Advertisement

ನೀರಿನ ನಿರ್ವಹಣೆಗೆ ಇಸ್ರೋ ಕಾಳಜಿ

11:31 AM Nov 10, 2017 | Team Udayavani |

ಬೆಂಗಳೂರು: ಸಮಗ್ರವಾದ “ರಾಷ್ಟ್ರೀಯ ಜಲ ಸಂಪನ್ಮೂಲ ಮಾಹಿತಿ ವ್ಯವಸ್ಥೆ’ಯೊಂದನ್ನು ಅಭಿವೃದ್ಧಿಪಡಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ವಿವಿಧ ರಾಜ್ಯಗಳಿಗೂ ಅನ್ವಯ ಆಗುವಂತೆ ಈ ವ್ಯವಸ್ಥೆಯನ್ನು ರೂಪಿಸಲು ಉದ್ದೇಶಿಸಿದೆ. 

Advertisement

ನೀರಿನ ಪರಿಣಾಮಕಾರಿ ನಿರ್ವಹಣೆ ಹಾಗೂ ಅದಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮಗ್ರವಾದ ಒಂದು ರಾಷ್ಟ್ರೀಯ ಜಲಸಂಪನ್ಮೂಲ ಮಾಹಿತಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ಇದನ್ನು ರಾಜ್ಯಮಟ್ಟಕ್ಕೂ ಅನ್ವಯ ಆಗುವಂತೆ ರೂಪಿಸಲು ಉದ್ದೇಶಿಸಲಾಗಿದೆ ಎಂದು ಇಸ್ರೋ ಅಧ್ಯಕ್ಷ ಡಾ.ಎ.ಎಸ್‌. ಕಿರಣ್‌ ಕುಮಾರ್‌ ತಿಳಿಸಿದರು. 

ನಗರದ ಜ್ಞಾನಭಾರತಿ ಆವರಣದ ಎಚ್‌.ಎನ್‌. ಸಭಾಂಗಣದಲ್ಲಿ ಗುರುವಾರ ಭೂಗೋಳಶಾಸ್ತ್ರ ಮತ್ತು ಭೌಗೋಳಿಕ ಮಾಹಿತಿ ವಿಭಾಗ ಹಾಗೂ ಕೇಂದ್ರ ಭೌಗೊಳಿಕ ಮಾಹಿತಿ ತಂತ್ರಜ್ಞರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಹವಾಮಾನ ಬದಲಾವಣೆ ಮತ್ತು ಸುಸ್ಥಿರ ಜಲಸಂಪನ್ಮೂಲ ನಿರ್ವಹಣೆ- ವಿನೂತನ ಪರಿಹಾರ’ ಕುರಿತ 6ನೇ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. 

ಈಗಾಗಲೇ ಆಂಧ್ರ ಪ್ರದೇಶದಲ್ಲಿ ಜಲಸಂಪನ್ಮೂಲ ನಿರ್ವಹಣಾ ವ್ಯವಸ್ಥೆ ರೂಪಿಸಲಾಗಿದೆ. ಇದರಲ್ಲಿ ವಾಡಿಕೆ ಮಳೆ, ಹರಿದುಹೋಗುವ ನೀರು, ಸಂಗ್ರಹವಾಗುವ ನೀರಿನ ಸಾಮರ್ಥ್ಯ ಸೇರಿದಂತೆ ಪ್ರತಿಯೊಂದು ಮಾಹಿತಿ ಕ್ರೋಢಿಕರಿಸಲಾಗಿದೆ. ಈ ವ್ಯವಸ್ಥೆಯಿಂದ ನೀರಿನ ನಿರ್ವಹಣೆಗೆ ಸಂಬಂಧಿಸಿದಂತೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುಕೂಲ ಆಗಲಿದೆ ಎಂದು ತಿಳಿಸಿದರು. 

ಉಪಗ್ರಹ ಉಡಾವಣೆಗೆ ಸೀಮಿತವಾಗಿಲ್ಲ: ಇಸ್ರೋ ಕೇವಲ ಉಪಗ್ರಹಗಳ ಉಡಾವಣೆ ಹಾಗೂ ಬಾಹ್ಯಾಕಾಶದಲ್ಲಿನ ಮಾಹಿತಿಗಳ ರವಾನೆಗೆ ಸೀಮಿತವಾಗಿಲ್ಲ. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಸಮರ್ಪಕ ನಿರ್ವಹಣೆಯಲ್ಲೂ ಇಸ್ರೋ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದ ಕಿರಣ್‌ ಕುಮಾರ್‌,

Advertisement

“ಭುವನ್‌’ ಅಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ, ಪ್ರಧಾನಮಂತ್ರಿ ಕೃಷಿ ಸಿಂಚಯೀ ಯೋಜನೆ, ನೀಲಿಕ್ರಾಂತಿ ಸೇರಿದಂತೆ ವಿವಿಧ ಯೋಜನೆಗಳಡಿ ಕೈಗೆತ್ತಿಕೊಂಡ ನೀರಿನ ಸಂರಕ್ಷಣೆ, ನದಿ ಕಣಿವೆಗಳ ಅಭಿವೃದ್ಧಿ ಮತ್ತಿತರ ಕಾರ್ಯಕ್ರಮಗಳ ನಿರ್ವಹಣೆಗೆ ಸಂಬಂಧಿಸಿದಂತೆ ವೆಬ್‌ ಅಪ್ಲಿಕೇಷನ್‌ಗಳನ್ನು ಅಭಿವೃದ್ಧಿಪಡಿಸಿದೆ ಎಂದು ವಿವರಿಸಿದರು. 

