ತೆಕ್ಕಟ್ಟೆ (ಬೇಳೂರು): ಬೇಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪರವಾನಿಗೆ ಇಲ್ಲದೆ ಹಿರೇ ಹೊಳೆ, ಕಿರು ಹೊಳೆಯ ಬೇಳೂರು ತೆಂಕಬೆಟ್ಟು ಸೇರಿದಂತೆ ಕಳೆದ ಹಲವು ದಿನಗಳಿಂದಲೂ ಮುಂಜಾನೆ ಹಾಗೂ ರಾತ್ರಿ ವೇಳೆಯೆನ್ನದೆ ಹಿತಾಚಿ ಹಾಗೂ ಲಾರಿಗಳನ್ನು ಬಳಸಿಕೊಂಡು ಎಗ್ಗಿಲ್ಲದೆ ಅಕ್ರಮ ಮರಳುಗಾರಿಕೆಯ ಸದ್ದು ಗ್ರಾಮೀಣ ಭಾಗದಲ್ಲಿ ದಿನದಿಂದ ದಿನಕ್ಕೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿರುವುದು ವಾಸ್ತವ ಸತ್ಯ .
ಕರಾವಳಿ ನಿಯಂತ್ರಣ ವಲಯ ನದಿ ಪಾತ್ರಗಳಲ್ಲಿ ಈಗಾಗಲೇ ಗುರುತಿಸಿರುವ ತಾಂತ್ರಿಕ ವರದಿಯ ಪ್ರಕಾರ ಜಿಲ್ಲೆಯಲ್ಲಿ ಮರಳುಗಾರಿಕೆ ಸ್ಥಗಿತಗೊಂಡಿರುವ ಪರಿಣಾಮವಾಗಿ ತೆರೆಯ ಹಿಂದೆ ನಡೆಯುತ್ತಿರುವ ದೊಡ್ಡ ಮಟ್ಟದಲ್ಲಿನ ಮರಳು ಮಾಫಿಯಾದ ನೆರಳು ಗ್ರಾಮೀಣ ಭಾಗದ ಜನ ಸಾಮಾನ್ಯರ ಬದುಕಿನ ಮೇಲೆ ತೀವ್ರ ತೆರನಾದ ಪರಿಣಾಮ ಬೀರುತ್ತಿದೆ. ಕೆಲವೆಡೆಗಳಲ್ಲಿ ಅಕ್ರಮ ಮರಳುಗಾರಿಕೆಯ ದಾಸ್ತಾನು ಹೆಚ್ಚಾಗುತ್ತಿರುವುದರಿಂದ ಸ್ಥಳೀಯ ಗೃಹ ನಿರ್ಮಾಣ ಮಾಡುವವರಿಗೆ ದೀಪದ ಅಡಿ ಕತ್ತಲು ಎನ್ನುವಂತೆ ಗ್ರಾಮದ ಹೊಳೆಯಲ್ಲಿ ಮರಳು ಇದ್ದರೂ ಕೂಡಾ ಒಂದು ಹಿಡಿ ಮರಳಿಗಾಗಿ ಸ್ಥಳೀಯರು ಪರದಾಡಬೇಕಾದ ಸಂದಿಗ್ಧ ಪರಿಸ್ಥಿತಿ ಇದೆ .
ಹಿರೇಹೊಳೆ ನದಿಯ ತೀರದ ವಾಸಿಗಳು ಹಾಗೂ ಇಲ್ಲಿನ ಪರಿಸರ ಜನತೆ ಮರಳು ತೆಗೆಯುವ ಕಾಯಕವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಅದೆಷ್ಟೋ ಕೂಲಿ ಕಾರ್ಮಿಕರು ಮರಳು ಸ್ಥಗಿತವಾಗಿದ್ದರಿಂದ ಕುಟುಂಬ ನಿರ್ವಹಣೆ ಮಾಡಲಾಗದೆ ಅದೆಷ್ಟೋ ಮಂದಿ ಬಡ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಪರಿತಪಿಸಬೇಕಾದ ಅನಿವಾರ್ಯ ಪರಿಸ್ಥಿತಿ ಒಂದೆಡೆಯಾದರೆ ದೊಡ್ಡ ಮಟ್ಟದಲ್ಲಿ ನಡೆಯುವ ಮರಳು ಮಾಫಿಯಾದ ಪ್ರಭಾವದಿಂದಾಗಿ ತಾಲೂಕಿನ ಪಾರಂಪರಿಕವಾಗಿ ಬೆಳೆದು ಬಂದ ಸಣ್ಣ ದೋಣಿ ಹಾಗೂ ಮರಳು ತೆಗೆಯುವ ಕಾಯಕದವರು ಸ್ವತಂತ್ರತೆ ಇಲ್ಲದೆ ಭಯದ ನೆರಳಲ್ಲಿ ಬದುಕು ನಿರ್ವಹಿಸ ಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ.
ಮರಳುಗಾರಿಕೆ ಸ್ಥಗಿತಗೊಂಡಿ ರುವುದರಿಂದ ಕಟ್ಟಡ ನಿರ್ಮಾಣ ಮಾಡುವ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಖಾಲಿ ಕುಳಿತುಕೊಳ್ಳುವಂತಾಗಿದ್ದು ಆರ್ಥಿಕ ಸಂಕಷ್ಟ ಎದುರಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಜಿಲ್ಲಾಡಳಿತ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಿ ಹೊರ ಜಿಲ್ಲೆಗಳಿಗೆ ಇಲ್ಲಿನ ಮರಳು ಅಕ್ರಮವಾಗಿ ಸಾಗದಂತೆ ತುರ್ತುಕ್ರಮ ಕೈಗೊಂಡು ಮರಳುಗಾರಿಕೆ ಮೇಲಿರುವ ನಿಷೇಧವನ್ನು ತೆರವುಗೊಳಿಸಬೇಕು
– ಸ್ಥಳೀಯ ಕೂಲಿ ಕಾರ್ಮಿಕರು
– ಟಿ. ಲೋಕೇಶ್ ಆಚಾರ್ಯ ತೆಕ್ಕಟ್ಟೆ