ಹೊಸದಿಲ್ಲಿ: ಮಾನವ ಸಹಿತ ರಾಕೆಟ್ ಉಡಾವಣೆ ಮಾಡುವ ಭಾರತದ ಕನಸು ಹತ್ತಿರವಾಗುವ ಕಾಲ ಬಂದಿದೆ. ಏಷ್ಯಾ ವಲಯದ 200 ಆನೆಗಳಷ್ಟು ಭಾರವಿರುವ ದೈತ್ಯ ಸಾಮರ್ಥ್ಯದ, ದೇಶದ ನೆಲದಲ್ಲೇ ಅಭಿವೃದ್ಧಿಪಡಿಸಲಾದ ಬಾಹ್ಯಾಕಾಶ ರಾಕೆಟ್ ಪರೀಕ್ಷಾರ್ಥ ಉಡಾವಣೆಗೆ ಇಸ್ರೋ ಸಿದ್ಧತೆ ನಡೆಸಿದೆ. ಜಿಎಸ್‌ಎಲ್‌ವಿ ಎಂಕೆ-3 ರಾಕೆಟ್ ಜೂನ್ 5ರಂದು ನಭಕ್ಕೆ ಚಿಮ್ಮಲಿದೆ. ಈ ರಾಕೆಟ್‌ನ ಉಡಾವಣೆ ಯಶಸ್ವಿಯಾದಲ್ಲಿ ಮುಂದಿನ ದಿನಗಳಲ್ಲಿ ತನ್ನದೇ ನೆಲದಿಂದ ಮಾನವನನ್ನು ಬಾಹ್ಯಾ ಕಾಶಕ್ಕೆ ಕಳುಹಿಸಿಕೊಡುವ ಶಕ್ತಿ ಭಾರತದ್ದಾಗಲಿದೆ. ಈ ಮೂಲಕ ಭಾರತವೂ ವಿಶ್ವದ ಅಗ್ರ ಪಂಕ್ತಿಯ ಸ್ಪೇಸ್ ಕ್ಲಬ್ ರಾಷ್ಟ್ರಗಳಾದ ರಷ್ಯಾ, ಅಮೆರಿಕ ಮತ್ತು ಚೀನ ಸಾಲಿಗೆ ಸೇರಲಿದೆ.
ಜಿಯೋ ಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮಾರ್ಕ್ 3 (ಜಿಎಸ್‌ಎಲ್‌ವಿ ಎಂಕೆ-3) ರಾಕೆಟ್ ಈಗಾಗಲೇ ಆಂಧ್ರ ಪ್ರದೇಶದಲ್ಲಿರುವ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪರೀಕ್ಷಾರ್ಥ ಉಡಾವಣೆಗೆ ಸಜ್ಜುಗೊಂಡಿದೆ. ಈ ರಾಕೆಟ್‌ನ ಒಟ್ಟಾರೆ ಭಾರ ಅಂದಾಜು 640 ಟನ್ ಇರಲಿದೆ. ಅಂದರೆ ಪೂರ್ತಿ ಭರ್ತಿಯಾದ ಜಂಬೋ ಜೆಟ್ ವಿಮಾನದ ಐದು ಪಟ್ಟು ಭಾರ ಹೊಂದಿರಲಿದೆ. 1993ರಲ್ಲಿ ಜಿಎಸ್‌ಎಲ್‌ವಿ ಸರಣಿಯ ಮೊದಲ ರಾಕೆಟ್ ಉಡಾವಣೆ ವಿಫಲವಾಗಿತ್ತು. ಆದರೆ ಅನಂತರ ಇದು ಹಿಂದಿರುಗಿ ನೋಡಿದ್ದೇ ಇಲ್ಲ. ಇದುವರೆಗೆ 38 ರಾಕೆಟ್‌ಗಳನ್ನು ಉಡಾವಣೆ ಮಾಡಿ ಯಶಸ್ಸಿನ ಇತಿಹಾಸ ಬರೆದಿದೆ.
ಬಾಹ್ಯಾಕಾಶಕ್ಕೆ ರಾಕೆಟ್ ಉಡಾವಣೆ ಸಾಕಷ್ಟು ಕ್ಲಿಷ್ಟಕರವಾದ ಪ್ರಕ್ರಿಯೆಯಾಗಿದ್ದು, ಅಮೆರಿಕ, ಫ್ರಾನ್ಸ್, ಜಪಾನ್ ಸಹಿತ ಅನೇಕ ರಾಷ್ಟ್ರಗಳು ಹಾಗೂ ಖಾಸಗಿ ಕಂಪೆನಿಗಳು ನಡೆಸಿರುವ ಉಡಾವಣೆಗಳೂ ವಿಫಲಗೊಂಡಿವೆ. ಅಮೆರಿಕ ‘ಸ್ಪೇಸ್‌ಎಕ್ಸ್’ ನಿರ್ಮಾಣದ ಫಾಲ್ಕಾನ್-9 ಕೂಡ 2016ರಲ್ಲಿ ವಿಫಲಗೊಂಡಿತ್ತು. ಕೇಂದ್ರ ಸರಕಾರವು 2-3 ಶತಕೋಟಿ ಡಾಲರ್ ಅನುದಾನವನ್ನು ಬಿಡುಗಡೆ ಮಾಡಿದರೆ ಎರಡರಿಂದ ಮೂವರು ಸದಸ್ಯರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆಯನ್ನು ಇಸ್ರೋ ಹಾಕಿಕೊಂಡಿದೆ. ವಿಶೇಷವೆಂದರೆ ಮಹಿಳಾ ಸದಸ್ಯೆಯನ್ನೇ ಮೊದಲು ಬಾಹ್ಯಾಕಾಶಕ್ಕೆ ಕಳುಹಿಸಲು ಇಸ್ರೋ ಚಿಂತನೆ ನಡೆಸಿದೆ.
ಏನಿದರ ವಿಶೇಷ?
640 ಟನ್: ರಾಕೆಟ್‌ನ ಒಟ್ಟಾರೆ ಭಾರ
43.43 ಮೀ.: ನೌಕೆಯ ಎತ್ತರ
4 ಮೀ.: ನೌಕೆಯ ಸುತ್ತಳತೆ
4 ಟನ್: ಭಾರ ಹೊತ್ತೂಯ್ಯುವ ಸಾಮರ್ಥ್ಯ
300 ಕೋಟಿ ರೂ.: ರಾಕೆಟ್ ಅಭಿವೃದ್ಧಿಗೆ ತಗಲಿರುವ ವೆಚ್ಚ