ಹುತಾತ್ಮರಾದ ಯೋಧರ ಅಂತ್ಯಕ್ರಿಯೆಗೆ ಹೆಗಲು ಕೊಡುವ ಶಹಾಪುರದ ಈಶ್ವರ್, ನಡು ರಾತ್ರಿಯೋ, ಬೆಳಗಿನ ಜಾವವೋ ಬರುವ ಯೋಧರು ವಿಶ್ರಾಂತಿ ತೆಗೆದುಕೊಳ್ಳುವಂತೆ ಏರ್ಪಾಟು ಮಾಡುವ ಯಲಹಂಕದ ಹಂಪಾನಾಯಕರು, ಸೇವೆ ಅಂದರೆ ಹೀಗೂ ಮಾಡಬಹುದು ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ.
ಜೈ ಜವಾನ್, ಜೈ ಕಿಸಾನ್ ಎಂಬ ಘೋಷಣೆ ಎಲ್ಲರಿಗೂ ಗೊತ್ತಿದೆ. ಆದರೆ, ಅದು ಘೋಷಣೆಯಾಗಿ ಉಳಿಯಬಾರದು ಎಂದು ಇಲ್ಲೊಬ್ಬ ಯುವಕ ದಿನನಿತ್ಯ ಸೈನಿಕರನ್ನು ಸ್ಮರಿಸುವ ಹಾಗೂ ಅವರ ಹುತಾತ್ಮ ಕ್ರಿಯೆಗಳಲ್ಲಿ ಪಾಲ್ಗೊಳ್ಳುವ ಮೂಲಕ ದೇಶಪ್ರೇಮ ಮೆರೆಯುತ್ತಿದ್ದಾನೆ. ಯಾರು ಅಂತೀರಾ!ಅವನೇ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ತಡಿಬಿಡಿ ಗ್ರಾಮದ ಈಶ್ವರ್. ರಾಜ್ಯದ ಯಾವುದೇ ಮೂಲೆಯಲ್ಲಿ ಯೋಧ ಹುತಾತ್ಮನಾದ ಸುದ್ದಿ ಕಿವಿಗೆ ಬಿದ್ದರೆ ಸಾಕು, ಅಲ್ಲಿ ಈಶ್ವರ್ ಹಾಜರ್. ಕೂಲಿ ಮಾಡಿ ಜೀವನ ನಡೆಸುವ ಇವರು, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರಿಗೆ ಗೌರವ ಸೂಚಿಸಲು ತಾನು ಕೊಡಿಟ್ಟ ಹಣವನ್ನು ಖರ್ಚುಮಾಡುತ್ತಾರೆ.
ಬಾಯಿಮಾತಲ್ಲಿ ,ಫೇಸ್‌ಬುಕ್, ವ್ಯಾಟ್ಯಾಪ್‌ಗ್ಳಲ್ಲಿ ಲೈಕ್ ಮಾಡುವುದರ ಮೂಲಕ ಶ್ರದ್ಧಾಂಜಲಿ ಸೂಚಿಸುವವರು ಅನೇಕರಿದ್ದಾರೆ. ಆದರೆ, ಈಶ್ವರ್ ಮಾತ್ರ ಖುದ್ದು ಹಾಜರಾಗಿ ಪಾರ್ಥಿವ ಶರೀರಕ್ಕೆ ಹೂಮಾಲೆ ಆರ್ಪಿಸಿ, ಶ್ರದ್ಧಾಂಜಲಿ ಸಲ್ಲಿಸಿ, ಯೋಧರ ಮೆರವಣಿಗೆಗೆ ಬೇಕಾದ ಸಣ್ಣ ಪುಟ್ಟ ಕಾರ್ಯಗಳನ್ನು ಮಾಡಿಕೊಡುತ್ತಾರೆ. ಅವರ ತಂದೆ-ತಾಯಿಗೆ ಸಾಂತ್ವನದ ಹೇಳಿ ಬರುತ್ತಾರೆ. ಇಷ್ಟೇ ಅಲ್ಲ, ಅವರ ಜೊತೆ ನಿರಂತರ ಸಂಪರ್ಕದಲ್ಲಿರುತ್ತಾರೆ ಈಶ್ವರ್. ಸತತ 15 ವರ್ಷಗಳಿಂದ, ನೂರಾರು ಯೋಧರ ಅಂತಿಮ ಯಾತ್ರೆಗಳಲ್ಲಿ ಈಶ್ವರ್ ಪಾಲ್ಗೊಂಡಿದ್ದಾರೆ.
“ಒಮ್ಮೆ ಯೋಧನ ಪಾರ್ಥಿವ ಶರೀರ ತರುತ್ತಿರುವ ವಿಷಯ ತಿಳಿಯಿತು. ಕೂಡಲೇ ಹಾಸನಕ್ಕೆ ಹೊರಟೆ. ಆದರೆ, ಕೈಯಲ್ಲಿ ಬಿಡಿಗಾಸೂ ಇರಲಿಲ್ಲ, ಆದರೆ, ಆ ಯೋಧನನ್ನು ಕಾಣಬೇಕೆಂಬ ತುಡಿತವಿತ್ತು. ಸೈಕಲ್ಲಿನಲ್ಲಿಯೇ ಹೊರಟು ರಾಯಚೂರು ಜಿಲ್ಲೆಯ ಲಿಂಗಸುಗೂರಿಗೆ ತಲುಪಿದಾಗ ರಾತ್ರಿ 8 ಗಂಟೆ ಆಗಿತ್ತು. ಮಲಗಲು ಜಾಗವಿರಲಿಲ್ಲ. ಆಗ ನನ್ನ ಉದ್ದೇಶವನ್ನು ತಿಳಿದ ಊರಿನ ಗ್ರಾಮಸ್ಥರು ಮನೆಯೊಂದರಲ್ಲಿ ಉಳಿಯಲು ವ್ಯವಸ್ಥೆ ಮಾಡಿಕೊಟ್ಟರು. ಅಲ್ಲದೇ, ಖರ್ಚಿಗೆ ಒಂದಷ್ಟು ಹಣ ನೀಡಿ ಬಸ್‌ನಲ್ಲಿ ಹಾಸನಕ್ಕೆ ಕಳುಹಿಸಿಕೊಟ್ಟರು’ ಎಂದು ನೆನಪಿಸಿಕೊಳ್ಳುತ್ತಾರೆ ಈಶ್ವರ್.
ಈಶ್ವರ್ ವೃತ್ತಿ, ಊರೂರುಗಳಲ್ಲಿ ನಡೆಯುವ ಸಂತೆಗಳಲ್ಲಿ ಬೆಳ್ಳುಳ್ಳಿ ವ್ಯಾಪಾರ ಮಾಡುವುದು. ಇದರ ಮಧ್ಯೆ ಬಿಡುವು ಸಿಕ್ಕಾಗ ಆಟೋರಿಕ್ಷಾ ಕೂಡ ಓಡಿಸುತ್ತಾರೆ. ಇಷ್ಟುಬಿಟ್ಟರೆ, ಆರ್ಥಿಕವಾಗಿ ಅಷ್ಟೇನೂ ಚೈತನ್ಯವಿಲ್ಲ. ಆದರೆ, ದೇಶ ಕಾಯುವ ಸೈನಿಕರ ಬಗ್ಗೆ ತುಂಬಾ ಅಭಿಮಾನ. ರಾಜ್ಯದ ಯಾವುದೇ ಭಾಗದಲ್ಲಿ ಯೋಧ ಹುತಾತ್ಮನಾದ ಸುದ್ದಿ ಕೇಳಿದರೆ ಸಾಕು, ಊರಿನವರೇ ಈಶ್ವರ್‌ಗೆ ಸುದ್ಧಿಯನ್ನು ಮುಟ್ಟಿಸುತ್ತಾರೆ. ಯೋಧನ ಹೆಸರು, ಜಿಲ್ಲೆ, ಊರಿನ ಮಾಹಿತಿಯನ್ನು ನೀಡುತ್ತಾರೆ. ಅಲ್ಲಿಗೆ ಹೋಗಿ ಬರಲು ನೆರವಾಗುತ್ತಾರೆ. ಒಮ್ಮೆ ಹೀಗಾಯ್ತಂತೆ. ಹುತಾತ್ಮನಾದ ಯೋಧನಿಗೆ ಶ್ರದ್ಧಾಂಜಲಿ ಸಲ್ಲಿಸಲು ಬೆಂಗಳೂರಿಗೆ ಹೋಗಿದ್ದಾಗ, ಅವರನ್ನು