ಹೊಸದಿಲ್ಲಿ: ಭಾರತ ಟೆಸ್ಟ್ ತಂಡದ ಅತ್ಯಂತ ಅನುಭವಿ ಆಟಗಾರ, ವೇಗಿ ಇಶಾಂತ್ ಶರ್ಮಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರವಾಗುತ್ತಿದ್ದಾರೆಯೇ? ಸದ್ಯ ಭಾರತ ತಂಡದ ಪರ ಟೆಸ್ಟ್ ಮಾದರಿಯಲ್ಲಿ ಮಾತ್ರ ಆಡುತ್ತಿರುವ ಡೆಲ್ಲಿ ವೇಗಿ ಇಶಾಂತ್ ಅದಕ್ಕೂ ವಿದಾಯ ಹೇಳಲು ಮುಂದಾಗಿದ್ದಾರೆ ಎನ್ನುತ್ತಿದೆ ವರದಿ.
ಟೆಸ್ಟ್ ಸ್ಪೆಷಲಿಸ್ಟ್ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾ ಅವರಿಗೆ ‘ಇನ್ನು ಮುಂದೆ ಟೆಸ್ಟ್ ತಂಡಕ್ಕೆ ನಿಮ್ಮ ಅಗತ್ಯವಿಲ್ಲ. ನಾವು ಭವಿಷ್ಯದ ಬಗ್ಗೆ ಯೋಚಿಸುತ್ತಿರುವುದರಿಂದ ಹೊಸಬರ ಆಯ್ಕೆಗೆ ಚಿಂತಿಸಿದ್ದೇವೆ ಎಂದು ಬಿಸಿಸಿಐನ ಅತ್ಯಂತ ಪ್ರಭಾವಿ ಮೂಲಗಳು ಹೇಳಿದ್ದಾರೆ ಎನ್ನಲಾಗಿದೆ. ಪ್ರಮುಖ ಕೀಪರ್ ಆಗಿದ್ದರೂ ಹೀಗೊಂದು ಪ್ರತಿಕ್ರಿಯೆ ಪಡೆದಿರುವುದು ವೃದ್ಧಿಮಾನ್ ಗೆ ಬೇಸರ ಮೂಡಿಸಿರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಅವರು ಬಂಗಾಳ ರಣಜಿ ತಂಡದಿಂದಲೂ ಹೊರಗುಳಿದಿದ್ದಾರೆ.
ಇದೀಗ ಇಶಾಂತ್ ಶರ್ಮಾ ಕೂಡಾ ರಣಜಿ ಕೂಟದಿಂದ ಹೊರಗುಳಿದಿದ್ದಾರೆ. ದೆಹಲಿ ಕ್ರಿಕೆಟ್ ಮಂಡಳಿ ಪ್ರಕಟಿಸಿದ ತಂಡದಲ್ಲಿ ಇಶಾಂತ್ ಹೆಸರಿಲ್ಲ. ಈ ಬಗ್ಗೆ ಮಾತನಾಡಿದ ದೆಹಲು ಆಯ್ಕೆಗಾರರೊಬ್ಬರು, “ಅವರು ಯಾವಾಗ ಆಡಲು ಬಯಸುತ್ತಾರೆ ಎಂದು ಹೇಳುತ್ತಾರೆ ಆಗ ಅವರನ್ನು ತಂಡಕ್ಕೆ ಸೇರಿಸಲಾಗುತ್ತದೆ. ಆದರೆ ಕಳೆದ ವಾರದಿಂದ ಅವರು ಅಜ್ಞಾತವಾಗಿದ್ದಾರೆ. ಸಮಿತಿ ಜೊತೆಗೆ ಮಾತುಕತೆ ನಡೆಸಿಲ್ಲ. ಅವರಿಗೆ ಏನಾಯಿತು ಎಂದು ನನಗೆ ತಿಳಿದಿಲ್ಲ. ಅವರು ರಣಜಿ ತಂಡದ ಅಭ್ಯಾಸಕ್ಕೆ ಬಂದಿಲ್ಲ. ಅವನ ಮನಸ್ಸಿನಲ್ಲಿ ಏನಿದೆ ಎಂದು ನಮಗೆ ತಿಳಿದಿಲ್ಲ” ಎಂದಿದ್ದಾರೆ.
ಇದನ್ನೂ ಓದಿ:ಇತ್ತೀಚಿನ ವರ್ಷಗಳಲ್ಲಿ ಇಂತಹ ಬೌಲಿಂಗ್ ದಾಳಿ ನೋಡಿಲ್ಲ: ಪ್ರಸಿಧ್ ಗೆ ರೋಹಿತ್ ಮೆಚ್ಚುಗೆ
“ಭಾರತೀಯ ತಂಡದ ಮ್ಯಾನೇಜ್ ಮೆಂಟ್ ಇಶಾಂತ್ ಶರ್ಮಾ ಅವರಿಗೆ ಏನು ಸಂದೇಶ ನೀಡಿದೆ ಎನ್ನುವುದು ನಮಗೆ ತಿಳಿದಿಲ್ಲ. ಮ್ಯಾನೇಜ್ ಮೆಂಟ್ ನ ಸಂದೇಶ ಅವರ ಮನಸ್ಥಿತಿಯ ಬದಲಾವಣೆಗೆ ಕಾರಣವಾಗಿರಬಹುದು” ಎಂದು ಹೇಳಿದ್ದಾರೆ.
33 ವರ್ಷದ ಇಶಾಂತ್ ಶರ್ಮಾ ಅವರು ಸದ್ಯ ಭಾರತೀಯ ಟೆಸ್ಟ್ ತಂಡದ ಅತ್ಯಂತ ಹಿರಿಯ ಆಟಗಾರನಾಗಿದ್ದಾರೆ. ಭಾರತದ ಪರವಾಗಿ 105 ಟೆಸ್ಟ್ ಪಂದ್ಯವಾಡಿರುವ ಇಶಾಂತ್ 311 ವಿಕೆಟ್ ಪಡೆದಿದ್ದಾರೆ.
ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿರುವ ಹಿರಿಯ ಆಟಗಾರರಾದ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ ಈ ಬಾರಿ ರಣಜಿ ಕ್ರಿಕೆಟ್ ಆಡಲು ಮುಂದಾಗಿದ್ದಾರೆ.