Advertisement

ರಷ್ಯಾ ಕಾಪ್ಟರ್‌ಗೆ ಇಸ್ರೇಲ್‌ ಕ್ಷಿಪಣಿ

08:55 AM Apr 26, 2022 | Team Udayavani |

ಭಾರತದ ವಾಯುಪಡೆಯಲ್ಲಿರುವ ರಷ್ಯಾ ನಿರ್ಮಿತ “ಎಂಐ -17ವಿ5′ ಯುದ್ಧ ಹೆಲಿಕಾಪ್ಟರ್‌ಗಳಿಗೆ ಇಸ್ರೇಲ್‌ ನಿರ್ಮಿತ “ನಾನ್‌-ಲೈನ್‌ ಆಫ್ ಸೈಟ್‌’ (ಎನ್‌ಎಲ್‌ಒಎಸ್‌) ತಂತ್ರಜ್ಞಾನವುಳ್ಳ “ಆ್ಯಂಟಿ ಟ್ಯಾಂಕ್‌ ಗೈಡೆಡ್‌’ ಕ್ಷಿಪಣಿಗಳನ್ನು (ಎಟಿಜಿಎಂ) ಅಳವಡಿಸಲು ಭಾರತೀಯ ವಾಯುಪಡೆ ನಿರ್ಧರಿಸಿದೆ.

Advertisement

ಈ ಹಿನ್ನೆಲೆಯಲ್ಲಿ, ಇಸ್ರೇಲ್‌ನಿಂದ ಎಟಿಜಿಎಂಗಳನ್ನು ಕೊಳ್ಳಲು ಐಎಎಫ್ ಮುಂದಾಗಿದೆ. ಆದರೆ, ಉದ್ದೇಶಿತ ಸಂಖ್ಯೆಯಲ್ಲಿ ಕೆಲವನ್ನು ಮಾತ್ರ ಇಸ್ರೇಲ್‌ನಿಂದ ಪಡೆದು, ಇನ್ನುಳಿದ ಅಗತ್ಯಕ್ಕೆ ತಕ್ಕಷ್ಟು ಕ್ಷಿಪಣಿಗಳನ್ನು “ಮೇಕ್‌ ಇನ್‌ ಇಂಡಿಯಾ’ ಅಡಿ ಸ್ವದೇಶದಲ್ಲೇ ತಯಾರಿಸಲು ಐಎಎಫ್ ನಿರ್ಧರಿಸಿದೆ. ಎಂಐ-17 ವಿ5 ಹೆಲಿಕಾಪ್ಟರ್‌ಗಳಿಗೆ ಇಸ್ರೇಲ್‌ನ ಅತ್ಯಾಧುನಿಕ ಹಾಗೂ ಶಕ್ತಿಶಾಲಿ ಕ್ಷಿಪಣಿಗಳನ್ನು ಅಳವಡಿಸಿದ್ದೇ ಆದಲ್ಲಿ, ಪಾಕಿಸ್ಥಾನ, ಚೀನ ಗಡಿ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗಸ್ತು ಪಡೆಗೆ ಹೆಚ್ಚಿನ ಶಕ್ತಿ ತುಂಬಿದಂತಾಗುತ್ತದೆ ಎಂಬುದು ಐಎಎಫ್ನ ನಿರೀಕ್ಷೆ.

