Advertisement

ಹಸಿದವರಿಗೆ ಊಟ ಕೊಡೋದು ತಪ್ಪೇ?

11:49 AM Aug 06, 2017 | Team Udayavani |

ಬೆಂಗಳೂರು: ನಗರದಲ್ಲಿನ ಬಡವರಿಗೆ ರಿಯಾಯಿತಿ ದರದಲ್ಲಿ ಆಹಾರ ಪೂರೈಕೆ ಮಾಡುವ ಉದ್ದೇಶದಿಂದ ಇಂದಿರಾ ಕ್ಯಾಂಟೀನ್‌ ಯೋಜನೆ ಜಾರಿಗೊಳಿಸಲಾಗುತ್ತಿದೆ. ಆದರೆ, ಬಿಬಿಎಂಪಿ ವತಿಯಿಂದ ಯಾವುದೇ ಭಾಗದಲ್ಲಿ ಅಧಿಕೃತ ಪಾರ್ಕ್‌ ಮತ್ತು ಆಟದ ಮೈದಾನದಲ್ಲಿ ಕ್ಯಾಂಟೀನ್‌ ನಿರ್ಮಿಸಿಲ್ಲ. ಕೆಲವರು ದುರುದ್ದೇಶದಿಂದ ಕ್ಯಾಂಟೀನ್‌ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. 

Advertisement

ಶನಿವಾರ ನಗರ ಪ್ರದಕ್ಷಿಣೆ ವೇಳೆ ಅವರು ಅಡುಗೋಡಿ ವಾರ್ಡ್‌ ಮತ್ತು ಜನನಗರ ವಾರ್ಡ್‌ನಲ್ಲಿ ನಿರ್ಮಿಸಿರುವ ಕ್ಯಾಂಟೀನ್‌ಗಳನ್ನು ಪರಿಶೀಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಷ್ಟೇ ವಿರೋಧಗಳಿದ್ದರೂ ಆಗಸ್ಟ್‌ 16ಕ್ಕೆ 125 ಕ್ಯಾಂಟೀನ್‌ಗಳಿಗೆ ಚಾಲನೆ ನೀಡಲಾಗುವುದು.

ಸರ್ಕಾರ ಹಸಿದವರಿಗಾಗಿ ಜಾರಿಗೊಳಿಸುವ ಪ್ರತಿಯೊಂದು ಕಾರ್ಯಕ್ರಮವನ್ನು ಕೆಲವರು ವಿರೋಧಿಸುತ್ತಾರೆ. ಬಡವರಿಗಾಗಿ ಮಾಡುವ ಕಾರ್ಯಕ್ರಮವನ್ನು ಅವರು ವಿರೋಧಿಸುವಂತಹ ಮನಃಸ್ಥಿತಿ ಹೊಂದಿದ್ದಾರೆ. ಈ ಹಿಂದೆ ಅನ್ನಭಾಗ್ಯ ಯೋಜನೆ ಘೋಷಿಸಿದಾಗ ಬಿಜೆಪಿ ಶಾಸಕರೊಬ್ಬರು, ಉಚಿತವಾಗಿ ಅಕ್ಕಿ ನೀಡುವುದರಿಂದ ಜನರು ಸೋಮಾರಿಗಳಾಗುತ್ತಾರೆ. ನಮಗೆ ಕೂಲಿಗಳು ಸಿಗುವುದಿಲ್ಲ ಎಂದಿದ್ದರು. 

ಅವರು ಎಷ್ಟು ಕೀಳು ಮಟ್ಟದಲ್ಲಿ ಯೋಚನೆ ಮಾಡುತ್ತಾರೆ ಎಂಬುದಕ್ಕೆ ಇದೊಂದು ನಿದರ್ಶನ. ರಾಜ್ಯ ಯಾವುದೇ ವ್ಯಕ್ತಿ ಹಸಿವಿನಿಂದ ಮಲಗಬಾರದು ಎಂಬುದೇ ಸರ್ಕಾರ ಉದ್ದೇಶವಾಗಿದ್ದು, ಇಂತಹ ಕಾರ್ಯಕ್ರಮಗಳಿಗೆ ಮಾಧ್ಯಮಗಳು ನಮಗೆ ಬೆಂಬಲ ನೀಡಬೇಕು ಎಂದು ಕೋರಿದರು. ಈ ವೇಳೆ ಸುದ್ದಿಗಾರರ ಪ್ರಶ್ನೆಗಳಿಗೆ ಮುಖ್ಯಮಂತ್ರಿಗಳು ಉತ್ತರಿಸಿದ್ದು ಹೀಗೆ…