ನರೇಗಾ ನಿರ್ವಹಣೆಗೂ ತಂತ್ರಜ್ಞಾನ: ಇಸ್ರೋ ನಿದೇರ್ಶಕ (ನ್ಯಾಷನಲ್‌ ರಿಮೋಟ್‌ ಸೆನ್ಸಿಂಗ್‌ ಸೆಂಟರ್‌) ಡಾ.ವೈ.ವಿ.ಎನ್‌.ಕೃಷ್ಣಮೂರ್ತಿ ಮಾತನಾಡಿ, ಜಿಯೊ ಸ್ಪೇಷಿಯಲ್‌ ತಂತ್ರಜ್ಞಾನದಿಂದ ದೇಶಾದ್ಯಂತ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿ 2.4 ಕೋಟಿ ಆಸ್ತಿಗಳ ಪೈಕಿ ಕೇವಲ ಎರಡು ತಿಂಗಳಲ್ಲಿ ಒಂದು ಕೋಟಿ ಆಸ್ತಿಗಳನ್ನು ಗುರುತಿಸಲಾಗಿದೆ ಎಂದು ಹೇಳಿದರು. 

ಯಾವ ಜಾಗದಲ್ಲಿ ಎಷ್ಟು ಕಾಮಗಾರಿ ನಡೆದಿದೆ? ಎಷ್ಟು ಬಾಕಿ ಇದೆ? ಕಾಮಗಾರಿ ಆರಂಭಿಸಿದ ದಿನ ಮತ್ತು ಪೂರ್ಣಗೊಳಿಸಿದ ದಿನ, ಕಾಮಗಾರಿ ಪೂರೈಸಿದ ರೈತರು ಸೇರಿದಂತೆ ಪ್ರತಿಯೊಂದು ಈ ವ್ಯವಸ್ಥೆಯಿಂದ ಪಡೆಯಬಹುದು. ಇದರಿಂದ ಪುನರಾವರ್ತನೆ ಆಗುವುದು ಹಾಗೂ ಆ ಮೂಲಕ ಸರ್ಕಾರದ ಹಣ ಪೋಲು ಆಗುವುದನ್ನು ತಡೆಗಟ್ಟಬಹುದು ಎಂದು ತಿಳಿಸಿದರು. 

ಬೆಂಗಳೂರು ವಿವಿ ಕುಲಪತಿ ಪ್ರೊ.ಎಚ್‌.ಎನ್‌. ರಮೇಶ್‌, ಕುಲಸಚಿವ ಪ್ರೊ.ಬಿ.ಕೆ. ರವಿ, ಅಮೆರಿಕದ ಕ್ಯಾಲಿಫೋರ್ನಿಯ ವಿವಿಯ ಪ್ರೊ.ಕೀತ್‌ ಕ್ಲಾರ್ಕ್‌ ಮತ್ತಿತರರು ಉಪಸ್ಥಿತರಿದ್ದರು. 

ಡಿಸೆಂಬರ್‌ಗೆ ಉಡಾವಣೆ: ಪಿಎಸ್‌ಎಲ್‌ವಿ ರಾಕೆಟ್‌ ಮೂಲಕ ಕಾರ್ಟೊಸ್ಯಾಟ್‌-2 ಸರಣಿಯ ಉಪಗ್ರಹ ಡಿಸೆಂಬರ್‌ ಮಧ್ಯಭಾಗದಲ್ಲಿ ಉಡಾವಣೆ ಆಗಲಿದೆ ಎಂದು ಇಸ್ರೋ ಅಧ್ಯಕ್ಷ ಕಿರಣ್‌ ಕುಮಾರ್‌ ತಿಳಿಸಿದರು. ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸೆಂಬರ್‌ ತಿಂಗಳ ಮಧ್ಯಭಾಗದಲ್ಲಿ ಕಾರ್ಟೊಸ್ಯಾಟ್‌-2 ಸರಣಿಯ ಮೂರನೇ ಉಪಗ್ರಹ ಉಡಾವಣೆ ಮಾಡಲು ಉದ್ದೇಶಿಸಲಾಗಿದೆ.

ಅಲ್ಲದೆ, “ಚಂದ್ರಯಾನ’ 2018ರ ಆರಂಭದಲ್ಲಿ ಉಡಾವಣೆ ಆಗಲಿದೆ ಎಂದು ಮಾಹಿತಿ ನೀಡಿದರು. ಡಿಸೆಂಬರ್‌ನಲ್ಲಿ ಉಡಾವಣೆ ಮಾಡಲಿರುವುದು ಕಾರ್ಟೊಸ್ಯಾಟ್‌-2 ಸರಣಿಯ ಮೂರನೇ ಉಪಗ್ರಹ. ಕಳೆದ ಫೆಬ್ರುವರಿಯಲ್ಲಿ ಇಸ್ರೋ, ಪಿಎಸ್‌ಎಲ್‌ವಿಸಿ-37 ರಾಕೆಟ್‌ ಮೂಲಕ ಕಾರ್ಟೊಸ್ಯಾಟ್‌-2 ಸರಣಿಯ ಮೊದಲ ಉಪಗ್ರಹವನ್ನು ಕಕ್ಷೆಗೆ ಸೇರಿಸಿತ್ತು. ಈ ಸಂದರ್ಭದಲ್ಲಿ ಈ ಉಪಗ್ರಹದೊಂದಿಗೆ ಇತರ 103 ಪುಟ್ಟ ಉಪಗ್ರಹಗಳನ್ನೂ ಕಳುಹಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next