Advertisement

ಹಾರ್ಮಣ್ಣು -ಮಾರಣಕಟ್ಟೆ ಸಂಪರ್ಕ ರಸ್ತೆ: ಅಪಾಯಕಾರಿ ಸೇತುವೆಗೆ ಮುಕ್ತಿ ಎಂದು ?

03:46 PM Jun 02, 2023 | Team Udayavani |

ವಂಡ್ಸೆ: ಚಿತ್ತೂರು ಗ್ರಾ.ಪಂ. ವ್ಯಾಪ್ತಿಯ ನೈಕಂಬ್ಲಿ ಗ್ರಾಮಸ್ಥರ ಬಹಳಷ್ಟು ವರ್ಷಗಳ ಬೇಡಿಕೆಗಳಲ್ಲೊಂದಾದ ಕಿರುಸೇತುವೆ ನಿರ್ಮಾಣ ಕಾಮಗಾರಿ ಈ ವರ್ಷವೂ ಈಡೇರದಿರುವುದರಿಂದ ಈ ಭಾಗದ ನಿವಾಸಿಗಳಿಗೆ ಈ ಮಳೆಗಾಲದಲ್ಲಿ ಹೊಳೆ ದಾಟಿ ಪೇಟೆಗೆ ತೆರಳಲು ಮತ್ತೆ ಮರದ ದಿಣ್ಣೆಯನ್ನೆ ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿದೆ.

Advertisement

ಗ್ರಾಮಸ್ಥರಿಂದ ಮರದ ಸೇತುವೆ ನಿರ್ಮಾಣ
ಶಿಥಿಲಗೊಂಡ ಹಳೆಯ ಮರದಿಂದ ನಿರ್ಮಿಸಿದ ಸೇತುವೆ ದಾಟಲು ಕಷ್ಟಸಾಧ್ಯ ಆಗಿರುವ ಹಿನ್ನೆಲೆಯಲ್ಲಿ ಊರವರು ಸೇರಿ ಮರದ ದಿಣ್ಣೆಯ ಸೇತುವೆ ನಿರ್ಮಿಸಿದ್ದಾರೆ.

ಆದರೆ ಅದರ ಇಕ್ಕೆಲಗಳಲ್ಲಿ ನಡೆದಾಡಲು ತಡೆಬೇಲಿ ನಿರ್ಮಿಸದಿರುವುದರಿಂದ ಹರಿಯುವ ನೀರಿನ ರಭಸಕ್ಕೆ ಆ ಮಾರ್ಗವಾಗಿ ಸಾಗುವ ಮಂದಿಗೆ ಆತಂಕದ ಸನ್ನಿವೇಷ ಎದುರಾಗಿದೆ. ಹಾರ್ಮಣ್ಣು, ನೈಕಂಬ್ಲಿ , ಮಾರಣಕಟ್ಟೆ ನಡುವಿನ ಸಂಪರ್ಕ ಕೊಂಡಿ ಯಂತಿರುವ ರಸ್ತೆ ಇದಾಗಿದ್ದು, ಇಲ್ಲಿನ ನಿವಾಸಿಗಳು ಮರದ ದಿಣ್ಣೆಯ ಮೇಲೆ ಈ ವರ್ಷವೂ ಸಾಗಬೇಕಾಗಿದೆ.

70ಕ್ಕೂ ಮಿಕ್ಕಿ ಮನೆಗಳಿವೆ
ಇಲ್ಲಿ 70ಕ್ಕೂ ಹೆಚ್ಚು ಮನೆಗಳಿದ್ದು, ಸುಮಾರು 400 ರಿಂದ 500 ಗ್ರಾಮಸ್ಥರು ವಾಸವಾಗಿದ್ದಾರೆ. ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಮತ್ತಿತರರು ಕೆಲಸ ಕಾರ್ಯಗಳಿಗೆ ತೆರಳಲು, ಈ ಮಾರ್ಗವನ್ನೇ ಅವಲಂಬಿಸಿದ್ದಾರೆ. ಮಲೆಗಾಲದಲ್ಲಂತೂ ಇಲ್ಲಿನವರ ಬವಣೆ ಹೇಳತೀರದು.