ಪ್ರಶ್ನೆ: ಇಂದಿರಾ ಕ್ಯಾಂಟೀನ್‌ಗಳಿಗೆ ನಗರ ಉದ್ಯಾನಗಳು ಹಾಗೂ ಆಟದ ಮೈದಾನ ಬಳಕೆ ಮಾಡುತ್ತಿರುವುದು ಎಷ್ಟು ಸರಿ?
ಉತ್ತರ:
ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕಾಗಿ ನಗರದ ಯಾವುದೇ ಭಾಗದಲ್ಲಿಯೂ ಅಧಿಕೃತ ಉದ್ಯಾನ ಹಾಗೂ ಆಟದ ಮೈದಾನ ಜಾಗವನ್ನು ಬಳಕೆ ಮಾಡಿಲ್ಲ. ಪಾಲಿಕೆಯಿಂದ ಖಾಲಿ ಬಿಡಲಾಗಿದ್ದ ಜಾಗಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಒಂದೊಮ್ಮೆ ಇಂತಹ ಜಾಗ ಬಳಕೆ ಮಾಡಿರುವ ಬಗ್ಗೆ ದಾಖಲೆಗಳಿದ್ದರೆ ಕೊಡಿ ಕ್ರಮಕೈಗೊಳ್ಳುತ್ತೇವೆ.

Advertisement

ಪ್ರಶ್ನೆ: ಇಂದಿರಾ ಕ್ಯಾಂಟೀನ್‌ ಯೋಜನೆ ಜಾರಿಗೊಳಿಸಲು ತರಾತುರಿ ಏಕೆ?
ಉತ್ತರ:
ಬಡವರಿಗಾಗಿ ರೂಪಿಸಲಾಗಿರುವ ಯೋಜನೆಗಳನ್ನು ತರಾತುರಿಯಲ್ಲಿಯೇ ಜಾರಿಗೊಳಿಸಬೇಕಾಗುತ್ತದೆ. ಯೋಜನೆಯಿಂದ ನಿತ್ಯ 3 ಲಕ್ಷ ಜನರಿಗೆ ಅನುಕೂಲವಾಗಲಿದೆ. ಬಜೆಟ್‌ ಮಂಡಿಸಿ ನಾಲ್ಕು ತಿಂಗಳಾಗಿದ್ದು, ಯೋಜನೆಗೆ ಜಾರಿಗೊಳಿಸಲು ಮುಂದಾಗಿದ್ದೇವೆ. ಯೋಜನೆ ವಿಳಂಬ ಮಾಡಿದರೆ ಸೋಮಾರಿತನ ಅಂತೀರಾ, ಶೀಘ್ರ ಜಾರಿಗೊಳಿಸಿದರೆ ತರಾತುರಿ ಎನ್ನುತ್ತೀರಾ.

ಪ್ರಶ್ನೆ: ಕೆಲವು ಕಡೆಗಳಲ್ಲಿ ಆಟದ ಮೈದಾನದಲ್ಲಿದ್ದ ಉಪಕರಣಗಳನ್ನು ತೆಗೆದು  ಕ್ಯಾಂಟೀನ್‌ ನಿರ್ಮಿಸಲಾಗುತ್ತಿದೆ?
ಉತ್ತರ:
ಕೆಲವು ಕಡೆಗಳಲ್ಲಿ ಬಿಬಿಎಂಪಿಯ ಖಾಲಿ ಜಾಗಗಳಲ್ಲಿ ಮಕ್ಕಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಆಟ ಆಡುವ ಉಪಕರಣಗಳನ್ನು ಅಳವಡಿಕೆ ಮಾಡಲಾಗಿರುತ್ತದೆ. ಅದನ್ನೆ ಸ್ಥಳೀಯರು ಉದ್ಯಾನ ಅಥವಾ ಆಟದ ಮೈದಾನ ಎಂದು ತಪ್ಪಾಗಿ ಅರ್ಥ ಮಾಡಿಕೊಂಡಿರುತ್ತಾರೆ. ಒಂದೊಮ್ಮೆ ಅಂತಹ ಸ್ಥಳಗಳಲ್ಲಿ ಕ್ಯಾಂಟೀನ್‌ ನಿರ್ಮಿಸುತ್ತಿದ್ದರೂ ಅದರ ಪಕ್ಕದಲ್ಲಿಯೇ ಮಕ್ಕಳಿಗೆ ಆಟವಾಡಲು ಅವಕಾಶ ಕಲ್ಪಿಸಲಾಗುವುದು. ಬಡವರಿಗೆ ಊಟ ನೀಡುವ ಯೋಜನೆಗೆ ಯಾರೂ ವಿರೋಧಿಸುವುದು ಬೇಡ.

