Advertisement

ರಿಷಭ್‌ ಆಟ ಮುಗಿಯಿತೇ?

10:11 AM Feb 02, 2020 | Lakshmi GovindaRaj |

19 ವರ್ಷಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಪ್ರವೇಶಿಸಿದ ರಿಷಭ್‌ ಪಂತ್‌ ಅವರ ಆಟ 22ನೇ ವರ್ಷಕ್ಕೆ ಮುಗಿಯುವ ಅಪಾಯ ಎದುರಾಗಿದೆ. 19 ವಯೋಮಿತಿ ಭಾರತೀಯ ತಂಡದಲ್ಲಿ ಮಿಂಚಿ, ಹಿರಿಯರ ತಂಡವನ್ನು ಪ್ರವೇಶಿಸಿದ ರಿಷಭ್‌, ಒಂದೆರಡು ವರ್ಷದಲ್ಲೇ ತಾರೆಯಂತೆ ಮಿನುಗತೊಡಗಿದರು. ವಿಕೆಟ್‌ ಕೀಪರ್‌/ಬ್ಯಾಟ್ಸ್‌ಮನ್‌ ಪಾತ್ರ ನಿರ್ವಹಿಸಿ ಈಗ ಕ್ರಿಕೆಟ್‌ನಿಂದ ದೂರವುಳಿದಿರುವ ಎಂ.ಎಸ್‌.ಧೋನಿ ಉತ್ತರಾಧಿಕಾರಿಯಾಗಲು ರಿಷಭ್‌ ಪಂತ್‌ ಅತ್ಯಂತ ಸೂಕ್ತ ಎಂದು ಭಾವಿಸಲಾಯಿತು. ಅವರಿಗೆ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಕೀಪಿಂಗ್‌ ಜವಾಬ್ದಾರಿಯನ್ನೂ ಹೊರಿಸಲಾಯಿತು. ಕಳೆದ ಒಂದು ವರ್ಷದಿಂದ ಲಯದ ಕೊರತೆ ಎದುರಿಸಿದ್ದರೂ ಇಡೀ ಬಿಸಿಸಿಐ ಅವರ ಬೆಂಬಲಕ್ಕೆ ನಿಂತಿತು.

Advertisement

ಆದರೆ…ಸತತವಾಗಿ ಬೇಜವಾಬ್ದಾರಿ ಹೊಡೆತ ಬಾರಿಸಿ ಬ್ಯಾಟಿಂಗ್‌ನಲ್ಲಿ ವಿಫ‌ಲವಾದರು, ವಿಕೆಟ್‌ ಕೀಪಿಂಗ್‌ನಲ್ಲಿ ಪದೇ ಪದೇ ತಪ್ಪು ಮಾಡಿದರು. ಪ್ರೇಕ್ಷಕರೂ ಅಪಹಾಸ್ಯ ಮಾಡುವಂತಾಯಿತು. ನೋಡುವಷ್ಟು ನೋಡಿ, ಕಾಯುವಷ್ಟು ಕಾದ ಬಿಸಿಸಿಐ ನಿಧಾನಕ್ಕೆ ರಿಷಭ್‌ರನ್ನು ಒಂದೊಂದೇ ಮಾದರಿಯಿಂದ ಹೊರಗಿಡುತ್ತ ಬಂತು. ಸದ್ಯ ಅವರು ಹೆಸರಿಗೆ 15ರ ಬಳಗದಲ್ಲಿದ್ದರಾದರೂ, ಶಾಶ್ವತವಾಗಿ ಹೊರಹೋಗುವುದಕ್ಕೆ ಬಹಳ ದಿನಗಳೇನು ಕಾಯಬೇಕಿಲ್ಲ. ಒಮ್ಮೆ ಪೂರ್ಣವಾಗಿ ಹೊರಬಿದ್ದರೆ ಮತ್ತೆ ಅವರು ತಂಡಕ್ಕೆ ಮರಳುವುದು ಬಹುಶಃ ಸಾಧ್ಯವಿಲ್ಲ. ಭಾರತೀಯ ಕ್ರಿಕೆಟ್‌ನಲ್ಲಿರುವ ಪೈಪೋಟಿಯೇ ಹಾಗಿದೆ.

