Advertisement

ಹೊಸ ಅಭ್ಯರ್ಥಿ ಸಾಧ್ಯವೇ?

04:29 PM Dec 10, 2022 | Team Udayavani |

ಗುಡಿಬಂಡೆ: ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಈ ಭಾರಿಯ 2023ರ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಪಡೆಯಲು ಆಕಾಂಕ್ಷಿಗಳಾ ಗಿರುವ ಹರಿಕೆರೆ ಕೃಷ್ಣಾರೆಡ್ಡಿ, ಹಾಲಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಹೊರ ವರ್ತುಲ ನಿಗಮದ ಅಧ್ಯಕ್ಷ ಮುನಿರಾಜು ರವರಗಳ ಮಧ್ಯೆ ಟಿಕೆಟ್‌ ಗಾಗಿ ತೀವ್ರ ತಿಕ್ಕಾಟ ನಡೆಯುತ್ತಿದ್ದು, ಇವರಲ್ಲಿ ಯಾರಿಗೆ ಕಮಲ ಟಿಕೆಟ್‌ ಸಿಗಲಿದೆ ಎಂದು ಕಾರ್ಯಕರ್ತರ ಕೂತೂಹಲದ ಜೊತೆಯಲ್ಲಿಯೇ, ಪಕ್ಷ ಇವರನ್ನು ಕೈ ಬಿಟ್ಟು ಹೊಸ ಅಭ್ಯರ್ಥಿಯನ್ನು ಕಣಕ್ಕಿಳಸಲಿದೆಯೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.

Advertisement

ಕ್ಷೇತ್ರದಲ್ಲಿ ಇಲ್ಲಿಯವರೆಗೂ ಪಕ್ಷೇತರ ಅಭ್ಯರ್ಥಿ, ಕಾಂಗ್ರೆಸ್‌, ಸಿಪಿಐಎಂ ಪಕ್ಷಗಳೇ ಅಭ್ಯರ್ಥಿಗಳೇ ಇಲ್ಲಿ ಚುನಾಯಿತಗೊಂಡು ಅಧಿಕಾರ ಹಿಡಿದಿದ್ದರೇ ಹೊರತು, ಈ ಭಾಗದಲ್ಲಿ ಒಂದು ದಶಕದಿಂದ ಇತ್ತೀಚೆಗೆ ಅಲ್ಲಲ್ಲಿ ಸ್ಥಳಿಯ ಚುನಾವಣೆಗಳಲ್ಲಿ ಬಿಜೆಪಿ ಸದಸ್ಯರು ಆಯ್ಕೆಗೊಳ್ಳುತ್ತಿದ್ದು, 2008ರ ವಿಧಾನಸಭಾ ಚುನಾವಣೆಯಲ್ಲಿ ಚಿತ್ರನಟ ಸಾಯಿಕುಮಾರ್‌ ಬಿಜೆಪಿಯಿಂದ ಸ್ಪರ್ಧಿಸಿ 26,070 ಮತಗಳನ್ನು ಗಳಿಸಿ ಪ್ರತಿ ಸ್ಪರ್ಧಿಗಳಿಗೆ ಪ್ರಬಲ ಪೈ ಪೋಟಿಯನ್ನು ಕೊಟ್ಟು, ಪಕ್ಷವನ್ನು ಬಲಪಡಿಸಿದ್ದರು. ಚುನಾವಣೆ ಬಳಿಕ ಇತ್ತ ತಲೆ ಹಾಕದೆ ಇದ್ದರಿಂದ ಈ ಭಾಗದಲ್ಲಿ ನಂತರ ಚುನಾವಣೆಗಳಲ್ಲಿ ಪಕ್ಷ ನೆಲಕಚ್ಚಿತ್ತು.

