Advertisement
ಬೆಂಗಳೂರಿಗೆಂದೇ 2005-06ರಲ್ಲಿ ರಚನೆಯಾಗಿದ್ದ ಭಯೋತ್ಪಾದನಾ ನಿಗ್ರಹ ವಿಭಾಗ(ಎಟಿಸಿ) ಇದೀಗ ಸಂಪೂರ್ಣ ನಿಷ್ಕ್ರಿಯಗೊಂಡಿದೆ. 2015 ರವರೆಗೆ ಕಾರ್ಯನಿರ್ವಹಿಸುತ್ತಿದ್ದ ಈ ತಂಡ ವಿಧ್ವಂಸಕ ಕೃತ್ಯ ಎಸಗಿದ್ದ ಹತ್ತಾರು ಮಂದಿ ಉಗ್ರರನ್ನು ಬಂಧಿಸಿತ್ತು. ಆದರೆ, ಇದೀಗ ಮತ್ತೆ ಬೆಂಗಳೂರಿಗಾಗಿ ಪ್ರತ್ಯೇಕ ಎಟಿಎಸ್ ರಚನೆ ಮಾಡುತ್ತಿರುವುದು ಅಪಹಾಸ್ಯಕ್ಕೆ ಕಾರಣವಾಗಿದೆ.
Related Articles
Advertisement
2008-09ರಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿದ್ದ ಆರ್.ಶ್ರೀಕುಮಾರ್ ಅವರು ಆಂತರಿಕಾ ಭದ್ರತಾ ವಿಭಾಗ ರಚನೆ ಮಾಡಿದ್ದರು. ರಾಜ್ಯದ ಏಳು ವಲಯಗಳಲ್ಲಿರುವ ಐಜಿಪಿಗಳ ಅಡಿಯಲ್ಲಿಯೂ ಪ್ರತ್ಯೇಕ ತಂಡ ಇದ್ದು, ಪ್ರತಿ ಜಿಲ್ಲೆಯಲ್ಲಿಯೂ ಒಬ್ಬ ಐಎಸ್‌ಡಿ ಅಧಿಕಾರಿ ನೇಮಿಸಲಾಗಿತ್ತು. ಐಎಸ್‌ಡಿ ಅಧಿಕಾರಿಗಳು ರಾಜ್ಯ ಗುಪ್ತಚರ ವಿಭಾಗ, ಎನ್‌ಐಎ, ಕೇಂದ್ರ ಗುಪ್ತಚರ ದಳ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ರಾಜ್ಯದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುವ ವ್ಯಕ್ತಿಗಳು ಅಥವಾ ಸಕ್ರಿಯವಾಗಿರುವ ಉಗ್ರ ಸಂಘಟನೆಗಳ ಸದಸ್ಯರ ಮೇಲೆ ನಿಗಾವಹಿಸಬೇಕು. ಜತೆಗೆ ರೆಡ್‌ಜೋನ್ (ಸರ್ಕಾರಿ ಸ್ವಾಮ್ಯದ ಕಟ್ಟಡಗಳು) ಮತ್ತು ಯಲ್ಲೋ ಜೋನ್(ಖಾಸಗಿ ಸ್ವಾಮ್ಯದ ಆಸ್ತಿ-ಪಾಸ್ತಿಗಳ)ಗಳ ಮೇಲೆ ಕಟ್ಟೆಚ್ಚರ ವಹಿಸಬೇಕು ಎಂದು ಸೂಚಿಸಲಾಗಿತ್ತು.
ವಿಫಲವಾದ ತನಿಖಾ ತಂಡಗಳು: ಕಳೆದ ಐದಾರು ವರ್ಷದಲ್ಲಿ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಅವಿತಿದ್ದ ಸುಮಾರು 20ಕ್ಕೂ ಅಧಿಕ ಉಗ್ರರನ್ನು ರಾಷ್ಟ್ರೀಯ ತನಿಖಾ ದಳ ಮತ್ತು ಆಂಧ್ರಪ್ರದೇಶದ ಎಟಿಎಸ್ ಅಧಿಕಾರಿಗಳು ಬಂಧಿಸಿದ್ದರು. ಆದರೆ, ಅದುವರೆಗೂ ಉಗ್ರ ಸಂಘಟನೆಗಳ ಸದಸ್ಯರು ರಾಜ್ಯದಲ್ಲಿ ಸಕ್ರಿಯವಾಗಿದ್ದರು ಎಂಬ ಮಾಹಿತಿ ಐಎಸ್‌ಡಿ ಅಥವಾ ರಾಜ್ಯದ ಎಟಿಎಸ್‌ಗೆ ಇರಲಿಲ್ಲ. ಅಷ್ಟೇ ಅಲ್ಲದೆ, 2018 ಮತ್ತು 2019ರಲ್ಲಿ ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಎನ್‌ಐಎ ಯಿಂದ ಬಂಧನಕ್ಕೊಳಗಾದ ಜೆಎಂಬಿ ಸಂಘಟನೆ ಉಗ್ರರ ಬಗ್ಗೆಯೂ ಮಾಹಿತಿ ಇರಲಿಲ್ಲ.