ರಿಷಭ್‌ ತಪ್ಪಾದರೂ ಏನು?: 19 ವಯೋಮಿತಿ ವಿಶ್ವಕಪ್‌ನಲ್ಲಿ ಆಡಿದ ರಿಷಭ್‌, ಅಲ್ಲಿ ತಮ್ಮ ಪ್ರತಿಭೆಯಿಂದ ಮಿಂಚಿದರು. ಮುಂದೆ ಐಪಿಎಲ್‌ ತಂಡಗಳಲ್ಲಿ ಆಡಿ ಮೆರೆದರು. ಇದೇ ಆಧಾರದಲ್ಲಿ ಭಾರತೀಯ ತಂಡವನ್ನು ಪ್ರವೇಶಿಸಿದರು. ಈ ಹಂತದಲ್ಲಿ ಅವರ ದೋಷಗಳನ್ನು ಯಾರೂ ಗಮನಿಸಲಿಲ್ಲ. ಅವರನ್ನು ಹೊಗಳಿ ಅಟ್ಟಕ್ಕೇರಿಸಲಾಯಿತೇ ಹೊರತು, ಯಾರೂ ತಿದ್ದಿ ತೀಡಲಿಲ್ಲ. 2017, ಫೆ.1ರಂದು ಇಂಗ್ಲೆಂಡ್‌ ವಿರುದ್ಧ ಟಿ20 ಪಂದ್ಯದ ಮುಖಾಂತರ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ ಪ್ರವೇಶಿಸಿದರು. 2018 ಆಗಸ್ಟ್‌ನಲ್ಲಿ ಟೆಸ್ಟ್‌, 2018 ಅಕ್ಟೋಬರ್‌ನಲ್ಲಿ ಏಕದಿನ ಕ್ರಿಕೆಟ್‌ಗೆ ಕಾಲಿಟ್ಟರು. ಆರಂಭದಲ್ಲಿ ಅವರು ಕೈಯಿಟ್ಟೆದ್ದಲ್ಲ ಚಿನ್ನವಾಯಿತು.

ಟೆಸ್ಟ್‌ನಲ್ಲಿ ಆಸ್ಟ್ರೇಲಿಯ ನೆಲದಲ್ಲಿ ಶತಕ ಬಾರಿಸಿದರು. ಆಗ ಅವರು ಧೋನಿಗೆ ಸರಿಯಾದ ಉತ್ತರಾಧಿಕಾರಿ ಎಂದು ಎಲ್ಲರಿಗೂ ಅನಿಸಿತು. 2019ರ ಐಪಿಎಲ್‌ನಲ್ಲಂತೂ ರಿಷಭ್‌ ಪಂತ್‌ ಆಟ ಭರ್ಜರಿಯಾಗಿತ್ತು. ಶಿಖರ್‌ ಧವನ್‌ ಗಾಯಗೊಂಡು ಹೊರಬಿದ್ದಾಗ, ಪಂತ್‌ರನ್ನು ಬದಲೀ ಆಟಗಾರನಾಗಿ ತಕ್ಷಣವೇ ಸೇರಿಸಿಕೊಳ್ಳಲಾಯಿತು. ಏಕದಿನ ವಿಶ್ವಕಪ್‌ನಿಂದಲೇ ಅವರ ದುರಂತಜೀವನ ಶುರುವಾಗಿದ್ದು. ನ್ಯೂಜಿಲೆಂಡ್‌ ವಿರುದ್ಧ ಮಹತ್ವದ ಉಪಾಂತ್ಯದಲ್ಲಿ ಬಡ್ತಿ ಪಡೆದು ಬ್ಯಾಟಿಂಗ್‌ಗೆ ತೆರಳಿದ ಅವರು ಬೇಜವಾಬ್ದಾರಿ ಹೊಡೆತಕ್ಕೆ ಔಟಾದರು. ಮಧ್ಯಮಕ್ರಮಾಂಕ ಕೈಕೊಟ್ಟ ಪರಿಣಾಮ ಭಾರತ ಸೋಲುವಂತಾಯಿತು. ಅಲ್ಲಿಂದ ಒಬ್ಬೊಬ್ಬರೇ ರಿಷಭ್‌ ಹುಳುಕುಗಳ ಬಗ್ಗೆ ಪಟ್ಟಿ ಮಾಡತೊಡಗಿದರು.

