ಜೆರುಸಲೇಂ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಅವರ ಮೇಲೆ ಲಂಚ, ಮೋಸ ಹಾಗೂ ವಿಶ್ವಾಸದ್ರೋಹ ಆರೋಪ ಹೊರಿಸಲಾಗಿದೆ. ಇದರೊಂದಿಗೆ ಮೊದಲ ಬಾರಿಗೆ ಇಸ್ರೇಲ್ ಪ್ರಧಾನಿಯೊಬ್ಬರು ಭ್ರಷ್ಟಾಚಾರದ ಆರೋಪ ಎದುರಿಸುವಂತಾಗಿದೆ ಎಂದು ವರದಿ ತಿಳಿಸಿದೆ.
ದೀರ್ಘಕಾಲ ದೇಶದ ಪ್ರಧಾನಿಯಾಗಿದ್ದ ಬೆಂಜಮಿನ್ ನೆತನ್ಯಾಹು ವಿರುದ್ಧದ ಆರೋಪದ ಕುರಿತು ಸುಮಾರು ಮೂರು ವರ್ಷಗಳ ಕಾಲ ತನಿಖೆ ನಡೆಸಿದ್ದ ಇಸ್ರೇಲ್ ಅಟಾರ್ನಿ ಜನರಲ್ ಅವಿಚಾಯ್ ಮಂಡೆಲ್ ಬ್ಲಿಟ್ ಸುಮಾರು 63 ಪುಟಗಳ ಆರೋಪಪಟ್ಟಿಯ ವರದಿ ನೀಡಿದ್ದಾರೆ ಎಂದು ವರದಿ ವಿವರಿಸಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ಮತ್ತು ಪತ್ನಿ ಸಾರಾ ಸುಮಾರು 260,000 ಡಾಲರ್ ನಷ್ಟು ಮೊತ್ತದ ಐಶಾರಾಮಿ ವಸ್ತುಗಳನ್ನು ಸ್ವೀಕರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೇ ತಮ್ಮ ಪರವಾಗಿ ಸುದ್ದಿ ಬಿತ್ತರಿಸಲು ಎರಡು ಮಾಧ್ಯಮ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸಚಿವರಿಗೆ ಆಮಿಷವೊಡ್ಡಿದ್ದಾರೆನ್ನಲಾಗಿದೆ.
ಆದರೆ ತನ್ನ ವಿರುದ್ಧದ ಆರೋಪಗಳನ್ನು ಬೆಂಜಮಿನ್ (70ವರ್ಷ) ತಳ್ಳಿಹಾಕಿದ್ದಾರೆ. ರಾಜಕೀಯ ಪ್ರೇರಿತವಾಗಿ ಇಂತಹ ಆರೋಪ ಹೊರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಪ್ರಧಾನಿ ಬೆಂಜಮಿನ್ ಅವರ ವಿರುದ್ಧದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಕಾನೂನು ತಜ್ಞರು ಪ್ರಾಸಿಕ್ಯೂಟರ್ ಮುಂದೆ ಸುಮಾರು ನಾಲ್ಕು ದಿನಗಳ ಕಾಲ ಮ್ಯಾರಥಾನ್ ವಾದ ಮಂಡಿಸಿದ್ದರು.
ಬೆಂಜಮಿನ್ ನೆತನ್ಯಾಹು ಅವರು ಸತತ 5ನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗುವ ಮೂಲಕ ದಾಖಲೆ ಬರೆದಿದ್ದರು. ವಿರೋಧ ಪಕ್ಷದ ಪ್ರಧಾನಿ ಅಭ್ಯರ್ಥಿ ಬೆನ್ನಿ ಗ್ಯಾಂಟ್ಸ್ ಪರಾಜಯಗೊಂಡಿದ್ದರು. ಕಳೆದ ಚುನಾವಣೆಯಲ್ಲಿ 120 ಸದಸ್ಯ ಬಲದ ಇಸ್ರೇಲ್ ನಲ್ಲಿ 65 ಸದಸ್ಯ ಬಲದೊಂದಿಗೆ ನೆತನ್ಯಾಹು ಅಧಿಕಾರದ ಗದ್ದುಗೆ ಏರಿದ್ದರು.