Advertisement

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

04:39 PM Nov 05, 2024 | keerthan |

ವಿಜಯಪುರ: ವಕ್ಫ್ ಆಸ್ತಿಯನ್ನು ಅಲ್ಲಾನ ಆಸ್ತಿ ಎಂದು ಹೇಳಿಕೊಂಡೇ ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ ಮಾಡಿದ್ದಾರೆ. ಅಲ್ಲಾನಿಗೆ ಮೋಸ ಮಾಡುವ ಜನ ಅದೇ ಜಾತಿ, ಅದೇ ಧರ್ಮದಲ್ಲಿ ಹುಟ್ಟಿದವರಿದ್ದಾರೆ. ಈ ರೀತಿಯ ಆಸ್ತಿಯನ್ನು ರಕ್ಷಣೆ ಮಾಡಬೇಕು ಎಂದು ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ತರಲು ಹೊರಟಿದ್ದೇವೆ. ಮುಂದೆ ಯಾರಿಗೂ ಮೋಸವಾಗದಂತೆ ತಿದ್ದುಪಡಿ ಕಾಯ್ದೆಯನ್ನು ತರುತ್ತಿದ್ದೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಹೇಳಿದರು.

Advertisement

ನಗರದಲ್ಲಿ ವಕ್ಫ್ ವಿರುದ್ಧ ಸೋಮವಾರದಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿಯಲ್ಲಿ ಎರಡನೇ ದಿನವಾದ ಮಂಗಳವಾರವೂ ಭಾಗವಹಿಸಿ ಮಾತನಾಡಿದ ಅವರು, ವಕ್ಫ್ ಆಸ್ತಿ ಕುರಿತ ಅನ್ವರ್ ಮಾಣಿಪ್ಪಾಡಿ ವರದಿಯನ್ನು ಸಿಬಿಐಗೆ ವಹಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಮುಖಂಡರು 29 ಸಾವಿರ ಎಕರೆ ಭೂಮಿಯನ್ನು ನುಂಗಿ ನೀರು ಕುಡಿದಿದ್ದಾರೆ. ಭ್ರಷ್ಟಾಚಾರ ಮಾಡಿದ್ದಾರೆ. ಹೀಗಾಗಿ ಮಾಣಿಪ್ಪಾಡಿ ವರದಿ ಸಿದ್ಧವಾದ ದಿನದಿಂದಲೂ ವಕ್ಫ್ ಆಸ್ತಿ ಬಗ್ಗೆ ತನಿಖೆಯಾಗಬೇಕು ಎಂದು ಬಿಜೆಪಿ ಒತ್ತಾಯಿಸುತ್ತಲೇ ಬಂದಿದೆ ಎಂದರು.

ಈ ಆಸ್ತಿ ರಕ್ಷಣೆ ಮಾಡುವರ‍್ಯಾರು? ಖಮರುಲ್ ಇಸ್ಲಾಂ, ರೋಷನ್ ಬೇಗ್, ಹ್ಯಾರಿಸ್ ಯಾರು? ಅದೇ ಜಾತಿಯಲ್ಲಿ ಹುಟ್ಟಿ ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ಮೋಸ ಮಾಡುವವರು. ವಕ್ಫ್ ಆಸ್ತಿ ರಕ್ಷಣೆಗಾಗಿಯೇ ನಾನು ಲೋಕಸಭೆಯಲ್ಲಿ ಪ್ರಶ್ನೆಯನ್ನೂ ಮಾಡಿದ್ದೆ. ಕಾಂಗ್ರೆಸ್‌ನವರು ನಾನು ಕೇಳಿದ ಪ್ರಶ್ನೆಗಳನ್ನು ಇವತ್ತು ಬಿಡುಗಡೆ ಮಾಡಿದ್ದಾರೆ. ಇದಕ್ಕೆ ನಾನು ಸ್ವಾಗತ ಮಾಡುತ್ತೇನೆ ಎಂದರು.

ನಿಜವಾದ ವಕ್ಫ್ ಆಸ್ತಿ ಎಷ್ಟು? ದೇಶ, ರಾಜ್ಯದಲ್ಲಿ ಅಲ್ಲಾನ ಹೆಸರಲ್ಲಿ ದಾನ ಕೊಟ್ಟಿದ್ದು ಎಷ್ಟು?. ಆದರೆ, ಜಮೀರ್ ಅಹ್ಮದ್ ಖಾನ್ ವಕ್ಫ್ ಅದಾಲತ್ ಮಾಡಿ ರೈತರ ಜಮೀನಿಗಳಿಗೆ ನೋಟಿಸ್ ಕೊಡುತ್ತಿದ್ದಾರೆ. ಬ್ರಿಟಿಷರ ಕಾಲದಲ್ಲೂ ನಮ್ಮ ಜಮೀನಿನ ಹಕ್ಕನ್ನು ಸಿವಿಲ್ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲು ಅವಕಾಶ ಇತ್ತು. ಆದರೆ, 1995ರಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿರುವ ಕಾಯ್ದೆ ಪ್ರಕಾರ, ಹೈಕೋರ್ಟ್, ಸುಪ್ರೀಂ ಕೋರ್ಟ್ನಲ್ಲೂ ಪ್ರಶ್ನೆ ಮಾಡುವಂತಿಲ್ಲ. ಕೇವಲ ನ್ಯಾಯಾಧೀಕರಣಕ್ಕೆ ಹೋಗಬೇಕು. ಅಂಥ ಕಾಯ್ದೆಯನ್ನು ನೀವು ಮಾಡಿದ್ದೀರಿ. ಯಾಕೆಂದರೆ, ಕೇವಲ ಒಂದು ವರ್ಗದ ತೃಷ್ಟೀಕರಣ ರಾಜಕೀಯಕ್ಕಾಗಿ ಮಾಡಿದ್ದೀರಿ. ಹೀಗಾಗಿ ವಕ್ಫ್ ನೈಜ ಆಸ್ತಿ ರಕ್ಷಣೆ ಆಗಬೇಕು. ನಿಮ್ಮಂತ ಲ್ಯಾಂಡ್ ಮಾಫಿಯಾದವರು ತಿಂದು ಹಾಕಬಾರದು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next