ಮುಂದೆ ವೆಸ್ಟ್‌ ಇಂಡೀಸ್‌, ಬಾಂಗ್ಲಾದೇಶ, ಶ್ರೀಲಂಕಾ, ಆಸ್ಟ್ರೇಲಿಯ ವಿರುದ್ಧ ಆಡಿದರು. ಎಲ್ಲೂ ಯಶಸ್ವಿಯಾಗಲಿಲ್ಲ. ವಿಚಿತ್ರವೆಂದರೆ ಎಂದಿನ ಕಳಪೆ ಹೊಡೆತಕ್ಕೆ ಔಟಾಗತೊಡಗಿದರು. ಅವರ ಬ್ಯಾಟಿಂಗ್‌ನಲ್ಲಿ ತಾಂತ್ರಿಕದೋಷವಿರುವುದು ಸ್ಪಷ್ಟವಾಗಿ ಪ್ರಕಟವಾಯಿತು. ಹೊಡೆತಗಳ ಆಯ್ಕೆಯೂ ಸರಿಯಿಲ್ಲ, ವಿಕೆಟ್‌ಕೀಪಿಂಗ್‌ ಅಂತೂ ಕೇಳುವುದೇ ಬೇಡ. ಅವರ ಯಾವುದೇ ಡಿಆರ್‌ಎಸ್‌ ತೀರ್ಮಾನಗಳು ಸರಿಯಿರುತ್ತಿರಲಿಲ್ಲ. ಅಭಿಮಾನಿಗಳು ಧೋನಿಯೊಂದಿಗೆ ಅವರನ್ನು ಹೋಲಿಸತೊಡಗಿದರು, ಅಣಕಿಸತೊಡಗಿದರು. ಬಿಸಿಸಿಐ ಮತ್ತು ಭಾರತೀಯ ತಂಡ ಅವರನ್ನು ತಾಳ್ಮೆಯಿಂದಲೇ ಸಹಿಸಿಕೊಂಡಿತು. ಅವರು ಸುಧಾರಿಸಲಿಲ್ಲ. 11ರ ಬಳಗದಿಂದ ಹೊರಬಿದ್ದರು.

Advertisement

ಧೋನಿಯನ್ನು ಸರಿಗಟ್ಟುವವರಾರು?: ಭಾರತೀಯ ಕ್ರಿಕೆಟ್‌ ಹಾಗೂ ವಿಶ್ವ ಕ್ರಿಕೆಟ್‌ ಮಟ್ಟಿಗೆ ಎಂ.ಎಸ್‌.ಧೋನಿ ಒಬ್ಬ ದಂತಕಥೆ. ಒಬ್ಬ ನಾಯಕನಾಗಿ ಧೋನಿ ಸಾಧನೆಯನ್ನು ಸರಿಗಟ್ಟುವುದು ಕಷ್ಟ. ವಿಕೆಟ್‌ಕೀಪರ್‌, ಬ್ಯಾಟ್ಸ್‌ಮನ್‌ ಆಗಿಯೂ ಅವರ ಸಾಧನೆ ಅನನ್ಯ. ಆದರೆ ಅದನ್ನು ಸರಿಗಟ್ಟುವುದು ಕಷ್ಟವಲ್ಲ. ಮೂರೂ ಪಾತ್ರವನ್ನು ಒಂದೇ ಬಾರಿಗೆ ನಿಭಾಯಿಸಿದ ಧೋನಿಗೆ ಸರಿಸಮನಾದ ಇನ್ನೊಬ್ಬನನ್ನು ತರುವುದು ಬಹುಶಃ ಸಾಧ್ಯವೇ ಇಲ್ಲ. ಅದೇ ಕಾರಣಕ್ಕೆ ಸದ್ಯ ಧೋನಿ ಅನುಪಸ್ಥಿತಿಯಲ್ಲಿ ಇನ್ನೂ ಅವರ ಜಾಗಕ್ಕೆ ಸೂಕ್ತ ವ್ಯಕ್ತಿಯನ್ನು ತರಲಾಗದೇ ಭಾರತೀಯ ತಂಡ ಪರದಾಡುತ್ತಿದೆ.

