Advertisement

ISRO : “ಮೇರಾ ಭಾರತ್‌ ಮಹಾನ್‌” ಗೆ ಇಸ್ರೋ ಮುನ್ನುಡಿ

11:39 PM Aug 23, 2023 | Team Udayavani |

ಕೆಲವು ವರ್ಷಗಳ ಹಿಂದೆ ತೆರೆಕಂಡು ಯಶಸ್ವಿಯಾದ ಹಾಲಿವುಡ್‌ ಸಿನೆಮಾಕ್ಕೆ ಖರ್ಚಾದ ಹಣ 165 ಮಿಲಿಯನ್‌ ಡಾಲರ್‌. ಈಗದರ ಮೌಲ್ಯ 1361 ಕೋಟಿ ರೂ. ಇಸ್ರೋ ಚಂದ್ರಯಾನ-3ಕ್ಕೆ ಖರ್ಚು ಮಾಡಿ ರುವ ಹಣ ಕೇವಲ 615 ಕೋಟಿ ರೂ. ಬಾಹ್ಯಾಕಾಶ ಜಗತ್ತಿನಲ್ಲಿ ಹೊಸ ಹೊಸ ಶೋಧಕ್ಕೆ ಮುಂದಾಗಿರುವ ಉದ್ಯಮಿ, ಸ್ಪೇಸ್‌-ಎಕ್ಸ್‌ ಮಾಲಕ ಎಲಾನ್‌ ಮಸ್ಕ್ ಇದನ್ನು ಮೆಚ್ಚಿಕೊಂಡಿದ್ದಾರೆ. ಇಷ್ಟು ಕಡಿಮೆ ಹಣದಲ್ಲಿ ಇಂತಹದ್ದೊಂದು ಅಸಾಮಾನ್ಯ ಸಾಧನೆಯನ್ನು ಸಾಧ್ಯ ಮಾಡಿದ್ದರ ಬಗ್ಗೆ, ಬರೀ ಮೆಚ್ಚುಗೆಗಳ ಮಹಾಪೂರವಲ್ಲ, ಅಚ್ಚರಿಗಳೂ ವ್ಯಕ್ತವಾಗುತ್ತಿವೆ. ಹಾಲಿ ವುಡ್‌ ಸಿನೆಮಾವೇ ಏಕೆ, ಭಾರತದಲ್ಲೇ ಸಿದ್ಧವಾಗುತ್ತಿರುವ ಹಲವು ಸಿನೆಮಾ ಗಳು 500 ಕೋಟಿ ರೂ. ಹಣವನ್ನು ಬಳಸಿವೆ. ಹಾಗಿದ್ದ ಮೇಲೆ ಇಸ್ರೋ ಇಂತಹದ್ದೊಂದು ಪರಾಕ್ರಮವನ್ನು ಅಷ್ಟು ಕಡಿಮೆ ವೆಚ್ಚದಲ್ಲಿ ಸಾಧಿಸಿದ್ದರ ಹಿಂದೆ ಏನಿದ್ದಿರಬಹುದು?

Advertisement

ಗುಣಮಟ್ಟಕ್ಕೆ ಆದ್ಯತೆ, ಆಡಂಬರಕ್ಕೆ ಕಡಿವಾಣ. ಇಸ್ರೋ ಎಂದಿನಂತೆ ಗುಣ ಮಟ್ಟಕ್ಕೆ, ಶ್ರೇಷ್ಠತೆ, ನೈಪುಣ್ಯಕ್ಕೆ ಗರಿಷ್ಠ ಗಮನ ನೀಡಿದೆ. ಉಳಿದ ಆಡಂ ಬರಗಳಿಂದ ದೂರವೇ ಉಳಿದಿದೆ. ಈ ಯಾನಕ್ಕೆ ಬಳಸಿಕೊಂಡ ಬಿಡಿಭಾಗ ಗಳೂ ಭಾರತದ್ದೇ, ಕೆಲಸ ಮಾಡಿದ ವಿಜ್ಞಾನಿಗಳೂ ಭಾರತೀಯರೇ ಎನ್ನು ವು ದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಹಿಂದೆ ಭಾರತ ವೈಜ್ಞಾನಿಕವಾಗಿ ತನ್ನ ಆರಂಭಿಕ ಹೆಜ್ಜೆಗಳನ್ನಿಡುತ್ತಿದ್ದಾಗ, ಅನಿ ವಾರ್ಯ ವಾಗಿ ಬೇರೆ ದೇಶ ಗಳನ್ನು ಅವಲಂಬಿಸಬೇಕಾಗಿತ್ತು. ದೇಶೀ ಯರು ಕಾಲಕಾಲಕ್ಕೆ ಸಾಮೂಹಿಕ ಪರಿಶ್ರಮ ಹಾಕಿದ್ದರಿಂದ ಬಾಹ್ಯಾಕಾಶ ದಲ್ಲಿ ನಾವೊಂದು ಸ್ವಾವಲಂಬಿ ರಾಷ್ಟ್ರವಾಗಿ ಹೊರಹೊಮ್ಮಿದ್ದೇವೆ.

