ಬೆಳಗಾವಿ: ರಾಜ್ಯದಲ್ಲಿ ಕೃಷಿ ಮತ್ತು ತೋಟಗಾರಿಕೆ ವಲಯವನ್ನು ಔದ್ಯಮಿಕ ಎಂದು ಪರಿಗಣಿಸುವುದು ಹಾಗೂ ಜಮೀನು ಒಗ್ಗೂಡಿಸಿ ಸಾಮೂಹಿಕ ಕೃಷಿಗೆ ಒತ್ತು ನೀಡುವಂತೆ ಇಸ್ರೇಲ್ ಮಾದರಿ ಕೃಷಿ ಕುರಿತು ರಚಿಸಲಾಗಿದ್ದ ಉನ್ನತ ಮಟ್ಟದ ಅಧ್ಯಯನ ಸಮಿತಿ ಶಿಫಾರಸು ಮಾಡಿದೆ.
ಇಸ್ರೇಲ್ ಮಾದರಿ ಕೃಷಿ ಕುರಿತು ರಚಿಸಲಾಗಿದ್ದ ಉನ್ನತ ಮಟ್ಟದ ಅಧ್ಯಯನ ಸಮಿತಿಯು ಸೋಮವಾರ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದ್ದು, ರಾಜ್ಯದಲ್ಲಿ ಪ್ರಸ್ತುತ ಅನುಷ್ಟಾನದಲ್ಲಿರುವ ನೀರಾವರಿ ಯೋಜನೆಗಳನ್ನು ಸೂಕ್ಷ್ಮ ನೀರಾವರಿ ಪದ್ಧತಿಗೆ ಬದಲಾಯಿಸುವುದು. ನೀರಾವರಿಗೆ ತ್ಯಾಜ್ಯ ನೀರು ಪುನರ್ ಬಳಕೆ ಮಾಡುವಂತೆ ತಿಳಿಸಿದೆ.
ಕಾಲುವೆ, ಕೆರೆ, ಕೊಳವೆ ಬಾವಿ ಆಧಾರಿತ ಸೂಕ್ಷ್ಮ ನೀರಾವರಿ ಪದ್ಧತಿಗೆ ಆದ್ಯತೆ ನೀಡುವುದು. ಜಲಭದ್ರತಾ ಯೋಜನೆ ರೂಪಿಸುವುದು. ಇಸ್ರೇಲ್ ತಂತ್ರಜ್ಞಾನ ಆಧಾರಿತ ಕೃಷಿ ಪದ್ಧತಿಗಳ ಅನುಷ್ಟಾನಕ್ಕೆ ಔದ್ಯಮಿಕ ಸಂಪನ್ಮೂಲ ಯೋಜನೆಗಳ ಬಳಸುವುದು. ನೀರಾವರಿ ಕ್ಷೇತ್ರಗಳ ಕಾರ್ಯಗಳನ್ನು ಯಾಂತ್ರೀಕೃತಗೊಳಿಸುವುದು. ಸೂಕ್ಷ್ಮ ನೀರಾವರಿ ಪದ್ಧತಿಗೆ ಸಂಬಂಧಿಸಿದ ಇ-ಮಾರುಕಟ್ಟೆ ಅಭಿವೃದ್ಧಿಪಡಿಸುವುದು. ಸೂಕ್ಷ್ಮ ನಿರ್ವಾಹಕಗಳು, ಸಂವೇದಕಗಳು ಹಾಗೂ ಡ್ರೋಣ್ ತಂತ್ರಜ್ಞಾನ ಬಳಸುವುದು ಶಿಫಾರಸಿನಲ್ಲಿ ಸೇರಿದೆ.
ರೈತರ ಉತ್ಪನ್ನಗಳಿಗೆ ಪ್ರಚಾರ ಹಾಗೂ ಮಾರುಕಟ್ಟೆ ಕಲ್ಪಿಸುವುದು. ಉತ್ತಮ ಕೃಷಿ ಪದ್ಧತಿ ಅಳವಡಿಕೆ, ರೈತರ ಕ್ಷೇತ್ರ ಪಾಠಶಾಲೆಗಳ ಸ್ಥಾಪನೆ. ಶೈಕ್ಷಣಿಕ ಕೇಂದ್ರಗಳಲ್ಲಿ ಕೃಷಿ ಕುರಿತ ವಿಶೇಷ ಶಿಕ್ಷಣ ನೀಡಬೇಕು ಎಂದು ಶಿಫಾರಸಿನಲ್ಲಿ ತಿಳಿಸಲಾಗಿದೆ.
ತೋಟಗಾರಿಕೆ ಸಚಿವ ಎಂ.ಸಿ.ಮನಗೊಳಿ, ಕೃಷಿ ಸಚಿವ ಶಿವಶಂಕರರೆಡ್ಡಿ, ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್, ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಉಪಸ್ಥಿತರಿದ್ದರು.