Advertisement
ಆಪ್ತ ಸ್ನೇಹಿತೆಯ ಮನೆಯಲ್ಲಿ ಸಣ್ಣ ಕಾರ್ಯಕ್ರಮವಿತ್ತು. “ನಿನ್ನ ಹೊರತು ಬೇರೆ ಯಾರನ್ನೂ ಕರೆದಿಲ್ಲ. ತಪ್ಪಿಸಬೇಡ’ ಎಂದಿದ್ದಳು ಆಕೆ. ಅವಳ ಅತ್ತೆ, ಮಾವನೂ ಊರಿಂದ ಬಂದಿದ್ದರು. ಅವಳ ಅತ್ತೆ, ಮಗನಿಗೆ ಅದಿಷ್ಟ, ಇದಿಷ್ಟ ಅಂತ ನಾಲ್ಕಾರು ಐಟಂ ತಯಾರಿಸಿದ್ದರು. ಮಗ ಚಿಕ್ಕವನಿರುವಾಗ ಹಟ ಮಾಡಿ, ಮಾಡಿಸಿಕೊಳ್ತಿದ್ದ ಪಲ್ಯ, ಪದಾರ್ಥ, ಮೊಮ್ಮಕ್ಕಳಿಗೆ ಪ್ರೀತಿ ಅಂತ ಸಿಹಿ, ಖಾರ ಪ್ರತ್ಯೇಕ. ಸೊಸೆಗೆ ಇಂಥದ್ದೇ ಬೇಕು ಅನ್ನುವ ಪ್ರಶ್ನೆ ಇಲ್ಲ. ತಾವೇ ಬಡಿಸಲು ನಿಂತವರು ಮಗ ಚಿಕ್ಕವನಿದ್ದಾಗ ಆಸೆಪಡ್ತಿದ್ದ ಸಾಂಬಾರ್, ಆವಿಯಲ್ (ಖಾದ್ಯ) ಬಡಿಸಿದಾಗ ಆತ ನಾಜೂಕಾಗಿ ಮುಟ್ಟಿದ ಶಾಸ್ತ್ರ ಮಾಡಿದ್ದ. ಎರಡು ಹೊತ್ತಿಗಿರಲಿ ಅಂತ ಮಾಡಿದ್ದ ಸಾಂಬಾರು ಒಂದೇ ಹೊತ್ತಿಗೆ ಖಾಲಿ ಮಾಡಿ, ತೃಪ್ತಿಯಿಂದ ಉಣ್ಣುತ್ತಿದ್ದ ಮಗ ಹೀಗೆ ಉಂಡ ಶಾಸ್ತ್ರ ಮಾಡಿದ್ದು, ಅವರಿಗೆ ತಡೆಯಲಾಗಲಿಲ್ಲ. ವಿಚಾರಿಸಿದರು.
Related Articles
Advertisement
ಬೆಳಗಿನ ಉಪಾಹಾರದ ನಂತರ ಮಧ್ಯೆ ಬೇರೇನೂ ಆಹಾರ ತಿನ್ನದೆ ಇದ್ದರೆ ಒಳ್ಳೆಯ ಹಸಿವಾಗಿ, ಆಹಾರ ಬಲು ರುಚಿಯಾಗಿರುತ್ತದೆ. ಅದು ಮಾಡಿದ್ದು ನಾನೇ ಇರಬಹುದು; ಅಥವಾ ಸೊಸೆಯೇ ಆಗಿರಬಹುದು. ಹೊಟ್ಟೆ ತುಂಬಿದವ ಎಲೆಯ ಮುಂದೆ ಕೂತರೆ ಅದು ಮೃಷ್ಟಾನ್ನ ಭೋಜನವಾದರೂ ಅಷ್ಟಷ್ಟೆ. ಹಸಿವಿದ್ದವನಿಗೆ ಗಂಜಿ, ಚಟ್ನಿ ಇದ್ದರೂ ಅದೇ ಸುಗ್ರಾಸ ಭೋಜನ. ಈಗ ನಮ್ಮಲ್ಲಿ ಮಾತ್ರ ಹೀಗೆ ಅಂದುಕೋಬೇಡ. ಆಹಾರ ಸೇವನೆಗೆ ನಿಗದಿತ ಸಮಯ ಇಟ್ಟುಕೊಂಡು ಆ ಹೊತ್ತಿಗೆ ಉಂಡರೆ, ತಿಂದರೆ ಅದು ರುಚಿ ಹೊರತು ಇಪ್ಪತ್ತನಾಲ್ಕು ಗಂಟೆಯೂ ಬಾಯಾಡಿಸುತ್ತ ಇರುವ ಅನಿಯಮಿತ ದುರಭ್ಯಾಸ ಅನಾರೋಗ್ಯಕ್ಕೆ ಹಾದಿ ಮಾಡಿಕೊಡಲು ತಡವಿರುವುದಿಲ್ಲ.
