ಬೆಂಗಳೂರು: ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬುಧವಾರ ಮಧ್ಯಾಹ್ನ 12 ಗಂಟೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದು, ಸಂಪುಟ ರಚನೆಗೆ ಅವರು ಹಸಿರು ನಿಶಾನೆ ತೋರುವರೇ ಎಂಬ ಕುತೂಹಲ ಮೂಡಿದೆ.
ಸಚಿವಾಕಾಂಕ್ಷಿಗಳ ಪಟ್ಟಿಯೊಂದಿಗೆ ಯಡಿಯೂರಪ್ಪ ಅವರು ಸೋಮವಾರ ರಾತ್ರಿ ದೆಹಲಿಗೆ ತೆರಳಿದ್ದಾರೆ. ಮೊದಲ ಹಂತದಲ್ಲಿ 15ರಿಂದ 20 ಶಾಸಕರಿಗೆ ಸಚಿವ ಸ್ಥಾನ ನೀಡಲು ಚಿಂತಿಸಿದ್ದು, ಒಂದೊಂದು ಸಚಿವ ಸ್ಥಾನಕ್ಕೆ ಇಬ್ಬರು, ಮೂವರು ಆಕಾಂಕ್ಷಿಗಳ ಹೆಸರಿನೊಂದಿಗೆ ತೆರಳಿದ್ದಾರೆ.
ಅಮಿತ್ ಶಾ ಅವರನ್ನು ಬುಧವಾರ ಯಡಿಯೂರಪ್ಪ ಭೇಟಿಯಾಗಲಿದ್ದು, ಸಂಪುಟ ರಚನೆ ಹಾಗೂ ಸಚಿವರ ಆಯ್ಕೆ ಕುರಿತು ಚರ್ಚಿಸಿ ಅಂತಿಮಗೊಳಿಸುವ ನಿರೀಕ್ಷೆ ಇದೆ. ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣ, ಹಿಂದುಳಿದ ಹಾಗೂ ಪರಿಶಿಷ್ಟ ಜಾತಿ, ಪಂಗಡಕ್ಕೆ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸುವ ರೀತಿಯಲ್ಲಿ ಸಮತೋಲಿತ ಸಂಪುಟ ರಚಿಸುವ ಬಗ್ಗೆ ಯಡಿಯೂರಪ್ಪ ಚಿಂತಿಸಿದ್ದಾರೆ ಎನ್ನಲಾಗಿದೆ.
ಇದಕ್ಕೆ ವರಿಷ್ಠರು ಹೇಗೆ ಸ್ಪಂದಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಬುಧವಾರ ವರಿಷ್ಠರು ಒಪ್ಪಿಗೆ ನೀಡಿದರೆ ವಾರಾಂತ್ಯದೊಳಗೆ ಸಂಪುಟ ರಚನೆಯಾಗಲಿದೆ. ಮೊದಲ ಹಂತದಲ್ಲಿ ಕನಿಷ್ಠ 15 ಸಚಿವರ ನೇಮಕಕ್ಕೆ ವರಿಷ್ಠರು ಅಸ್ತು ಎನ್ನುವ ನಿರೀಕ್ಷೆಯಿದೆ. ಜಾತಿ, ಪ್ರಾದೇಶಿಕ ಸಮತೋಲನದ ಜತೆಗೆ ಹಿರಿತನ, ಅನುಭವ, ಕಾರ್ಯತತ್ಪರತೆ, ವರ್ಚಸ್ಸು, ಪ್ರಾಮಾಣಿಕತೆಯನ್ನು ಮುಖ್ಯವಾಗಿ ಪರಿಗಣಿಸುವ ಸಾಧ್ಯತೆ ಹೆಚ್ಚು. ಎಲ್ಲವೂ ವರಿಷ್ಠರ ನಿಲುವಿನ ಮೇಲೆ ಅವಲಂಬಿತವಾಗಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.
ಸಂಪುಟ ರಚನೆ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನ 12 ಗಂಟೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದು, ಅವರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು.
-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