ಯಲಹಂಕ ರೈಲ್ವೆ ಪೊಲೀಸರು ವಿಚಾರಣೆ ನಡೆಸಿದ್ದರಂತೆ. ಪ್ಲಾಟ್ ಫಾರಂನಲ್ಲಿ ಮಲಗಿದ್ದ ಇವರನ್ನು ವಿಚಾರಣೆ ನಡೆಸಿದಾಗ, ಈಶ್ವರ್ ಯೋಧನ ಅಭಿಮಾನಿ ಎಂದು ತಿಳಿದು, ಹೆಮ್ಮೆಪಟ್ಟು 300 ರೂಗಳನ್ನು ಕೈಗಿತ್ತು ಊರಿಗೆ ಕಳುಹಿಸಿಕೊಟ್ಟರಂತೆ.
“ನನಗೆ ಸೇನೆ ಸೇರಬೇಕೆಂಬ ಆಸೆ ಇತ್ತು. ಆದರೆ, ಚಿಕ್ಕವಯಸ್ಸಿನಲ್ಲಿಯೇ ಹೆತ್ತವರನ್ನು ಕಳೆದುಕೊಂಡೆ. 3 ನೇ ತರಗತಿಗೇ ಶಾಲೆ ಬಿಟ್ಟೆ. ಹೀಗಾಗಿ, ಸೇನೆ ಸೇರಲು ಸಾಧ್ಯವಾಗಲಿಲ್ಲ. ಆದರೇನಂತೆ? ಹುತಾತ್ಮ ಯೋಧರ ಅಂತಿಮ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾರ್ಥಕತೆ ಕಾಣುತ್ತಿದ್ದೇನೆ ‘ ಎನ್ನುತ್ತಾರೆ. ಕನ್ನಡ, ತೆಲುಗು, ಹಿಂದಿ ಭಾ‚ಷೆಗಳನ್ನು ಕಲಿತಿರುವ ಈಶ್ವರ್, ಮನೆಯ ತುಂಬಾ ಹುತಾತ್ಮ ಯೋಧರ ಚಿತ್ರಗಳನ್ನು ಸಾಲಾಗಿ ಜೋಡಿಸಿದ್ದಾರೆ. ಇವರ ಯೋಧಪ್ರೇಮ ಹಾಗೂ ಸಾಮಾಜಿಕ ಕಾಳಜಿ ಗಮನಿಸಿದ ಸೇನಾಧಿಕಾರಿಗಳು, ಕಳೆದ ಮೂರು ವರ್ಷದಿಂದ ಯೋಧರು ಹುತಾತ್ಮರಾದರೆ ಫೋನ್ ಮಾಡಿ ತಿಳಿಸುತ್ತಿದ್ದಾರಂತೆ. ಈಶ್ವರ್, ಹುಬ್ಬಳ್ಳಿಯ ಹನುಮಂತಪ್ಪ ಕೊಪ್ಪದ್, ಬೆಳಗಾವಿಯ ಯೋಧ ಹನುಮಂತಪ್ಪ ಬಜಂತ್ರಿ ಹಾಸನದ ಸಂದೀಪ್, ಬೆಂಗಳೂರಿನ ಮೇಜರ್ ಅಕ್ಷಯ್, ಚಿಕ್ಕಬಳ್ಳಾಪುರದ ಯೋಧ ಗಂಗಾಧರ್, ಶಿರಾ ತಾಲೂಕಿನ ಯೋಧ ಕೆ.ಆರ್ ಮಂಜುಬನಾಥ, ಇಂಗಳಗಿ ಯೋಧ ಗಣಪತಿ ಮುಂತಾದ ನೂರಾರು ಯೋಧರ ಅಂತ್ಯಕ್ರಿಯೆಯಲ್ಲಿ ಈಶ್ವರ್ ಭಾಗವಹಿಸಿದ್ದಾರೆ.