“ನಿನ್ನ ಗಂಡನನ್ನ ಬೈತಿದ್ದೇನೆ ಅಂತ ತಪ್ಪು ತಿಳಿದುಕೊಳ್ಳಬೇಡವೇ ತಾಯಿ. ಅವನು ಸರಿಯಾಗಿ ಊಟ ಮಾಡದ ಕಾರಣ ಗದರಿಸಿದ್ದು’ ಅಂದರು ಅಮ್ಮ. ಇನ್ನೂ ಸ್ವಲ್ಪ ಗದರಿಸಿಬಿಡಿ ಅತ್ತೆ. ನಾನು ಹೇಳಿದ್ರೆ ಕಿವಿಗೇ ಹಾಕಿಕೊಳ್ಳುವುದಿಲ್ಲ’ ಅಂದಳು ಸ್ನೇಹಿತೆ. ಆಕೆಗೂ ಬೇಸರ. ಎಲ್ಲರೂ ಒಟ್ಟಿಗೆ ಊಟ ಮಾಡುವ ಅಂತ ಇದ್ದಳು. ಮಧ್ಯೆ ತಿಂದ ಸಿಹಿ, ಕುರುಕಲು ಹಸಿವನ್ನೇ ತೆಗೆದ ಕಾರಣ ತಯಾರಿಸಿದ್ದರಲ್ಲಿ ಬಹುಪಾಲು ಉಳಿದು ಫ್ರಿಡ್ಜ್ ಸೇರಿತ್ತು. ಮಾರನೇ ದಿನಕ್ಕೆ ಪುನಃ ತಯಾರಿಸಬೇಕಿಲ್ಲ. ಅದೇ ಆಗುತ್ತದೆ ನಿಜ. ಆದರೆ, ಫ್ರೆಶ್ ಆಗಿರುವಾಗ ಇದ್ದ ರುಚಿ ಮರುದಿನಕ್ಕೆ ಕಾಣದು.
ಅಲ್ಲದೇ, ದಿನ ದಿನ ಮುನ್ನಾ ದಿನದ್ದು ಎಳೆಯರಿಗೆ ಸೇರಿ ಮನೆಯವರೆಲ್ಲ ಉಣ್ಣುವುದು ಆರೋಗ್ಯದ ದೃಷ್ಟಿಯಿಂದ ಸಲ್ಲದು ಎಂದು ಆಕೆಯ ಸ್ನೇಹಿತೆ ವೈದ್ಯೆ ಎಚ್ಚರಿಸಿದ್ದರು. ಹಸಿವಾಗುವ ಹೊತ್ತಿನಲ್ಲಿ ನಿಗದಿತ ಸಮಯ ನೋಡಿ ಊಟ, ತಿಂಡಿ ಸೇವಿಸಿದಲ್ಲಿ ಹೇಗೆ ಪೂರಕವೋ; ಹಾಗೇ ಎರಡು ಘನ ಆಹಾರದ ಮಧ್ಯೆ ಕುರುಕಲು, ಸಿಹಿ, ಬೇಕರಿ ಐಟಮ್ಸ ತಿನ್ನುವ ಅಭ್ಯಾಸ ಒಮ್ಮೆಗೆ ಕಾಣಿಸದೆ ಹೋದರೂ ಮುಂದೊಂದು ದಿನಕ್ಕೆ ಅನಾರೋಗ್ಯ ಕಾಡುವ ಎಚ್ಚರಿಕೆಯ ಗಂಟೆ. ವೈದ್ಯೆಯ ಅನುಭವದ ಸಲಹೆ ಎಚ್ಚರಿಸುತ್ತಲೇ ಇತ್ತು ಆಕೆಯನ್ನು. ಯಾರಿಗೆ ಹೇಳುವುದು; ಕಿವಿಗೇ ಹಾಕ್ಕೊಳ್ಳುವುದಿಲ್ಲ; ಮಕ್ಕಳೂ ಅದನ್ನೇ ಫಾಲೋ ಮಾಡ್ತಿರೋದು ಮತ್ತಷ್ಟು ಕಠಿಣದ ಸಮಸ್ಯೆ.
