Advertisement

Illegal: ಹಾಸ್ಟೆಲ್‌ ವಾರ್ಡನ್‌ ನೇಮಕಾತಿಯಲ್ಲೂ ಅಕ್ರಮ?

10:58 PM Nov 18, 2023 | Pranav MS |

ಕಲಬುರಗಿ: ಪ್ರಸಕ್ತ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಡೆದಿರುವ ವಿದ್ಯಾರ್ಥಿ ನಿಲಯಗಳ 140 ವಾರ್ಡನ್‌ (ಗ್ರೂಪ್‌-ಸಿ ತಾಂತ್ರಿಕೇತರ ವೃಂದ) ನೇಮಕದಲ್ಲಿ ಕಲಬುರಗಿ, ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಗಳಿಗೆ ಹೆಚ್ಚು ಹುದ್ದೆಗಳು ದಕ್ಕಿದ್ದು, ಇಲ್ಲೂ ಅಕ್ರಮ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ.

Advertisement

ಕರ್ನಾಟಕ ಲೋಕಸೇವಾ ಆಯೋಗದ ಅಧಿ ಸೂಚನೆ ಸಂಖ್ಯೆ: ಪಿಎಸ್‌ಸಿ 14 ಆರ್‌ಟಿ (4) ಬಿ-1, 2020, 11-08-2023ರಂತೆ ಉಳಿಕೆ ಮೂಲ ವೃಂದದ (ವೃಂದೇತರ) 80 ಮತ್ತು ಹೈದರಾಬಾದ್‌ ಕರ್ನಾಟಕ ವೃಂದದ 60 ಹುದ್ದೆಗಳು ಸಹಿತ ಒಟ್ಟು 140 ಹುದ್ದೆಗಳಿಗೆ ಆಯ್ಕೆಪಟ್ಟಿ ಪ್ರಕಟಿಸಲಾಗಿದೆ. ಇದರಲ್ಲಿ ಅನುಕ್ರಮವಾಗಿ ಕಲ್ಯಾಣ ಕರ್ನಾಟಕದ ಕಲಬುರಗಿ, ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಯ ಅಭ್ಯರ್ಥಿಗಳೇ ಹೆಚ್ಚಿದ್ದಾರೆ. ಹೀಗಾಗಿ ಪಿಎಸ್‌ಐ ನೇಮಕಾತಿ ಅಕ್ರಮದಂತೆ ಈ ವಾರ್ಡನ್‌ ಹುದ್ದೆಗಳ ನೇಮಕಾತಿಯಲ್ಲೂ ಅಕ್ರಮ ನಡೆದಿರುವ ಅನುಮಾನ ದಟ್ಟವಾಗಿದೆ.

ಅಫಜಲಪುರಕ್ಕೆ ಹೆಚ್ಚು
ಈಗ ಪ್ರಕಟವಾಗಿರುವ ಪಟ್ಟಿಯಲ್ಲಿ ಉಳಿಕೆ ಮೂಲ ವೃಂದದ ಹುದ್ದೆಗಳಿಗೆ ಒಟ್ಟು 80 ಅಭ್ಯರ್ಥಿಗಳ ಪಟ್ಟಿಯಲ್ಲಿ 18 ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕದ ಅಫಜಲಪುರ ತಾಲೂಕಿನವರೇ ಆಗಿದ್ದು, ಅತಿ ಹೆಚ್ಚು ಅಂಕಗಳೊಂದಿಗೆ ಉಳಿಕೆ ಮೂಲ ವೃಂದದಲ್ಲಿ ಆಯ್ಕೆಯಾಗಿರುತ್ತಾರೆ. ಪಟ್ಟಿಯ ಮೊದಲ ಐದು ರ್‍ಯಾಂಕುಗಳೂ ಅಫಜಲಪುರದ ಪಾಲಾಗಿವೆ.
ಮೂಲ ವೃಂದದ ಹುದ್ದೆಗಳಿಗೆ ಸಾಮಾನ್ಯವಾಗಿ ಅದೇ ಭಾಗದ ಅಭ್ಯರ್ಥಿಗಳು ಆಯ್ಕೆಯಾಗುವುದು ಸಹಜ. ಆದರೆ ಪ್ರಸ್ತುತ ವಾರ್ಡನ್‌ ಆಯ್ಕೆ ಪಟ್ಟಿ ಅವಲೋಕಿಸಿದಾಗ ಉಳಿಕೆ ಮೂಲ ವೃಂದದ 80 ಹುದ್ದೆಗಳ ಆಯ್ಕೆಪಟ್ಟಿಯಲ್ಲಿ ಶೇ.50ರಷ್ಟು ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕದವರು ಎನ್ನುವುದಕ್ಕಿಂತ ಕಲಬುರಗಿಯವರಾಗಿರುವುದು ಅಕ್ರಮದ ಶಂಕೆ ಮೂಡಿಸಿದೆ.

