ಬೆಂಗಳೂರು: ದೂರವಾಣಿ ಕದ್ದಾಲಿಕೆ ವಿರುದ್ಧ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ದಿಢೀರ್ ಪ್ರತ್ಯಕ್ಷರಾಗಿ ಬೆಂಬಲ ಸೂಚಿಸಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಾನಸಪುತ್ರ ಎಂದೇ ಬಿಂಬಿತರಾಗಿರುವ ವೈ.ಎಸ್.ವಿ.ದತ್ತಾ ನಡೆಕುತೂಹಲ ಮೂಡಿಸಿದೆ.
ಇದನ್ನೂ ಓದಿ:ಕಾರವಾರ: ಪ್ರವಾಹದಿಂದ ಹೋಟೆಲ್ ಕಟ್ಟೆ ಏರಿದ್ದ 11 ಜನರನ್ನು ನೇವಿ ಹೆಲಿಕಾಪ್ಟರ್ ಮೂಲಕ ರಕ್ಷಣೆ
ದತ್ತಾ ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ ಸೇರುವರೇ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಡೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವರೇ ಎಂಬ ಪ್ರಶ್ನೆ ಮೂಡಿದೆ. ಸಿದ್ದರಾಮಯ್ಯ ಅವರಿಗೆ ಆಪ್ತರಾಗಿರುವ ವೈ.ಎಸ್.ವಿ.ದತ್ತಾ, ಡಿಕೆಶಿ ಜತೆಯೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ, ಅವರು ಕಾಂಗ್ರೆಸ್‌ಗೆ ಬರುವುದಾದರೆ ಮುಕ್ತವಾಗಿಯೇ ಸ್ವಾಗತ ಸಿಗಲಿದೆ.
ಆದರೆ, ಪ್ರತಿಭಟನೆಗೆ ಬೆಂಬಲ ಕೊಟ್ಟಿರುವುದು ಆತ್ಮಸಾಕ್ಷಿಗೆ ಅನುಗುಣವಾಗಿ ಎಂದು ಹೇಳಿದ್ದಾರೆ. ಹೀಗಾಗಿ, ಮುಂದಿನ ಹೆಜ್ಜೆ ಏನು ಎಂಬುದು ಕಾದು ನೋಡಬೇಕಾಗಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳುತ್ತಾರೆ. ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ದತ್ತಾ, ಕೇಂದ್ರ ಸರ್ಕಾರ ಮಾಡಿರುವುದು ತಪ್ಪು ಎಂದು ಹೇಳುವ ಧೈರ್ಯ ನನ್ನಲ್ಲಿದೆ. ತಪ್ಪು ಸಹಿಸಿಕೊಳ್ಳಲು ಆತ್ಮಸಾಕ್ಷಿ ಒಪ್ಪುವುದಿಲ್ಲ. ಹೀಗಾಗಿ, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದರು.