Advertisement
ಈ ವಾರಂಟನ್ನು ಅಮೆರಿಕದ ಪ್ರಾಸಿಕ್ಯೂಟರ್‌ಗಳು ಭಾರತದ ಕಾನೂನು ಜಾರಿ ಅಧಿಕಾರಿಗಳಿಗೆ ಹಸ್ತಾಂತರಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಈ ಎಲ್ಲ ಆರೋಪಗಳನ್ನೂ ಅದಾನಿ ಗ್ರೂಪ್ ನಿರಾಕರಿಸಿದ್ದು, ಇವೆಲ್ಲವೂ ಆಧಾರರಹಿತ ಆರೋಪಗಳಾಗಿದ್ದು, ಇದರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಹೇಳಿದೆ. 2 ವರ್ಷಗಳ ಹಿಂದೆ ಅಮೆರಿಕದ ಹಿಂಡನ್‌ಬರ್ಗ್ ರಿಸರ್ಚ್ ಕೂಡ ಅದಾನಿ ವಿರುದ್ಧ ಅವ್ಯವಹಾರದ ಆರೋಪ ಮಾಡಿತ್ತು.
Related Articles
Advertisement
ವಿಶೇಷವೆಂದರೆ ಅಮೆರಿಕದ ಷೇರು ಮತ್ತು ವಿನಿಮಯ ಆಯೋಗ (ಭಾರತದ ಸೆಬಿ ಮಾದರಿ ಸಂಸ್ಥೆ)ವು ಅದಾನಿ ವಿರುದ್ಧ ನೀಡಿದ 41 ಪುಟಗಳ ದೂರಿನಲ್ಲಿ ಆಂಧ್ರಪ್ರದೇಶದ ಮಾಜಿ ಸಿಎಂ ಜಗನ್ ರೆಡ್ಡಿ ಹೆಸರನ್ನು ಪರೋಕ್ಷವಾಗಿ ಉಲ್ಲೇಖೀಸಿದೆ. “2021ರಲ್ಲಿ ಅದಾನಿ ಅವರು ಆಂಧ್ರದ ಅಂದಿನ ಸಿಎಂ ಅನ್ನು ಭೇಟಿಯಾದ ಬಳಿಕ 1,750 ಕೋಟಿ ರೂ. ಲಂಚ ಪಾವತಿಸಲಾಯಿತು’ ಎಂದು ಅದರಲ್ಲಿ ಉಲ್ಲೇಖೀಸಲಾಗಿದೆ. ಅದಾನಿ ಅವರು ಆಂಧ್ರ ಸಿಎಂ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿ ಎಸ್‌ಇಸಿಐ ಜತೆ ವಿದ್ಯುತ್ ಪೂರೈಕೆ ಒಪ್ಪಂದ ಮಾಡಿಕೊಳ್ಳುವಂತೆ ಕೇಳಿಕೊಂಡರು. ಅದಕ್ಕೆ ಪ್ರತಿಯಾಗಿ 1,750 ಕೋಟಿ ರೂ. ಲಂಚ ನೀಡುವ ಒಪ್ಪಂದಕ್ಕೆ ಬಂದರು. ಅದರಂತೆ ಸರಕಾರವು ಎಸ್‌ಇಸಿಐನಿಂದ 7,000 ಮೆ.ವ್ಯಾ. ವಿದ್ಯುತ್ ಖರೀದಿಗೆ ಮುಂದಾಯಿತು ಎಂದು ಆರೋಪಿಸಲಾಗಿದೆ. ಜತೆಗೆ ಒಡಿಶಾ ಸರಕಾರಕ್ಕೆ ನೀಡಿದ ಲಂಚಕ್ಕಿಂತ ಹೆಚ್ಚಿನ ಮೊತ್ತವನ್ನು ಆಂಧ್ರಕ್ಕೆ ನೀಡಲಾಗಿತ್ತು ಎಂದೂ ಉಲ್ಲೇಖೀಸಲಾಗಿದೆ.