ಕೆ.ಎಲ್‌.ರಾಹುಲ್‌ ಶಾಶ್ವತ ಆಯ್ಕೆಯೇ?: ಕರ್ನಾಟಕ ತಂಡದಲ್ಲಿದ್ದಾಗ ಕೆ.ಎಲ್‌.ರಾಹುಲ್‌ ವಿಕೆಟ್‌ ಕೀಪರ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. ಐಪಿಎಲ್‌ ತಂಡಗಳಲ್ಲಿ ಆಡಿದ್ದಾಗಲೂ ವಿಕೆಟ್‌ ಕೀಪರ್‌ ಪಾತ್ರನಿರ್ವಹಿಸಿದ್ದಾರೆ. ಈಗ ರಿಷಭ್‌ ವಿಫ‌ಲಗೊಂಡ ಹಿನ್ನೆಲೆಯಲ್ಲಿ ತಾತ್ಕಾಲಿಕ ಆಯ್ಕೆಯೆಂಬಂತೆ ರಾಹುಲ್‌ರನ್ನು ವಿಕೆಟ್‌ ಕೀಪರ್‌ ಮಾಡಲಾಗಿದೆ. ರಾಹುಲ್‌ ಬ್ಯಾಟಿಂಗ್‌/ವಿಕೆಟ್‌ಕೀಪಿಂಗ್‌ ಎರಡೂ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಮತ್ತೆ ಅವರು ಟೆಸ್ಟ್‌ ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆಯೂ ಇದೆ. ಆದರೆ ಸ್ವತಃ ಭಾರತೀಯ ಕ್ರಿಕೆಟ್‌ ತಂಡವೂ ರಾಹುಲ್‌ರನ್ನು ಒಂದು ಪ್ರಯೋಗವೆಂಬಂತೆ ಗ್ಲೌಸ್‌ ಕೊಟ್ಟು ನಿಲ್ಲಿಸಿದೆ. ಇದು ಶಾಶ್ವತ ವ್ಯವಸ್ಥೆ ಎಂಬ ನಂಬಿಕೆ ಅವರಿಗೂ ಇದ್ದಂತಿಲ್ಲ. ರಾಹುಲ್‌ಗ‌ಂತೂ ಈ ಬಗ್ಗೆ ಖಚಿತತೆಯಿರಲು ಸಾಧ್ಯವಿಲ್ಲ. ಬ್ಯಾಟ್ಸ್‌ಮನ್‌ ಆಗಿ ರಾಹುಲ್‌ ಇನ್ನೂ ಅತ್ಯದ್ಭುತ ಇನಿಂಗ್ಸ್‌ ಒಂದನ್ನು ಆಡಿಲ್ಲ. ಅಲ್ಲಿಯವರೆಗೆ ಅವರ ಸ್ಥಾನವೂ ಖಾತ್ರಿಯಲ್ಲ!

ಸ್ಯಾಮ್ಸನ್‌ಗೆಕೆ ಅವಕಾಶ ನೀಡುತ್ತಿಲ್ಲ?: ಕೇರಳ ವಿಕೆಟ್‌ಕೀಪರ್‌/ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ ತಾನು ಪ್ರತಿಭಾವಂತ ಎಂದು ಹಲವು ಸಂದರ್ಭಗಳಲ್ಲಿ ಸಾಬೀತು ಮಾಡಿದ್ದಾರೆ. ಐಪಿಎಲ್‌ನಲ್ಲೂ ಮಿಂಚಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲೂ ಉತ್ತಮ ಆಟವಾಡಿದ್ದಾರೆ. ರಿಷಭ್‌ ಪಂತ್‌ ಜಾಗದಲ್ಲಿ ಸಂಜುವನ್ನು ಆಯ್ಕೆ ಮಾಡಿಕೊಳ್ಳುವುದು ಕಷ್ಟವೇನಲ್ಲ. ಬಿಸಿಸಿಐ ಈ ವಿಚಾರದಲ್ಲಿ ಖಚಿತ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಸಂಜುವನ್ನು 15ರ ಬಳಗಕ್ಕೆ ಸೇರಿಸಿಕೊಂಡರೂ, 11ರ ಬಳಗದಲ್ಲಿ ಸೇರಿಸಿಕೊಳ್ಳುತ್ತಿಲ್ಲ. ಈ ವರ್ತನೆಯ ಹಿಂದಿನ ಕಾರಣ ತಿಳಿಯುತ್ತಿಲ್ಲ. ಬಹುಶಃ ರಿಷಭ್‌ ಪಂತ್‌ಗೂ ಇನ್ನೂ ಒಂದು ಅವಕಾಶ ಕೊಡುವ ದೂರದ ಉದ್ದೇಶವೂ ಇದ್ದಿರಬಹುದು.

Advertisement

Udayavani is now on Telegram. Click here to join our channel and stay updated with the latest news.

Next