ಕೊಳ್ಳೇಗಾಲ: ಕಳೆದ 2002ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಆರಂಭವಾದ ಕಾಮಗಾರಿ ಇದುವರೆಗೂ ಪೂರ್ಣಗೊಳ್ಳದೆ ಉದ್ಘಾಟನೆ ಭಾಗ್ಯವಿಲ್ಲದೆ ಭವನ ಜೂಜು ಮತ್ತು ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದೆ.
ಭವನದ ಕಟ್ಟಡ ಕಾಮಗಾರಿಗೆ ಸುಮಾರು 3.50 ಕೋಟಿ ರೂ. ಖರ್ಚಾಗಿದೆ. ಆದರೂ ಕಟ್ಟಡದ ಸುತ್ತಲೂ ಕಾಂಪೌಂಡ್, ಶಾಚಾಲಯಗಳಿಲ್ಲದೇ ಅಪೂರ್ಣಗೊಂಡಿದ್ದು, ಅಕ್ರಮ ಚಟುವಟಿಕೆ ತಾಣವಾಗಿದೆ. ಹೀಗಾಗಿ ಭವನಕ್ಕೆ ಉದ್ಘಾಟನೆ ಭಾಗ್ಯ ಯಾವಾಗ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಕೇಂದ್ರದ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್, 25 ಲಕ್ಷ, ಮಾಜಿ ಕೇಂದ್ರ ಸಚಿವ ದಿ.ರಾಜಶೇಖರ್ ಮೂರ್ತಿ ತಮ್ಮ ನಿಧಿಯಿಂದ ಅನುದಾನ ನೀಡಿದ್ದರು.
ಶಾಸಕ ಎಸ್.ಬಾಲರಾಜ್ 25 ಲಕ್ಷ, ಸಂಸದರಾಗಿದ್ದ ಆರ್.ಧ್ರುವನಾರಾಯಣ್ 90 ಲಕ್ಷ, ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ 90 ಲಕ್ಷ ಅನುದಾನ ಕೊಡಿಸಿದ್ದರು. ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಸರ್ಕಾರದಿಂದ ಒಂದು ಕೋಟಿ.. ಹೀಗೆ ಹಲವಾರು ಚುನಾಯಿತ ಪ್ರತಿನಿಧಿಗಳು ಅನುದಾನ ನೀಡಿದ್ದಾರೆ. ಆದರೂ ಭವನದಲ್ಲಿ ಸೂಕ್ತ ಮೂಲಸೌಕರ್ಯಗಳಿಲ್ಲ.
ಜತೆಗೆ ಕಾಮಗಾರಿಯಲ್ಲಿ ಹಣ ನುಂಗಿರುವ ಮಾತುಗಳು ಕೇಳುತ್ತಿವೆ ಎಂದು ಜನರು ಆರೋಪಿಸಿದ್ದಾರೆ. ಡಾ. ಅಂಬೇಡ್ಕರ ಭವನ ಉದ್ಘಾಟನೆಗೆ ಸಿದ್ಧತೆ ನಡೆದಿತ್ತು. ಆದರೆ ಡಾ.ಅಂಬೇಡ್ಕರ್ ಸ್ಮಾರಕ ಸಂಘದ ಪದಾಧಿಕಾರಿಗಳು ಕೇವಲ ಭವನ ಉದ್ಘಾಟನೆಯಾದರೆ ಸಾಲದು. ಅದರ ಸುತ್ತ ಗೋಡೆ, ಶೌಚಾಲಯ, ರಸ್ತೆ ನಿರ್ಮಿಸಿದ ಬಳಿಕ ಉದ್ಘಾಟಿಸುವಂತೆ ಒತ್ತಡ ಹೇರಿದ್ದರಿಂದ ಉದ್ಘಾಟನೆ ಭಾಗ್ಯ ದೊರೆಯಲಿಲ್ಲ.
ಬಳಿಕ ಹೆಚ್ಚಿನ ಮೂಲಸೌಲಭ್ಯಗಳನ್ನು ಒದಗಿಸಲು ಹೆಚ್ಚುವರಿ 2.40 ಕೋಟಿ ರೂ. ಬೇಕೆಂದು ಭೂಸೇನಾ ನಿಗಮದ ಅಧಿಕಾರಿಗಳು ಅಂದಾಜು ವೆಚ್ಚ ತಯಾರಿಸಿದ್ದಾರೆ. ಈವರೆಗೂ ಸರ್ಕಾರದಿಂದ ಹಣ ಮಂಜೂರಾಗಿಲ್ಲ. ಇನ್ನಾದರೂ ಸಂಬಂಧಿಸಿದವರು ಭವನಕ್ಕೆ ಉದ್ಘಾಟನೆ ಭಾಗ್ಯ ಒದಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಕೂಡಲೇ ಸಮಾಲೋಚನೆ ನಡೆಸಲಾಗುವುದು ಅಥವಾ ನೂತನ ಬಜೆಟ್‌ನಲ್ಲಿ ಹಣ ಮಂಜೂರಾಗುವಂತೆ ಕ್ರಮಕೈಗೊಳ್ಳಲಾಗುವುದು.
-ಡಾ.ಎಂ.ಆರ್.ರವಿ, ಜಿಲ್ಲಾಧಿಕಾರಿ
ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ 2.40 ಕೋಟಿ ಮಂಜೂರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಂದು ಕೋಟಿ ಮಂಜೂರಾಗಿದ್ದು, ಉಳಿದ 1.40 ಕೋಟಿ ಹಣವನ್ನು ಹೊಸ ಬಜೆಟ್‌ನಲ್ಲಿ ಸೇರಿಸಿ, ಭವನ ಪೂರ್ಣಗೊಳಿಸಿ ಉದ್ಘಾಟನೆ ಮಾಡಲಾಗುವುದು.
-ಎನ್.ಮಹೇಶ್, ಶಾಸಕ
* ಡಿ.ನಟರಾಜು