ಪ್ರಶ್ನೆ: ಆಗಸ್ಟ್‌ 15ರ ವೇಳೆಗೆ 125 ಕ್ಯಾಂಟೀನ್‌ ಸಿದ್ಧವಾಗುತ್ತವೆಯೇ?
ಉತ್ತರ:
ಯೋಜನೆ ಅನುಷ್ಠಾನಕ್ಕೆ ಜೂನ್‌ 12ರಂದು ಆದೇಶ ನೀಡಲಾಗಿದೆ. ಎರಡೇ ತಿಂಗಳಲ್ಲಿ 70 ಕಡೆಗಳಲ್ಲಿ ಕ್ಯಾಂಟೀನ್‌ ನಿರ್ಮಾಣ ಪೂರ್ಣಗೊಳಿಸಲಾಗಿದ್ದು, ಹಲವಾರು ಕಡೆಗಳಲ್ಲಿ ಕ್ಯಾಂಟೀನ್‌ ನಿರ್ಮಾಣ ಪ್ರಗತಿಯಲ್ಲಿದೆ. ನಮಗೆ ಇನ್ನೂ 10 ದಿನಗಳಿದ್ದು ಆಗಸ್ಟ್‌ 16ರ ವೇಳೆಗೆ 125 ಕ್ಯಾಂಟೀನ್‌ಗಳು ಹಾಗೂ ಉಳಿದ ಕ್ಯಾಂಟೀನ್‌ಗಳು ಅಕ್ಟೋಬರ್‌ 2 ರಂದು ಉದ್ಘಾಟನೆ ಮಾಡಲಾಗುವುದು.

ಪ್ರಶ್ನೆ: ಕ್ಯಾಂಟೀನ್‌ ಉದ್ಘಾಟನೆ ದಿನಾಂಕ ಆ.16ಕ್ಕೆ ಹೋಗಿದೆ?
ಉತ್ತರ:
ಆಗಸ್ಟ್‌ 15 ರಂದು ಸ್ವತಂತ್ರ್ಯ ದಿನಾಚರಣೆ ಇರುವ ಹಿನ್ನೆಲೆಯಲ್ಲಿ ಕ್ಯಾಂಟೀನ್‌ ಉದ್ಘಾಟನೆ ಕಾರ್ಯಕ್ರಮವನ್ನು 16ರಂದು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಇಂದಿರಾ ಕ್ಯಾಂಟೀನ್‌ ಉದ್ಘಾಟನೆ ಕಾರ್ಯಕ್ರಮಕ್ಕೆ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಆಹ್ವಾನಿಸಲಾಗಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗುವುದಾಗಿ ಅವರು ಭರವಸೆ ನೀಡಿದ್ದಾರೆ. 

ಪ್ರಶ್ನೆ: ನಗರ ಪ್ರದಕ್ಷಿಣೆ ವೇಳೆ ಕಾಮಗಾರಿಗಳನ್ನು ಪೂರ್ಣಕ್ಕೆ ಅಕ್ಟೋಬರ್‌, ಡಿಸೆಂಬರ್‌ ಗಡುವು ನೀಡಿದ್ದು, ಅವಧಿ ಪೂರ್ವ ಚುನಾವಣೆಯ ಯೋಚನೆಯಿದೆಯೇ?
ಉತ್ತರ:
ನೋಡಿ, ನಾನು ಮೇ 25ರಂದು ಪ್ರಮಾಣ ವಚನ ಸ್ವೀಕರಿಸಿದ್ದು, ಮೇ 26ರಂದು ಸರ್ಕಾರ ರಚನೆಯಾಗಿದೆ. ಸಂಪೂರ್ಣ ಐದು ವರ್ಷಗಳ ಕಾಲ ಆಡಳಿತ ನಡೆಸಲಿದ್ದು, ಅವಧಿಪೂರ್ವ ಚುನಾವಣೆಯ ಪ್ರಶ್ನೆಯೇ ಇಲ್ಲ. ಈ ಬಗ್ಗೆ ನಿಮಗೇನಾದರೂ ಗೊಂದಲವಿದೆಯೇ?

Advertisement

Udayavani is now on Telegram. Click here to join our channel and stay updated with the latest news.

Next