ಮಾನ್ವಿ: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಈ ಭಾಗದಲ್ಲಿ ಕೃಷಿಗೆ ನೀರಿನ ಸಮಸ್ಯೆ ಆದಾಗ ಭದ್ರಾ ಜಲಶಯದಿಂದ 5 ಟಿಎಂಸಿ ಅಡಿ ನೀರನ್ನು ತುಂಗಭದ್ರಾ ನದಿಗೆ ಹರಿಸಿ ಭತ್ತದ ಬೆಳೆಗೆ ಅನುಕೂಲ ಕಲ್ಪಿಸಿದ್ದನ್ನು ರೈತರು ಇಂದಿಗೂ ಸ್ಮರಿಸುತ್ತಾರೆ ಎಂದು ಜೆಡಿಎಸ್ ಪಕ್ಷದ ಪರಿಶಿಷ್ಟ ಪಂಗಡದ ಮೋರ್ಚಾದ ರಾಜ್ಯಾಧ್ಯಕ್ಷ ಹಾಗೂ ಶಾಸಕ ರಾಜಾ ವೆಂಕಟಪ್ಪನಾಯಕ ಹೇಳಿದರು.
ಜಾತ್ಯಾತೀತ ಜನತಾದಳ ಪಕ್ಷದ ವತಿಯಿಂದ ಹಮ್ಮಿಕೊಂಡ ಜನತಾ ಜಲಧಾರೆ ಕಾರ್ಯಕ್ರಮದ ಜಲಧಾರೆ ರಥ ಯಾತ್ರೆಯನ್ನು ತಾಲೂಕಿಗೆ ಬರಮಾಡಿಕೊಂಡು ಅವರು ಮಾತನಾಡಿದರು.
ತಾಲೂಕಿನ ಪ್ರಮುಖ ನೀರಾವರಿ ಯೋಜನೆಗಳಾದ ಗಣದಿನ್ನಿ ಏತನೀರಾವರಿ ಯೋಜನೆ, ಮದ್ಲಾಪೂರ ಏತ ನೀರಾವರಿ ಯೋಜನೆ, ಜಾಗೀರ ಪನ್ನೂರು ಏತ ನೀರಾವರಿ ಯೋಜನೆ, ಯಡಿವಾಳ ಏತನೀರಾವರಿ ಯೋಜನೆ ಮತ್ತು 76 ಡಿಸ್ಟ್ರಿಬ್ಯೂಟರಿ ಮುಖಾಂತರ ತಾಲೂಕಿನ ಕೃಷಿ ಜಮೀನುಗಳಿಗೆ ನೀರು ಒದಗಿಸಲಾಗುವುದು ಎಂದರು.
ಎಡದಂಡೆ ಮುಖ್ಯ ಕಾಲುವೆಗಳ ದುರಸ್ತಿ ಮತ್ತು ಉಪಕಾಲುವೆಗಳ ದುರಸ್ತಿ, ಕುರಕುಂದಾ, ಮಲ್ಲಟ, ಜೀನೂರು,ನಾರಬಂಡಾ, ಬಲ್ಲಟಗಿ, ಮುಷ್ಟೂರು, ಕಪಗಲ್ ಮತ್ತು ಮಾಡಗಿರಿ ಗ್ರಾಮಗಳಲ್ಲಿ ಹರಿಯುವ ನೀರಿಗೆ ಚೆಕ್ ಡ್ಯಾಂಗಳನ್ನು ನಿರ್ಮಿಸಿ ಸುತ್ತಮುತ್ತಲಿನ ಜಮೀನುಗಳಿಗೆ ನೀರಾವರಿ ಕಲ್ಪಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿದರು. ರಥಯಾತ್ರೆಯು ತಾಲೂಕಿನ ನಕ್ಕುಂದಿ,ಬ್ಯಾಗವಾಟ, ಕರೆಗುಡ್ಡ, ಹಿರೇಕೊಟ್ನೆಕಲ್, ಅಮರೇಶ್ವರ ಕ್ಯಾಂಪ್‌ಗ್ಳಲ್ಲಿ ಸಂಚರಿಸಿತು. ಜೆಡಿಎಸ್ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ್ ಪಾಟೀಲ್, ನಾಗರಾಜ ಭೋಗಾವತಿ, ಜೆಡಿಎಸ್ ರಾಜ್ಯ ಯುವ ಘಟಕದ ಉಪಾಧ್ಯಕ್ಷ ರಾಜಾರಾಮಚಂದ್ರ ನಾಯಕ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.