ಹೊಸದಿಲ್ಲಿ: “ಚುನಾವಣ ಬಾಂಡ್ ಎಂಬುದು ವಿಶ್ವದಲ್ಲೇ ಅತಿದೊಡ್ಡ ಹಗರಣ’ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಕಾಂಗ್ರೆಸ್ ಪಡೆದಿರುವ ಚುನಾವಣೆ ಬಾಂಡ್ ಕೂಡ ಸುಲಿಗೆ ಅಲ್ಲವೇ’ ಎಂದು ಪ್ರಶ್ನಿಸಿದ್ದಾರೆ.
ಮಂಡ್ಯದಲ್ಲಿ ಎ. 17ರಂದು ನಡೆದ ಕಾಂಗ್ರೆಸ್ ಪ್ರಚಾರ ರ್‍ಯಾಲಿಯಲ್ಲಿ ಮಾತನಾಡಿದ್ದ ಪಕ್ಷದ ನಾಯಕ ರಾಹುಲ್ ಗಾಂಧಿ, “ಚುನಾವಣ ಬಾಂಡ್ ವ್ಯವಸ್ಥೆಯು ವಿಶ್ವದ ಅತೀ ದೊಡ್ಡ ಸುಲಿಗೆ ಯೋಜನೆಯಾಗಿದೆ. ಪ್ರಧಾನಿ ಮೋದಿ ಅವರು ಭ್ರಷ್ಟಾಚಾರದ ಚಾಂಪಿಯನ್ ಆಗಿದ್ದಾರೆ’ ಎಂದು ಕಿಡಿಕಾರಿದ್ದರು.
ಶುಕ್ರವಾರ ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಮಿತ್ ಶಾ ಅವರು ರಾಹುಲ್ ಹೇಳಿಕೆಗೆ ಪ್ರತಿ ಕ್ರಿಯಿಸಿ, “ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿಪಕ್ಷಗಳು ಚುನಾವಣ ಬಾಂಡ್‌ಗಳ ವಿಷಯವನ್ನು ಮುನ್ನೆಲೆಗೆ ತಂದಿವೆ. ಕಾಂಗ್ರೆಸ್ ಸಹಿತ ವಿಪಕ್ಷಗಳು ಕೂಡ ಚುನಾವಣ ಬಾಂಡ್‌ಗಳ ಮೂಲಕ ದೇಣಿಗೆ ಸಂಗ್ರಹಿಸಿವೆ. ಹೀಗಾಗಿ ನಾವು ಕೂಡ ಸುಲಿಗೆ ಮಾಡಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಬೇಕು’ ಎಂದು ತಿರುಗೇಟು ನೀಡಿ ದ್ದಾರೆ. ಕಾಂಗ್ರೆಸ್ ಸಂಸದರ ಸಂಖ್ಯೆಗೆ ಹೋಲಿಸಿ ದರೆ ಅದಕ್ಕಿಂತ ಹೆಚ್ಚು ದೇಣಿಗೆಯನ್ನು ಆ ಪಕ್ಷ ಪಡೆದಿದೆ ಎಂದೂ ದೂರಿದ್ದಾರೆ.
“ನಮ್ಮ ಸಂಸದರ ಸಂಖ್ಯೆಗೆ ಹೋಲಿಸಿದರೆ ನಾವು ಪಡೆದಿರುವ ದೇಣಿಗೆ ಕಡಿಮೆ. ಈ ಲೆಕ್ಕದಲ್ಲಿ ಬಿಜೆಪಿಗಿಂತ ಹೆಚ್ಚು ದೇಣಿಗೆಯನ್ನು ಕಾಂಗ್ರೆಸ್ ಪಡೆದಿದೆ. ಇದರಲ್ಲಿ ಅವರಿಗೆ ಯಾವುದೇ ಆಕ್ಷೇಪ ಇಲ್ಲ. ಕೇಂದ್ರ ಸರಕಾರದ ವಿರುದ್ಧ ಯಾವುದೇ ಭ್ರಷ್ಟಾಚಾರ, ಹಗರಣಗಳ ಕಳಂಕವಿಲ್ಲ. ಹೀಗಾಗಿ ಜನರಲ್ಲಿ ಗೊಂದಲ ಮೂಡಿಸಿಲು ವಿಪಕ್ಷಗಳು ಈ ರೀತಿ ಸುಳ್ಳು ಆರೋಪಗಳನ್ನು ಮಾಡುತ್ತಿವೆ. ಆದರೆ ಅವರು ಇದರಲ್ಲಿ ಯಶಸ್ವಿಯಾಗುವುದಿಲ್ಲ’ ಎಂದು ಅಮಿತ್ ಶಾ ಹೇಳಿದ್ದಾರೆ.