ಸೆಯನ್ನು ಕೂಡ ಮಾಡಬಹುದಾಗಿದೆ ಎಂದು ಹೇಳಿದರು.

ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್‌. ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಎ.ಬಿ. ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯದ ವಿಶ್ರಾಂತ ಡೀನ್‌ ಪ್ರೊ| ಎನ್‌. ಶ್ರೀಧರ್‌ ಶೆಟ್ಟಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ಪ್ರೊ| ಎಂ. ಶಾಂತಾರಾಮ ಶೆಟ್ಟಿ, ಉಪಕುಲಪತಿ ಪ್ರೊ| ಎಸ್‌. ರಮಾನಂದ ಶೆಟ್ಟಿ, ಎ.ಬಿ. ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯದ ಪ್ರಾಂಶುಪಾಲರು ಹಾಗೂ ಡೀನ್‌ ಪ್ರೊ| ಯು.ಎಸ್‌. ಕೃಷ್ಣ ನಾಯಕ್‌ ಉಪಸ್ಥಿತರಿದ್ದರು. ಡಾ| ಚೇತನ್‌ ಹೆಗ್ಡೆ ಸ್ವಾಗತಿಸಿ, ಡಾ| ಶಿಶಿರ್‌ ಶೆಟ್ಟಿ ವಂದಿಸಿದರು. ಡಾ| ನಿತೇಶ್‌ ಶೆಟ್ಟಿ ಅವರು ನಾಯರ್‌ ಅವರ ಪರಿಚಯ ಮಾಡಿದರು. ಡಾ| ಅಮರಶ್ರೀ ಶೆಟ್ಟಿ ನಿರ್ವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next