ಸುಧಾಕರ್‌ ಅಲೆ: ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಯಾವ ಕ್ಷೇತ್ರದಲ್ಲೂ ಜಯ ಸಾಧಿಸದೇ ನೆಲಕಚ್ಚಿದ್ದ ಸಮಯದಲ್ಲಿ ಸಚಿವ ಸುಧಾಕರ್‌ ಬಿಜೆಪಿ ಸೇರ್ಪಡೆಗೊಂಡು, ಸಚಿವರಾದ ನಂತರ ಜಿಲ್ಲೆಯಲ್ಲಿ ಹಾಗೂ ಬಾಗೇಪಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಪುನಃ ಎಚ್ಚೆತ್ತುಕೊಂಡು ತನ್ನ ಕಾರ್ಯಕರ್ತರನ್ನು ಸೆಳೆಯುತ್ತಿದೆ. ಈಗಾಗಲೇ ಸಚಿವರು ಬಾಗೇಪಲ್ಲಿ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಾ, ಕಾರ್ಯಕರ್ತರ ಜತೆ ನಿರಂತರ ಸಂಪರ್ಕದಲ್ಲಿರುವುದರಿಂದ ಸುಧಾಕರ್‌ ಅಲೆಯಲ್ಲಿ ಪುನಃ ಈ ಭಾಗದಲ್ಲಿ ಬಿಜೆಪಿ ಅಧಿಕಾರ ಗಳಿಸುವ ಸಾಧ್ಯತೆಗಳಿವೆ.

ಮೂವರು ಅಕಾಂಕ್ಷಿಗಳು : ಬಿಜೆಪಿ ಪಾರುಪತ್ಯವೇ ಇಲ್ಲದ ಕ್ಷೇತ್ರ ಎಂದು ಹೇಳುವ ಬಾಗೇಪಲ್ಲಿ ಕ್ಷೇತ್ರಕ್ಕೆ ಈ ಭಾರಿಯ 2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್‌ ಪಡೆಯಲು ಸ್ಥಳೀಯ ಹರಿಕೆರೆ ಕೃಷ್ಣಾರೆಡ್ಡಿ, ಹಾಲಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಹೊರ ವರ್ತುಲ ನಿಗಮದ ಅಧ್ಯಕ್ಷ ಮುನಿರಾಜುರವರ ಮಧ್ಯೆ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಯುತ್ತಿದ್ದು, ಕ್ಷೇತ್ರದಲ್ಲಿ ಈಗಾಗಲೇ ರಾಮಲಿಂಗಪ್ಪ ಮತ್ತು ಮುನಿರಾಜು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಪಕ್ಷ ಸಂಘಟನೆ ಮಾಡಲು ಮುಂದಾಗಿದ್ದಾರೆ.

ಕಳೆದೆರಡು ಚುನಾವಣೆಯಲ್ಲಿ ಕಾಣಿಸಿಕೊಂಡು ನಂತರ ಮಾಯವಾಗಿದ್ದ ಹರಿಕೃಷ್ಣಾರೆಡ್ಡಿ, ಇತ್ತೀಚಿನ ದಿನಗಳಲ್ಲಿ ನಾನೂ ಅಕಾಂಕ್ಷಿ ಎಂದು ಹೇಳಿಕೊಂಡು ಪಕ್ಷಸಂಘಟನೆಗೆ ಒತ್ತು ನೀಡಿದ್ದಾರೆ. ಒಟ್ಟಾರೆ ಈ ಮೂವರಲ್ಲಿ ಯಾರಿಗೆ ಪಕ್ಷದ ಟಿಕೆಟ್‌ ಕೊಟ್ಟು ಯುದ್ದ ಕಣಕ್ಕೆ ಇಳಿಸಲಿದೆ ಎಂಬುದು ಒಂದೆಡೆ ಯಾದರೇ, ಸಚಿವ ಸುಧಾಕರ್‌ ರವರಿಗೆ ಪ್ರತಿಷ್ಠೆಯ ಚುನಾವಣೆಯಾಗಿರುವುದರಿಂದ, ಈ ಭಾಗದಲ್ಲಿ ಪ್ರಭಲವಾಗಿರುವ ಹೊಸ ಮುಖವನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಿದೆಯೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next