ಯೋಧ ನಾಯಕ
ಕೆಲಸ ಮುಗಿಸಿ ನಡು ರಾತ್ರಿಯೋ, ಬೆಳಗಿನ ಜಾವವೋ ಬರುವ ಯೋಧರು ಎಲ್ಲಿ ಹೋಗಬೇಕು? ನಿದ್ದೆ ಎಲ್ಲಿ ಮಾಡಬೇಕು? ಎಷ್ಟೋ ಯೋಧರು ಬೆಳಗಿನ ತನಕ ರೈಲ್ವೇ ಸ್ಟೇಷನ್‌ನಲ್ಲೇ ಮಲಗಿದ್ದು ಉದಾಹರಣೆ ಇವೆ. ಛೇ, ದೇಶ ಕಾಯೋರು ಇಲ್ಲೆಲ್ಲಾ ಏಕೆ ಮಲಗ್ತಾರೋ ಅಂತ ಅನಿಸಿದ್ದು ಈ ಯಲಹಂಕದ ಹಂಪಾನಾಯಕರಿಗೆ. ಹೀಗೆ ಅಂದುಕೊಂಡು ಅವರು ಸುಮ್ಮನಾಗಲಿಲ್ಲ. ಮಿಲಿಟರಿಯಲ್ಲಿದ್ದ ಗೆಳೆಯನಿಂದ ಯಾರಾರು, ಯಾವಾಗ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣಕ್ಕೆ ಬಂದಿಳಿಯುತ್ತಾರೆ ಅಂತ ಮಾಹಿತಿ ಪಡೆಯುತ್ತಿದ್ದರು. ಆ ನಂತರ ಸ್ವತಃ ಇವರೇ ವಾಹನದಲ್ಲಿ ಹೋಗಿ ಯೋಧರನ್ನು ಡೈರಿ ವೃತ್ತದಲ್ಲಿರುವ ಇವರ ಮನೆಗೆ ಕರೆದುಕೊಂಡು ಬಂದು ಸತ್ಕಾರ ಮಾಡಿದರು. ಹೀಗೆ, ತಿಂಗಳಿಗೆ ಒಬ್ಬರೋ ಇಬ್ಬರೋ ಯೋಧರು ನಡು ರಾತ್ರಿಯೋ, ಬೆಳಗಿನ ಜಾವವೋ ಬಂದು ಇವರ ಮನೆಯಲ್ಲಿ ವಿಶ್ರಾಂತಿ ಪಡೆದು ಹೋಗುವುದು ರೂಢಿಯಾಯಿತು. ಇವತ್ತು ತಿಂಗಳಿಗೆ ಏನಿಲ್ಲ ಅಂದರೂ, 15-20 ಮಂದಿ ಯೋಧರು ವಿಶ್ರಾಂತಿಗಾಗಿ ಬರುತ್ತಾರೆ. ಹಂಪಾನಾಯಕರು, ಅದೇ ಶ್ರದ್ಧೆಯಿಂದ ಇವರನ್ನು ನೋಡಿಕೊಳ್ಳುತ್ತಾರೆ.