ಕಲ್ಯಾಣ ಕರ್ನಾಟಕ ವೃಂದದಲ್ಲೂ ಹೆಚ್ಚು
ಕಲ್ಯಾಣ ಕರ್ನಾಟಕ ವೃಂದದ 60 ಅಭ್ಯರ್ಥಿಗಳ ಪಟ್ಟಿಯಲ್ಲೂ ಕಲಬುರಗಿಯವರೇ(30) ಹೆಚ್ಚಾಗಿ ದ್ದಾರೆ. ಉಳಿದಂತೆ ಹೆಚ್ಚು ಹುದ್ದೆಗಳು ವಿಜಯಪುರ (13) ಹಾಗೂ ಬೆಳಗಾವಿ (15) ಪಾಲಾಗಿವೆ. ಕೊಪ್ಪಳ, ಯಾದಗಿರಿ, ಬಳ್ಳಾರಿ, ರಾಯಚೂರು ಜಿಲ್ಲೆಗಳಿಗೂ ಹೆಚ್ಚಿನ ಸ್ಥಾನಗಳು ದಕ್ಕಿವೆ. ಇದರಿಂದಾಗಿ ವೃಂದ ನೇಮಕಾತಿಯಲ್ಲಿ ಕಲ್ಯಾಣದ ಪಾಲು ಹೆಚ್ಚು ದಾಖಲಾಗಿರುವುದು ಪಟ್ಟಿಯಲ್ಲಿ ಕಂಡು ಬರುತ್ತದೆ.

ಮೂಲ ವೃಂದದ ಆಯ್ಕೆಪಟ್ಟಿ ಕ್ರಮ ಸಂಖ್ಯೆಗಳನ್ನು ಹಾಗೂ ಅಭ್ಯರ್ಥಿಗಳ ಹಿನ್ನೆಲೆಯನ್ನು ಕೂಲಂಕಷವಾಗಿ ವಿಚಾರಣೆ ಮಾಡಿದ್ದಲ್ಲಿ ಅಕ್ರಮ ಬಯಲಿಗೆ ಬರುವುದು ಖಂಡಿತ ಎನ್ನಲಾಗಿದೆ.

Advertisement

ವಾರ್ಡನ್‌ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಪಟ್ಟಿ ನೋಡಿದರೆ ಗೊತ್ತಾಗುತ್ತದೆ. ಇದಕ್ಕೆ ದೊಡ್ಡ ಅಧ್ಯಯನವೇನೂ ಬೇಕಿಲ್ಲ. ಈ ನಿಟ್ಟಿನಲ್ಲಿ ಶೀಘ್ರವೇ ಮುಖ್ಯಮಂತ್ರಿ ಗಳನ್ನು ಭೇಟಿ ಮಾಡಿ ದೂರು ನೀಡಲಾಗುವುದು. ಬಹುತೇಕ ಪ್ರಾಮಾಣಿಕ, ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಆದ್ದರಿಂದ ತನಿಖೆ ನಡೆಸಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರಿಗೆ ನ್ಯಾಯ ಸಿಗಲಿ ಎನ್ನುವುದು ನಮ್ಮ ಉದ್ದೇಶ.
-ಸುನೀಲ ಮಾರುತಿ ಮಾನ್ಪಡೆ, ಪ್ರಧಾನ ಕಾರ್ಯದರ್ಶಿ, ರಾಜ್ಯ ರೈತ-ಕಾರ್ಮಿಕ ಯುವ ಜನ ಸೇವಾ ಸಂಘ

 ಸೂರ್ಯಕಾಂತ್‌ ಎಂ.ಜಮಾದಾರ

 

Advertisement

Udayavani is now on Telegram. Click here to join our channel and stay updated with the latest news.

Next