ಇದಲ್ಲದೆ, ಉಕ್ರೇನ್‌-ರಷ್ಯಾ ಯುದ್ಧದಿಂದ ಭಾರತ ಕಲಿಯಬೇಕಾದ ಪಾಠಗಳು ಸಾಕಷ್ಟಿವೆ. ನಾವು ಸಾಂಪ್ರದಾಯಿಕ ಯುದ್ಧ ಕೌಶಲಗಳ ಬಗ್ಗೆ ಮಾತ್ರ ಗಮನ ಹರಿಸಿದರೆ ಸಾಲದು, ಆಧುನಿಕ ಯುದ್ಧ ಸ್ವರೂಪಗಳನ್ನು ಅರಿತು ಅವುಗಳನ್ನು ಎದುರಿಸುವ ನಿಟ್ಟಿನಲ್ಲಿ ಸನ್ನದ್ಧರಾಗಬೇಕೆಂದು ಇತ್ತೀಚೆಗೆ ಭಾರತೀಯ ಸೇನಾ ಪಡೆಯ ಮುಖ್ಯಸ್ಥ ಎಂ.ಎಂ. ನರವಣೆ ತಿಳಿಸಿದ್ದರು. ಇದೇ ದೃಷ್ಟಿಕೋನದಲ್ಲಿ ಎಂಐ-17 ವಿ 5 ಹೆಲಿಕಾಪ್ಟರ್‌ಗಳಿಗೆ ಇಸ್ರೇಲ್‌ ಕ್ಷಿಪಣಿಗಳನ್ನು ಬೆಸೆಯುವ ಕೆಲಸಕ್ಕೆ ಮುಂದಡಿಯಿಡಲಾಗಿದೆ.

ರಷ್ಯಾ ತೈಲಾಗಾರಕ್ಕೆ ಬೆಂಕಿ
ಉಕ್ರೇನ್‌ನ ಗಡಿಯಲ್ಲಿರುವ ರಷ್ಯಾದ ತೈಲಾಗಾರದಲ್ಲಿ ಉಂಟಾಗಿರುವ ಅಗ್ನಿ ಆಕಸ್ಮಿಕದಿಂದ ಭಾರತ ಮತ್ತು ರಷ್ಯಾ ನಡುವಿನ ತೈಲ ಸರಬರಾಜು ಪ್ರಮಾಣದಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ ಎಂದು ರಷ್ಯಾ ಸ್ಪಷ್ಟಪಡಿಸಿದೆ. ಉಕ್ರೇನ್‌ ಗಡಿಯಲ್ಲಿರುವ ಬ್ರಿಯಾಂನ್ಸ್‌$Rನಲ್ಲಿನ ತೈಲಾಗಾರಕ್ಕೆ ಸೋಮವಾರ ಬೆಳಗ್ಗೆ ಬೆಂಕಿ ತಗುಲಿದ್ದು, ಅಗ್ನಿಶಾಮಕ ಸಿಬಂದಿ ಬೆಂಕಿಯನ್ನು ನಂದಿಸುವಲ್ಲಿ ದಿನವಿಡೀ ನಿರತರಾಗಿದ್ದರು.

ಮುಂದುವರಿದ‌ ಸಾವಿನ ಸರಣಿ
ರಷ್ಯಾ-ಉಕ್ರೇನ್‌ ಯುದ್ಧ ಆರಂಭವಾದಾಗಿನಿಂದ ರಷ್ಯಾ ಕೋಟ್ಯಧಿಪತಿಗಳ ಸಾವಿನ ಸರಣಿ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ಇಬ್ಬರು ಉದ್ಯಮಿಗಳ ಕುಟುಂಬ ಸಾವಿಗೀಡಾಗಿವೆ. ಬ್ಯಾಂಕಿಂಗ್‌ ದಿಗ್ಗಜ ವ್ಲಾಡಿಸ್ಲವ್‌, ಅವರ ಪತ್ನಿ, ಮಗಳ ಮೃತದೇಹ ಮಾಸ್ಕೋದ ಅಪಾರ್ಟ್‌ ಮೆಂಟ್‌ನಲ್ಲಿ ಪತ್ತೆಯಾಗಿದೆ. ಮೃತದೇಹಗಳ ಮೇಲೆ ಗುಂಡೇಟು ಬಿದ್ದಿರುವುದು ಸಾಬೀತಾಗಿದೆ. ರವಿವಾರವಷ್ಟೇ ಗ್ಯಾಸ್‌ ಎಕ್ಸಿಕ್ಯೂಟಿವ್‌ ಸರ್ಗೆ ಅವರು ತಮ್ಮ ಪತ್ನಿ ಮತ್ತು ಮಗಳನ್ನು ಚೂರಿ ಇರಿದು ಕೊಂದು, ತಾವು ನೇಣಿಗೆ ಶರಣಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next