ನಾಯಕರ ಜೊತೆ ರಮೇಶ್ ಅನ್ನೋರು ಕೈ ಜೋಡಿಸಿದ್ದಾರೆ. “ಜೈ ಹಿಂದ್ ಯೋಧ ನಮನ’ ಅನ್ನೋ ವ್ಯಾಟ್ಸಾಪ್ ಗ್ರೂಪ್ ಮಾಡಿಕೊಂಡಿದ್ದಾರೆ. ಇವತ್ತು ರೈಲ್ವೇ ಸ್ಟೇಷನ್ನು, ವಿಮಾನ ನಿಲ್ದಾಣ ಎಲ್ಲೇ ಯೋಧರು ಬಂದಿಳಿದರೂ ಅವರಿಗೆ ಅನಾಥ ಪ್ರಜ್ಞೆ ಕಾಡೋಲ್ಲ. ಏಕೆಂದರೆ, ಹಂಪಾನಾಯಕರ ತಂಡ ಅಲ್ಲಿ ಹಾಜರ್. ಅವರಿಗೆ ಹೂವಿನ ಹಾರ ಹಾಕಿ, ಕೈಗೆ ಬೊಕ್ಕೆ ಕೊಟ್ಟು ಕರೆದುಕೊಂಡು ಬಂದು ಸತ್ಕಾರ ಮಾಡಿ, ಅವರ ಮನೆಗೆ ಕಳುಹಿಸಿಕೊಡುತ್ತಾರೆ. ಇವಿಷ್ಟೇ ಅಲ್ಲ, ಯೋಧರು ರಜೆ ಮುಗಿಸಿ ಮತ್ತೆ ಕೆಲಸಕ್ಕೆ ತೆರಳುವಾಗಲೂ ನಾಯಕರ ತಂಡ ಜೊತೆಗಿರುತ್ತದೆ. ಅವರನ್ನು ಕರೆದುಕೊಂಡು ಬಂದು, ಸರಿಯಾದ ಸಮಯಕ್ಕೆ ಫ್ಲೈಟ್ ಅಥವಾ ರೈಲು ಹತ್ತಿಸಿ ಸಂಬಂಧಿಗಳಂತೆಯೇ ಟಾಟಾ ಮಾಡಿ ಬರುತ್ತದೆ.
ಈ ಹುಕಿ ಏಕೆ ಬಂತು? ಅಂತ ಕೇಳಿದಾಗ ಹಂಪ ನಾಯಕರು ಹೇಳ್ತಾರೆ: ನನಗೆ ಯೋಧನಾಗಿ ದೇಶ ಸೇವೆ ಮಾಡಬೇಕು ಅಂತ ಬಹಳ ಆಸೆ ಇತ್ತು. ಐದು ಆರು ಸಲ ಪ್ರಯತ್ನ ಪಟ್ಟೆ. ಆದರೆ, ಆಗಲಿಲ್ಲ. ಯೋಧನಂತೂ ಆಗಲಿಲ್ಲ. ಯೋಧರಿಗೇಕೆ ನೆರವಾಗಬಾರದು ಅಂತಲೇ ಈ ಕೆಲಸ ಶುರುಮಾಡಿದ್ದು. ದೇಶ ಕಾಯೋರನ್ನೇ ನಾವು ಕಾಯೋದು ಇದೆಯಲ್ಲ. ಅದಕ್ಕಿಂತ ಭಾಗ್ಯ ಇನ್ನೊಂದಿಲ್ಲ ಬಿಡಿ’ ಅಂತಾರೆ.
ನಾಯಕರ ತಂಡ ಇಷ್ಟಕ್ಕೇ ಸುಮ್ಮನಾಗಿಲ್ಲ. ಸೇನೆಯಿಂದ ನಿವೃತ್ತರಾಗಿ ಬರುವವರನ್ನು ಹುಡುಕಿ. ಅವರ ಬಗ್ಗೆ ಮಾಹಿತಿ ಸಂಗ್ರಹಿಸಿ. ಊರಲ್ಲಿ ಡೋಲು, ಭಾಜಾ ಭಜಂತ್ರಿಯೊಂದಿಗೆ ಮೆರವಣಿಗೆ, ಸನ್ಮಾನ ಮಾಡುವ ಮೂಲಕವೂ ಗೌರವ ಸೂಚಿಸುತ್ತದೆ. ಅಷ್ಟೂ ವರ್ಷಗಳ ಕಾಲ ಎಲೆಮರೆ ಕಾಯಂತೆ ಸೇನೆಯಲ್ಲಿ ಕೆಲಸ ಮಾಡಿದವರ ಬಗ್ಗೆ ಇಡೀ ಊರು, ರಾಜ್ಯಕ್ಕೆ ತಿಳಿಸಿ, ಹೆಮ್ಮೆ ಪಡುವಂತೆ ಮಾಡುತ್ತಿದೆ.
ಟಿ.ಶಿವಕುಮಾರ್