ವಿಜಯಪುರ: ಮುಸ್ಲಿಮರ ಓಲೈಸಿ ಮಾತನಾಡಿದರೆ ಜಾತ್ಯತೀತವಾದ, ಹಿಂದೂಗಳ ಬಗ್ಗೆ ಮಾತನಾಡಿದರೆ ಜಾತಿವಾದ ಎಂದರೆ ಹೇಗೆ? ಇಷ್ಟಕ್ಕೂ ಅಲ್ಪಸಂಖ್ಯಾತ ಎಂದರೆ ಮುಸ್ಲಿಮರು ಮಾತ್ರವಲ್ಲ. ಕಳೆದ ಐದು ವರ್ಷಗಳ ಆಡಳಿತದಲ್ಲಿ ನಗರದಲ್ಲಿ ಹಿಂದೂಗಳು ಇನ್ನಿಲ್ಲದ ಹಿಂಸೆ ಅನುಭವಿಸಿದ್ದಾರೆ. ಈ ಅನ್ಯಾಯ ಕುರಿತು ಧ್ವನಿ ಎತ್ತಿದ್ದೇನೆ.
ಹಿಂದೂಗಳ ಬಗ್ಗೆ ಮಾತನಾಡುವುದೇ ತಪ್ಪಾ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ
ಪ್ರಶ್ನಿಸಿದ್ದಾರೆ.
ನಗರದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು, “ಬುರ್ಖಾ, ಟೋಪಿ ಹಾಕುವವರು ನನ್ನ ಪಕ್ಕದಲ್ಲಿ ಬರುವಂತಿಲ್ಲ, ಕಚೇರಿಗೂ ಸುಳಿಯುವಂತಿಲ್ಲ’ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕುರಿತಂತೆ ಗುರುವಾರ ಪತ್ರಕರ್ತರು ಮಾಧ್ಯಮಗೋಷ್ಠಿಯಲ್ಲಿ ಪ್ರತಿಕ್ರಿಯಿಸಲು ಆಗ್ರಹಿಸಿದಾಗ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಳೆದ ಐದು ವರ್ಷಗಳಲ್ಲಿ ಹಿಂದೂಗಳಿಗೆ ಮುಸ್ಲಿಮರಿಂದ ಆಗಿರುವ ಅನ್ಯಾಯ ಕುರಿತು, ಮುಸ್ಲಿಮರಿಂದ ನಡೆಯುತ್ತಿರುವ ಗೂಂಡಾಗಿರಿ, ಹಫ್ತಾ ವಸೂಲಿ ತಡೆಯುವ ಕುರಿತು ಮಾತನಾಡಿದ್ದೇನೆ. ಇದನ್ನೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ. ದೇಶದ್ರೋಹ ಕುರಿತು ಮಾತನಾಡುವ ಅಸಾದುದ್ದೀನ್ ಓವೈಸಿ ಕುರಿತು ಮೌನ ವಹಿಸುವ ಮಾಧ್ಯಮಗಳು ಹಿಂದೂಗಳ ಪರ ಧ್ವನಿ ಎತ್ತುವ ನನ್ನ ಹೇಳಿಕೆಯನ್ನೇ ವಿವಾದಿತ ಎಂದು ಆಕ್ಷೇಪಿಸಿ ಸ್ಪಷ್ಟೀಕರಣಕ್ಕೆ ಮುಂದಾಗುತ್ತಿವೆ. ಇಂತಹದಕ್ಕೆಲ್ಲ ನಾನು ಹೆದರುವ ವ್ಯಕ್ತಿಯಲ್ಲ ಎಂದು ಹರಿಹಾಯ್ದರು.