ತಿರುಪತಿ : ಇಸ್ರೋ ಅಧ್ಯಕ್ಷ ಕೆ ಶಿವನ್ ಅವರು ಪಿಎಸ್‌ಎಲ್‌ವಿ-ಸಿ-46 ಉಪಗ್ರಹ ಉಡಾವಣೆಯ ಮುನ್ನಾ ದಿನವಾದ ಇಂದು ಮಂಗಳವಾರ ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ PSLV-C 46 ಉಪಗ್ರಹದ ಪ್ರತಿಕೃತಿಯನ್ನು ತಮ್ಮೊಂದಿಗೆ ಒಯ್ದು ಈ ಉಪಗ್ರಹದ ಯಶಸ್ವೀ ಅಭಿಯಾನಕ್ಕಾಗಿ ಪೂಜೆ-ಪ್ರಾರ್ಥನೆ ನಡೆಸಿದರು.
ನಾಳೆ ಬುಧವಾರ ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಶ್ರೀಹರಿಕೋಟದಿಂದ ಪಿಎಸ್‌ಎಲ್‌ವಿ-ಸಿ-46 ಉಪಗ್ರಹ ಉಡಾವಣೆಯನ್ನು ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನ ಸಂಸ್ಥೆಯಾಗಿರುವ ಇಸ್ರೋ ಕೈಗೊಳ್ಳಲಿದೆ.
ಕೆಲ ದಿನಗಳ ಹಿಂದೆ ಇಸ್ರೋ ತಾನು ಮೇ 22ರಂದು ಭೂ ಪರಿವೀಕ್ಷಣೆಯ ರೇಡಾರ್ ಇಮೇಜಿಂಗ್ ಉಪಗ್ರಹ ಆರ್‌ಐಸ್ಯಾಟ್-2ಬಿ ಯನ್ನು ಪಿಎಸ್‌ಎಲ್‌ವಿ-ಸಿ46 ಮೂಲಕ ಬಾಹ್ಯಾಕಾಶಕ್ಕೆ ಕಳುಹಿಸುವುದಾಗಿ ಹೇಳಿತ್ತು.
ಆ ಪ್ರಕಾರ ಪಿಎಸ್‌ಎಲ್‌ವಿ ಸಿ46 ಉಡಾವಣೆಯು ನಾಳೆ ಬುಧವಾರ ಮೇ 22ರಂದು ನಸುಕಿನ 5.27ರ ವೇಳೆಗೆ ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿನ ಸತೀಶ್ ಧವನ್ ಬಾಹ್ಯಾಕೇಶ ಕೇಂದ್ರದಿಂದ ನಡೆಯಲಿದೆ. ಆದರೆ ಇದು ಹವಾಮಾನ ಸ್ಥಿತಿಗತಿಯನ್ನು ಅವಲಂಬಿಸಿರುತ್ತದೆ ಎಂದು ಇಸ್ರೋ ಟ್ವೀಟ್ ಮಾಡಿದೆ.