ಅಮೆರಿಕದ ಹೂಡಿಕೆದಾರರಿಗೆ ವಂಚನೆ
ಗೌತಮ್ ಅದಾನಿ, ಅವರ ಸೋದರಳಿಯ ಸಾಗರ್ ಅದಾನಿ ಮತ್ತು ಅದಾನಿ ಗ್ರೀನ್ ಎನರ್ಜಿಯ ಮಾಜಿ ಸಿಇಒ ವಿನೀತ್ ಜೈನ್ ತಮ್ಮ ಭ್ರಷ್ಟಾಚಾರದ ವಿಚಾರವನ್ನು ಸಾಲಗಾರರು ಹಾಗೂ ಹೂಡಿಕೆದಾರರಿಂದ ಮುಚ್ಚಿಟ್ಟು, 25300 ಕೋಟಿ ರೂ. (ಸಾಲ ಮತ್ತು ಬಾಂಡ್‌ಗಳ ರೂಪದಲ್ಲಿ) ಸಂಗ್ರಹಿಸಿದ್ದಾರೆ ಎಂದೂ ಆರೋಪಿಸಲಾಗಿದೆ. ಅದಾನಿ ಗ್ರೀನ್ ಸಂಸ್ಥೆ ಲಂಚ ವಿರೋಧಿ ನಿಯಮಗಳನ್ನು ಪಾಲಿಸುತ್ತ ಬಂದಿದ್ದು, ಯಾರಿಗೂ ಲಂಚ ನೀಡುವುದಿಲ್ಲ ಎಂದು ಸುಳ್ಳು ಹೇಳಿ ಅಮೆರಿಕದ ಹೂಡಿಕೆದಾರರ ಮನವೊಲಿಸಿ ಕಂಪೆನಿಯ ಬಾಂಡ್ ಖರೀದಿಸುವಂತೆ ಮಾಡಿದ್ದರು ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ಈ ಮೂವರ ವಿರುದ್ಧ ಷೇರು ವಂಚನೆ ಹಾಗೂ ಅಮೆರಿಕದ ಕಾನೂನು ಉಲ್ಲಂಘನೆ ಆರೋಪ ಹೊರಿಸಲಾಗಿದೆ. ಇದೇ ವೇಳೆ ಕೆನಡಾದ ಪಿಂಚಣಿ ನಿಧಿ ಸಿಡಿಪಿಕ್ಯು (ಅದಾನಿ ಕಂಪೆನಿಯ ಷೇರು ಹೊಂದಿರುವ ಸಂಸ್ಥೆ)ನ 3 ಮಾಜಿ ಉದ್ಯೋಗಿಗಳ ವಿರುದ್ಧವೂ ದೋಷಾರೋಪ ನಿಗದಿಪಡಿಸಲಾಗಿದೆ. ಲಂಚಕ್ಕೆ ಸಂಬಂಧಿಸಿದ ಇಮೇಲ್‌ಗಳನ್ನು ಡಿಲೀಟ್ ಮಾಡಿದ, ಅಮೆರಿಕ ಸರಕಾರಕ್ಕೆ ಸುಳ್ಳು ಮಾಹಿತಿ ನೀಡುವ ಮೂಲಕ ಲಂಚದ ಕುರಿತ ತನಿಖೆಗೆ ಅಡ್ಡಿಪಡಿಸಿದ ಆರೋಪ ಇವರ ಮೇಲಿದೆ.
ಅಮೆರಿಕದಲ್ಲಿ ಪ್ರಕರಣ ಏಕೆ?