ಇಸ್ರೋದ ಈ ಯಶಸ್ಸು ಬರೀ ಅದರ ಯಶಸ್ಸು ಮಾತ್ರವಲ್ಲ, ಬರೀ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಿಕ್ಕ ಯಶಸ್ಸು ಮಾತ್ರವಲ್ಲ. ಇಡೀ ಭಾರತಕ್ಕೆ ಹಲವು ಕೋನಗಳಿಂದ ಸಿಕ್ಕ ಯಶಸ್ಸು. ಇದು ಭಾರತೀಯ ಯುವಕರ ಚಿಂತನೆಯ ದಿಕ್ಕನ್ನೇ ಬದಲಿಸುವುದು ಖಚಿತ. ಪ್ರಸ್ತುತ ಬಹುತೇಕ ಭಾರತೀಯ ವಿದ್ಯಾ ರ್ಥಿ ಗಳು ತಮ್ಮ ಪದವಿ ಹಂತದಲ್ಲಿ ಕಂಪ್ಯೂಟರ್‌ ಸೈನ್ಸ್‌ ತೆಗೆದುಕೊಂಡು ಸಾಫ್ಟ್ವೇರ್‌ ಎಂಜಿನಿಯರ್‌ಗಳಾಗಿ, ವಿದೇಶಕ್ಕೆ ಹಾರುವುದನ್ನೇ ಗುರಿ ಯಾಗಿಸಿ ಕೊಂಡಿದ್ದಾರೆ. ಆ ದೇಶದ ದೊಡ್ಡ ಸಂಬಳ ಪಡೆದು, ಅಲ್ಲೇ ನೆಲೆ ಸುವ ಯೋಚನೆಗಳನ್ನು ಮಾಡುತ್ತಿದ್ದಾರೆ. ಇದು ಪ್ರತಿಭಾ ಪಲಾಯನ ವೆಂದು ದಶಕಗಳಿಂದ ಕರೆಸಿಕೊಂಡಿದೆ.

ಈ ಬಗ್ಗೆ ಕೂಗಾಟ, ಚರ್ಚೆಗಳೆಲ್ಲ ನಡೆದು ಇಡೀ ದೇಶ ತಣ್ಣಗಾಗಿದೆ. ಭಾರತೀಯರನ್ನು ಭಾರತದಲ್ಲೇ ಇರಿಸುವ, ಇಲ್ಲೇ ನಿಮ್ಮ ಪ್ರತಿಭೆಗೆ ತಕ್ಕ ಕೆಲಸ, ಗೌರವ, ಪ್ರತಿಫ‌ಲ ಸಿಗುತ್ತದೆ ಎಂಬ ಭರವಸೆ ನೀಡುವ ಅವಕಾಶ ಇದೆಯಾ?

ಇದೆ. ಕೇವಲ ಸಾಫ್ಟ್ವೇರ್‌ ಕ್ಷೇತ್ರ ಮಾತ್ರವಲ್ಲ, ಇನ್ನಿತರ ಹಲವು ಕ್ಷೇತ್ರ ಗಳಲ್ಲಿ ನಿಮ್ಮ ಪ್ರತಿಭೆಗೆ ವೇದಿಕೆಯಿದೆ, ಅದಕ್ಕೆ ತಕ್ಕ ವೇತನವೂ ಇದೆ. ನೀವು ವಿದೇಶಗಳಿಗೆ ಹಾರಬೇಕಿಲ್ಲ ಎಂಬ ಭರವಸೆಯನ್ನು ಇಸ್ರೋ ನೇರವಾಗಿ ರವಾನಿಸಿದೆ. ಈ ವಿಷಯ ಇವತ್ತಲ್ಲ, ನಾಳೆ ಭಾರತೀಯರಿಗೆ ಮನದಟ್ಟಾ ಗುತ್ತದೆ. ಇದು ಹಲವು ಕ್ಷೇತ್ರಗಳಲ್ಲಿ ಸ್ವಾವಲಂಬಿತನದ, ಆತ್ಮನಿರ್ಭರತೆಯ ಪ್ರೇರಣೆ ನೀಡುತ್ತದೆ. ಭಾರತದ ಬದಲಾವಣೆ ಯಾರ ಬೋಧನೆಯ ಹಂಗಿಲ್ಲದೇ ಆಂತರಂಗಿಕವಾಗಿ ನಡೆಯುವುದು ಖಾತ್ರಿ.
ಭಾರತೀಯರಿಗೆ ಪ್ರಸ್ತುತ ಬೇಕಿರುವುದು ಬಲವಾದ ಆತ್ಮವಿಶ್ವಾಸ ಮತ್ತು ಅವಕಾಶ. ಮುಂದೆ ಅವಕಾಶಗಳು ಸೃಷ್ಟಿಯಾದರೆ ಕೆಲವೇ ವರ್ಷಗಳಲ್ಲಿ ಪ್ರತಿಯೊಬ್ಬರ ಅಂತರಾಳದಿಂದ ಮೇರಾ ಭಾರತ್‌ ಮಹಾನ್‌ ಎಂಬ ಮಾತು ಕೇಳಿಬರುತ್ತದೆ. ಇಸ್ರೋ ಅದಕ್ಕೆ ಮುನ್ನುಡಿ ಬರೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next