Advertisement

ರಬ್ಬರ್‌ನಿಂದ ಹರಡಿತೇ ಅಡಿಕೆಗೆ ಎಲೆಚುಕ್ಕಿ ರೋಗ ?

11:39 PM Jul 14, 2023 | Team Udayavani |

ಸುಳ್ಯ: ಅಡಿಕೆಯಲ್ಲಿ ಕಂಡುಬಂದಿರುವ ಎಲೆಚುಕ್ಕಿ ರೋಗಕ್ಕೆ ರಬ್ಬರ್‌ ಮೂಲ ಎಂಬ ಗುಮಾನಿ ಬೆಳೆಗಾರರಲ್ಲಿ ಎದ್ದಿದ್ದು, ಇದಕ್ಕಾಗಿ ವೈಜ್ಞಾನಿಕ ಸಂಶೋಧನೆಗೆ ರಬ್ಬರ್‌ ಮಂಡಳಿ ಮುಂದಾಗಿದ್ದು, ಕೃಷಿಕರ ಪ್ರಶ್ನೆಗಳಿಗೆ ಉತ್ತರ ಸಿಗುವ ನಿರೀಕ್ಷೆ ವ್ಯಕ್ತವಾಗಿದೆ.

Advertisement

ಅಡಿಕೆಗೆ ಬಾಧಿಸಿದ ಎಲೆಚುಕ್ಕಿ ರೋಗಕ್ಕೆ ರಬ್ಬರ್‌ನಲ್ಲಿದ್ದ ಎಲೆಚುಕ್ಕಿ ರೋಗ ಮೂಲ ಕಾರಣವೇ ಎಂಬ ಪ್ರಶ್ನೆ ಬೆಳೆಗಾರರಲ್ಲಿ ಎದ್ದಿದ್ದು, ಇದನ್ನು ರಾಷ್ಟ್ರಮಟ್ಟದ ರಬ್ಬರ್‌ ಮಂಡಳಿಯ ಗಮನಕ್ಕೆ ತರಲಾಗಿದ್ದು, ವೈಜ್ಞಾನಿಕ ಸಂಶೋಧನೆಗೆ ಮಂಡಳಿ ಮುಂದಾಗಿದೆ.

ಕೇರಳದ ಕೇಂದ್ರ ಕಚೇರಿ ಕೊಟ್ಟಾಯಂನಲ್ಲಿ ನಡೆದ ರಾಷ್ಟ್ರಮಟ್ಟದ ರಬ್ಬರ್‌ ಮಂಡಳಿಯ ಕಾರ್ಯಕಾರಿ ಸಭೆಯಲ್ಲಿ ಕಾರ್ಯಕಾರಿ ಸದಸ್ಯ ಸುಳ್ಯದ ಮುಳಿಯ ಕೇಶವ ಭಟ್‌ ಅವರು ಈ ಗುಮಾನಿಗಳ ಬಗ್ಗೆ ವಿಷಯ ಪ್ರಸ್ತಾವಿಸಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಲಿಖೀತವಾಗಿ ನೀಡುವಂತೆ ಮಂಡಳಿ ಅಧ್ಯಕ್ಷರು ಸೂಚಿಸಿದ್ದಾರೆ. ಅದರಂತೆ ರೋಗ ಕಾಣಿಸಿಕೊಂಡ ವ್ಯಾಪ್ತಿಗಳ ಪಟ್ಟಿಯನ್ನು ಕೇಶವ ಭಟ್‌ ಅವರು ಸಂಗ್ರಹಿಸಿ ಮಂಡಳಿಗೆ ಸಲ್ಲಿಸಲಿದ್ದಾರೆ.

ಬಳಿಕ ಶೀಘ್ರದಲ್ಲೇ ರಬ್ಬರ್‌ ಮಂಡಳಿಯ ವಿಜ್ಞಾನಿಗಳನ್ನು ದಕ್ಷಿಣ ಕನ್ನಡ ಸಹಿತ ಎಲೆಚುಕ್ಕಿ ರೋಗಕ್ಕೆ ತುತ್ತಾಗಿರುವ ರಾಜ್ಯದ ಅಡಿಕೆ ತೋಟಗಳಿಗೆ ಕಳುಹಿಸಿ ಸಂಶೋಧನೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ತಂಡ ರೋಗ ಬಾಧಿತ ತೋಟಗಳಿಗೆ ಭೇಟಿ ನೀಡಿ ವಾಸ್ತವತೆ ಅರಿಯುವ ಕೆಲಸ ಮಾಡಲಿದೆ.

ಏನಿದು ಎಲೆಚುಕ್ಕಿ ರೋಗ
ಈ ಎಲೆಚುಕ್ಕಿ ರೋಗ ಎಂಬುದು ಶಿಲೀಂದ್ರಗಳ ಕಾಟದಿಂದ ಕಾಣಿಸಿ ಕೊಳ್ಳುವ ಸಮಸ್ಯೆ. ಇದು ಮೊದಲಿಗೆ ರಬ್ಬರ್‌ನಲ್ಲೂ ಕಾಣಿಸಿಕೊಂಡಿತ್ತು. ಇತ್ತೀಚೆಗೆ ದ.ಕ., ಕಾಸರಗೋಡು ಭಾಗದ ಅಡಿಕೆ ಬೆಳೆಯಲ್ಲೂ ಎಲೆಚುಕ್ಕಿ ರೋಗ ಕಾಣಿಸಿಕೊಂಡಿತ್ತು. ಇದರಿಂದ ರಬ್ಬರ್‌ನಿಂದ ಅಡಿಕೆಗೆ ರೋಗ ಹರಡಿದೆಯೇ ಎಂಬ ಶಂಕೆ ಸ್ಥಳೀಯ ಕೃಷಿಕರಲ್ಲಿ ಮೂಡಿತ್ತು.

Advertisement

ಎಲೆಚುಕ್ಕಿರೋಗ ರಬ್ಬರ್‌ ಹಾಗೂ ಅಡಿಕೆಯಲ್ಲಿ ಕಂಡುಬಂದಿದ್ದು, ರಬ್ಬರ್‌ನಿಂದ ಅಡಿಕೆಗೆ ರೋಗ ಹರಡಿದೆಯಾ ಎಂಬ ಪ್ರಶ್ನೆಗಳು ರೈತರಲ್ಲಿದ್ದವು. ನಾನು ಅದನ್ನು ರಬ್ಬರ್‌ ಮಂಡಳಿ ಸಭೆಯಲ್ಲಿ ಪ್ರಸ್ತಾವಿಸಿದ್ದೇನೆ. ರಬ್ಬರ್‌ ಮಂಡಳಿ ಅಧ್ಯಕ್ಷ ಪಶ್ಚಿಮಬಂಗಾಲದ ಡಾ| ಸಾವರ್‌ ಧನಾನಿಯಾ ಹಾಗೂ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ತಮಿಳುನಾಡಿನ ವಸಂತ ಗೇಶನ್‌ ಅವರು ಹೆಚ್ಚಿನ ಆಸಕ್ತಿ ವಹಿಸಿ ಪೂರಕ ಸ್ಪಂದನೆ ನೀಡಿ, ಸಂಶೋಧನೆಗೆ ಪೂರಕ ಮಾಹಿತಿ ಸಂಗ್ರಹಕ್ಕೆ ತಿಳಿಸಿದ್ದಾರೆ.
– ಮುಳಿಯ ಕೇಶವ ಭಟ್‌ , ರಬ್ಬರ್‌ ಮಂಡಳಿ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next