ಪ್ರಕರಣಕ್ಕೆ ಸಂಬಂಧಿಸಿದ ಕ್ರಿಮಿನಲ್ ಚಟುವಟಿಕೆಗಳು ಭಾರತದಲ್ಲೇ ನಡೆದಿದ್ದರೂ ಲಂಚ ಹಾಗೂ ವಂಚನೆಗೆ ಸಂಬಂಧಿಸಿದ ಕೆಲವು ಪ್ರಕ್ರಿಯೆಗಳು ನ್ಯೂಯಾರ್ಕ್‌ನಲ್ಲಿ ನಡೆದಿವೆ. ಅಲ್ಲದೆ ಅದಾನಿ ವಂಚಿಸಿರುವ ಹೂಡಿಕೆದಾರರು ಕೂಡ ಅಮೆರಿಕನ್ನರು. ಅಮೆರಿಕದ ಹೂಡಿಕೆದಾರರು ಮತ್ತು ಜಾಗತಿಕ ಹಣಕಾಸು ಸಂಸ್ಥೆಗಳಿಂದ ಬಂಡವಾಳ ಪಡೆಯುವ ಸಲುವಾಗಿ ಅದಾನಿ ಕಂಪೆನಿಯು ಸುಳ್ಳು ಹಾಗೂ ಹಾದಿ ತಪ್ಪಿಸುವ ಭರವಸೆ ನೀಡಿದೆ ಎಂಬ ಆರೋಪವಿದೆ. ಅಮೆರಿಕದ ಕಾನೂನಿನ ಪ್ರಕಾರ ವಿದೇಶದಲ್ಲಿ ಭ್ರಷ್ಟಾಚಾರ ನಡೆದಿದ್ದರೂ ಅದಕ್ಕೆ ಅಮೆರಿಕದ ಹೂಡಿಕೆದಾರರು ಅಥವಾ ಮಾರುಕಟ್ಟೆಯೊಂದಿಗೆ ಸಂಬಂಧವಿದ್ದರೆ ಆ ಬಗ್ಗೆ ತನಿಖೆ ನಡೆಸುವ ಅಧಿಕಾರ ಅಲ್ಲಿನ ಪೊಲೀಸರಿಗಿದೆ.
ಬಾಂಡ್ ಮಾರಾಟ ರದ್ದುಗೊಳಿಸಿದ ಅದಾನಿ ಗ್ರೀನ್
ಅಮೆರಿಕ ಕೋರ್ಟ್‌ನಲ್ಲಿ ದೋಷಾರೋಪ ನಿಗದಿ ಬೆನ್ನಲ್ಲೇ ಅದಾನಿ ಸಮೂಹದ ಅದಾನಿ ಗ್ರೀನ್ ಎನರ್ಜಿ ಸಂಸ್ಥೆ ಗುರುವಾರ ತನ್ನ 5,069 ಕೋಟಿ ರೂ. ಮೊತ್ತದ ಬಾಂಡ್ ಮಾರಾಟ ರದ್ದುಗೊಳಿಸಿದೆ. ದೋಷಾರೋಪ ನಿಗದಿಗೆ ಒಂದು ದಿನ ಮುನ್ನ ಗ್ರೀನ್ ಬಾಂಡ್ ಮಾರಾಟ ಮಾಡುವ ಬಗ್ಗೆ ಕಂಪೆನಿ ಘೋಷಿಸಿತ್ತು. ಇದಕ್ಕೆ 3 ಪಟ್ಟು ಅಧಿಕ ಬೇಡಿಕೆ ಬಂದಿತ್ತು. ಆದರೆ ಆರೋಪ ಕೇಳಿಬಂದ ಕೂಡಲೇ ಬಾಂಡ್ ಮಾರಾಟದ ನಿರ್ಧಾರ ವಾಪಸ್ ಪಡೆದಿದೆ.
ಯಾರ್ಯಾರ ವಿರುದ್ಧ ಆರೋಪ?
ಗೌತಮ್ ಅದಾನಿ, ಸೋದರಳಿಯ ಸಾಗರ್ ಅದಾನಿ, ಅದಾನಿ ಗ್ರೀನ್ ಎನರ್ಜಿ ಮಾಜಿ ಸಿಇಒ ವಿನೀತ್ ಜೈನ್, ದಿಲ್ಲಿಯ ಅಝೂÂರ್ ಪವರ್ ಗ್ಲೋಬಲ್‌ನ ಮಾಜಿ ಸಿಇಒ ರಂಜಿತ್ ಗುಪ್ತಾ, ಅದೇ ಕಂಪೆನಿಯ ಮುಖ್ಯ ಕಾರ್ಯತಂತ್ರ ಅಧಿಕಾರಿ ರೂಪೇಶ್ ಅಗರ್ವಾಲ್, ಕೆನಡಾದ ಪಿಂಚಣಿ ನಿಧಿ ಸಿಡಿಪಿಕ್ಯು (ಅದಾನಿ ಕಂಪೆನಿಯ ಷೇರು ಹೊಂದಿರುವ ಸಂಸ್ಥೆ)ನ 3 ಮಾಜಿ ಉದ್ಯೋಗಿಗಳಾದ ಸಿರಿಲ್ ಕ್ಯಾಬನೀಸ್, ಸೌರಭ್ ಅಗರ್ವಾಲ್, ದೀಪಕ್ ಮಲ್ಹೋತ್ರಾ.