ಸಮನ್ವಯ ಕೊರತೆಯೇ ವೈಫಲ್ಯಕ್ಕೆ ಕಾರಣ: ಉಗ್ರರ ಮೇಲೆ ನಿಗಾವಹಿಸಬೇಕಾದ ಐಎಸ್‌ಡಿ ಮತ್ತು ರಾಜ್ಯ ಗುಪ್ತಚರ ದಳದಲ್ಲಿರುವ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಕೇಂದ್ರದ ತನಿಖಾ ಸಂಸ್ಥೆಗಳ ಜತೆ ನಿರಂತರ ಸಂಪರ್ಕದಲ್ಲಿಲ್ಲದಿರುವುದು, ಅಲ್ಲದೆ, ಪರಸ್ಪರ ಸಮನ್ವಯ ಕೊರತೆಯೇ ಕಾರ್ಯವೈಖರಿಯಲ್ಲಿ ವಿಫಲವಾಗಲು ಕಾರಣ ಎನ್ನಲಾಗಿದೆ.
ಮೂಲಗಳ ಪ್ರಕಾರ ರಾಜ್ಯ ಗುಪ್ತಚರ ದಳದಲ್ಲಿರುವ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾವಹಿಸಬೇಕು. ಐಎಸ್‌ಡಿ ಅಧಿಕಾರಿಗಳು ಅಂತಹ ವ್ಯಕ್ತಿಗಳನ್ನು ವಶಕ್ಕೆ ಪಡೆದು ಸಂಪೂರ್ಣ ಮಾಹಿತಿ ಸಂಗ್ರಹಿಸಬೇಕು. ಆದರೆ, ಇದ್ಯಾವುದನ್ನೂ ತನಿಖಾ ಸಂಸ್ಥೆಗಳು ಮಾಡುತ್ತಿಲ್ಲ ಎನ್ನಲಾಗಿದೆ. ಅಷ್ಟಲ್ಲದೆ, ರಾಜ್ಯದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ನಡೆದ ವಿಧ್ವಂಸಕ ಕೃತ್ಯಗಳಲ್ಲಿ ಬಂಧನಕ್ಕೊಳಗಾದ ಶಂಕಿತರ ಪ್ರಸ್ತುತ ಚಟುವಟಿಕೆಗಳೇನು? ಅವರ ಸಂಘಟನೆ ಸದಸ್ಯರು ಎಲ್ಲಿದ್ದಾರೆ ಎಂಬ ಮಾಹಿತಿಯೂ ಐಎಸ್‌ಡಿ ಬಳಿ ಇದ್ದಂತಿಲ್ಲ ಎಂದು ಮೂಲಗಳು ತಿಳಿಸಿವೆ.
ನನ್ನ ಅವಧಿಯಲ್ಲಿ ಐಎಸ್‌ಡಿ ರಚನೆ ಮಾಡಲಾಗಿತ್ತು. ಕೇಂದ್ರ ತನಿಖಾ ಸಂಸ್ಥೆಗಳ ಜತೆ ನಿರಂತರ ಸಂಪರ್ಕದಲ್ಲಿದ್ದರೆ ರಾಜ್ಯದಲ್ಲಿರುವ ಶಂಕಿತರ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ಅಲ್ಲದೆ, ತಾಂತ್ರಿಕವಾಗಿಯೂ ಸದೃಢವಾಗಬೇಕು.-ಆರ್.ಶ್ರೀಕುಮಾರ್, ನಿವೃತ್ತ ಪೊಲೀಸ್ ಮಹಾನಿರ್ದೇಶಕರು ಹೆಚ್ಚಾಗುತ್ತಿರುವ ಉಗ್ರರ ಚಟುವಟಿಕೆಗಳ ಮೇಲೆ ನಿಗಾವಹಿಸಲು ಎಟಿಎಸ್ ರಚನೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಸಮರ್ಪಕವಾಗಿ ಕೆಲಸ ಮಾಡಿದರೆ ನಗರದಲ್ಲಿ ಉಗ್ರರ ಅಕ್ರಮ ಚಟುವಟಿಕೆ ಮಟ್ಟ ಹಾಕಬಹುದು.
-ಜಿತೇಂದ್ರನಾಥ್, ಎಟಿಸಿ ನಿವೃತ್ತ ಅಧಿಕಾರಿ * ಮೋಹನ್ ಭದ್ರಾವತಿ