ಈಡೇರದ ಬೇಡಿಕೆ
ಕಳೆದ ಹಲವು ವರ್ಷಗಳಿಂದ ಸಂಸದರು, ಶಾಸಕರು ಸಹಿತ ವಿವಿಧ ಜನಪ್ರತಿನಿಧಿ ಗಳಿಗೆ ಮನವಿ ಸಲ್ಲಿಸಿ, ಕಿರುಸೇತುವೆ ನಿರ್ಮಾಣ ಕಾರ್ಯಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಬೇಡಿಕೆ ಇಡಲಾಗಿತ್ತು. ಆದರೆ ಈವರೆಗೆ ಕೇವಲ ಭರವಸೆಯ ಆಶ್ವಾಸನೆ ನೀಡಿದರೇ ಹೊರತು ಅನುದಾನ ಬಿಡುಗಡೆಗೊಳಿಸದಿರುವುದು ಗ್ರಾಮಸ್ಥರಲ್ಲಿ ನಿರಾಸೆ ಉಂಟುಮಾಡಿದೆ.

Advertisement

ಈಡೇರದ ರಸ್ತೆ ನಿರ್ಮಾಣ ಕಾಮಗಾರಿ
ಮುಲ್ಲಿ ಮನೆಯಿಂದ ಮಲ್ಲೋಡು ಹರಿಜನ ಕಾಲನಿವರೆಗಿನ ಸುಮಾರು ಒಂದೂವರೆ ಕಿ.ಮೀ. ವ್ಯಾಪ್ತಿಯ ರಸ್ತೆ ನಿರ್ಮಾಣ ಕಾಮಗಾರಿಗೆ ಬೇಡಿಕೆ ಸಲ್ಲಿಸಲಾಗಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಹಳಿಯಮ್ಮ ದೇಗುಲ ಹಾಗೂ ಮಹಾಲಿಂಗೇಶ್ವರ ದೇಗುಲದ ಸಂಪರ್ಕ ಕೊಂಡಿಯಾಗಿರುವ ನೈಕಂಬ್ಲಿ ಕಿರುಸೇತುವೆ ನಿರ್ಮಾಣ ಕಾಮಗಾರಿಗೆ ಇನ್ನೂ ಕಾಲ ಕೂಡಿ ಬಾರದಿರುವುದು ಮಳೆಗಾಲದಲ್ಲಿ ದುರಂತಕ್ಕೆ ಆಹ್ವಾನಿಸುವಂತಿದೆ.

ಕಿರು ಸೇತುವೆ ನಿರ್ಮಾಣಕ್ಕೆ ಮನವಿ ಸಲ್ಲಿಸಲಾಗಿದೆ
ಲೋಕಸಭಾ ಸದಸ್ಯರು ಹಾಗೂ ಶಾಸಕರಿಗೆ ಕಿರು ಸೇತುವೆ ನಿರ್ಮಾಣದ ಬಗ್ಗೆ ಮನವಿ ಸಲ್ಲಿಸಿದ್ದೇವೆ. ಅಲ್ಲಿನ ಕಾಲು ಸೇತುವೆ ಬಗ್ಗೆ ಪರಿಶೀಲನೆ ನಡೆಸಲು ಜಿ.ಪಂ.ನಿಂದ ಪತ್ರ ಬಂದಿದೆ. ಮಳೆ ಆರಂಭದ ಮೊದಲು ಕಾಲು ಸೇತುವೆ ನಿರ್ಮಾಣವಾಗುವುದು ಸೂಕ್ತ. -ಜಯಂತಿ ಪೂಜಾರಿ, ಅಧ್ಯಕ್ಷರು, ಚಿತ್ತೂರು ಗ್ರಾ.ಪಂ.

ಮನವಿ ನೀಡಿದರೂ ಅನುದಾನ ಬಿಡುಗಡೆ‌ಗೊಂಡಿಲ್ಲ
ಶಾಸಕರು, ಸಂಸದರಿಗೆ ಮನವಿ ಸಲ್ಲಿಸಿ ಕಿರುಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಹಲವು ಬಾರಿ ಬೇಡಿಕೆ ಇಟ್ಟಿದ್ದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಗ್ರಾಮಸ್ಥರ ನೆರವಿನಿಂದ ತಾತ್ಕಾಲಿಕ ಮರದ ದಿಣ್ಣೆಯ ಸೇತುವೆ ನಿರ್ಮಿಸಲಾಗಿದೆ.-ರಾಘು ಶೆಟ್ಟಿ, ಪ್ರೇರಣ, ನೈಕಂಬ್ಲಿ.

-ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next