ಪ್ಯಾಕೆಟ್ ತಿಂಡಿಪೋತರು…ಸಣ್ಣಮಕ್ಕಳೂ ಅಂಗಡಿಯ ಬಾಗಿಲಿಗೆ ತೋರಣ ಕಟ್ಟಿದ ಹಾಗಿನ ಪ್ಯಾಕೆಟ್ ತಿಂಡಿ ಗುರುತಿಸಿ ಹಟ ಹಿಡಿಯುವ ಬುದ್ಧಿವಂತಿಕೆ ಪಡೆದಿವೆ. ಇದೂ ನಾಗರಿಕತೆ ಅಂತ ಅಮ್ಮಂದಿರು ಕೊಡಿಸ್ತಾರೆ. ತಪ್ಪು ಅವರದಲ್ಲ. ಆ ಪರಿಯಲ್ಲಿ ಕೊಳ್ಳುವ ತಹತಹ ಬೆಳೆದಿದೆ. ಬೇಕಿದ್ದು, ಬೇಡದ್ದು ಎಲ್ಲ ರಾಶಿ ರಾಶಿ. ಅದರ ಪರಿಣಾಮ ಗೊತ್ತಾಗುವುದು ಮುಂದೆ. ನಮ್ಮಲ್ಲಿ ಅಂತಲ್ಲ; ಹೆಚ್ಚಿನ ಮನೆಗಳದು ಇದೇ ಪಾಡು. ಪರಿವೆಯೇ ಇಲ್ಲದೆ ತಿನ್ತಾರೆ…
ಮಕ್ಕಳು ಹೊರಗೆ ಸಿಗುವ ಪ್ಯಾಕೆಟ್ ಫುಡ್‌ಗಳನ್ನು ತಂದು ಒಡೆದು ಸಿಕ್ಕಸಿಕ್ಕದ್ದು ತಿಂತಾರೆ. ಚಾಕೊಲೇಟು, ಕೇಕು ಸದಾ ಕೈಗೆಟುಕುವ ಹಾಗೆ ಸಿಗುತ್ತದೆ. ಚೆನ್ನಾಗಿ ಹಸಿವಾಗಿ ಹೊಟ್ಟೆತುಂಬ ಉಣ್ಣಬೇಕಾದ ಹೊತ್ತಿಗೆ ಹಸಿವಿಲ್ಲ. ಸಂಜೆಗೆ ಮತ್ತಿನ್ನೇನು? ಎರಡು ಗಂಟೆ ಆಗಬೇಕಾದರೆ ಮಕ್ಕಳು ಫ್ರಿಡ್ಜ್ ತೆರೆದು ಅದೇನೇನೋ ಬಾಯಿಗೆ ತುಂಬಿಕೊಳ್ತಾರೆ. ಟಿ.ವಿ.ಯಲ್ಲಿ ಬರೋದು ನೋಡ್ತಾ ಏನು ತಿಂತಿದ್ದಾರೆ, ಎಷ್ಟು ತಿಂತಾರೆ, ಅನ್ನೋದು ಅವರಿಗಾದರೂ ಗೊತ್ತಾ? ಸಂಜೆ ಫ್ರೆಶ್ ಆಗಿ ತಿಂಡಿ ಮಾಡಿದರೆ ಅದು ಹಾಗೆ ಉಳಿಯುತ್ತದೆ. ಕೃಷ್ಣವೇಣಿ ಕಿದೂರು