ಕಂಪ್ಲಿ: ತಾಲೂಕಿನ ಸುಗ್ಗೇನಹಳ್ಳಿ ಗ್ರಾಪಂ ಪಿಡಿಒ ಅವರ ಬೇಜವಾಬ್ದಾರಿ ನಡಾವಳಿಕೆಯಿಂದ ಬೇಸತ್ತ ಗ್ರಾಪಂ ಸದಸ್ಯರು ರಾಜೀನಾಮೆಗೆ ಮುಂದಾಗಿದ್ದು, ಕೂಡಲೇ ಅವರನ್ನು ಬೇರೆಡೆ ವರ್ಗಾಯಿಸುವಂತೆ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಪಂ ಸದಸ್ಯರಾದ ಬಿ.ಧನಂಜಯ, ಕೆ.ಕೃಷ್ಣ, ರಾಮಾಲಿಸ್ವಾಮಿ, ಸುಭಾನ್ ಸಾಬ್ ಗ್ರಾಮದ ಮುಖಂಡರಾದ ಜಯರಾಮ್, ಶಿವಪ್ಪ, ಹನುಮಂತಪ್ಪ ಹಾಗೂ ಮೋಹನ್, ಗ್ರಾಪಂ ವ್ಯಾಪ್ತಿಯಲ್ಲಿ ಅತ್ಯಗತ್ಯ ಕಾಮಗಾರಿಗಳನ್ನು ಮಾಡಿಸಿದ್ದರೂ ಸಹಿತ ಅವುಗಳ ಬಿಲ್ ಮಾಡಲು ಮಾಮೂಲು ಕೇಳುತ್ತಿದ್ದಾರೆ.
ಇದಕ್ಕೆ ಸಂಬಂಧಿಸಿದ ಆಡಿಯೋ ಮತ್ತು ವೀಡಿಯೋ ದಾಖಲೆಗಳು ನಮ್ಮಲ್ಲಿವೆ ಎಂದು ವಿಡಿಯೋಗಳನ್ನು ಪ್ರದರ್ಶನ ಮಾಡಿದರಲ್ಲದೆ, ಪಿಡಿಒ ಪ್ರತಿದಿನ ಸಮಯಕ್ಕೆ ಸರಿಯಾಗಿ ಗ್ರಾಪಂಗೆ ಬರಲ್ಲ. ಕೇಳಿದರೆ ತಾಪಂನಲ್ಲಿ ಸಭೆ ಇದೆ ಎಂದು ನುಣಚಿಕೊಳ್ಳುತ್ತಾರೆ. ಏನೇ ಕೇಳಿದರೂ ಹಾರಿಕೆ ಉತ್ತರ ಕೊಡುತ್ತಾ ಗ್ರಾಪಂ ಸದಸ್ಯರಿಗೆ ಗೌರವ ಕೊಡುತ್ತಿಲ್ಲ. ಗ್ರಾಪಂನಲ್ಲಿ ಗುಂಪುಗಾರಿಕೆ ಮಾಡುತ್ತಾ ಸದಸ್ಯರಲ್ಲಿಯೇ ಗುಂಪುಗಳನ್ನು ಮಾಡಿರುವ ಪಿಡಿಒ ಅಪರಂಜಿಯವರು ಗ್ರಾಮದಲ್ಲಿ ಅಶಾಂತಿಯನ್ನು ಉಂಟು ಮಾಡಿದ್ದಾರೆಂದು ಆರೋಪಿಸುತ್ತಿದ್ದಾರೆ.
ಗ್ರಾಮಗಳಲ್ಲಿ ಕೈಗೊಂಡ ಕಾಮಗಾರಿಗಳಿಗೆ ಬಿಲ್ ಮಾಡಿ ಎಂದರೆ ಇಒ ಅವರಿಂದ ಹಿಡಿದು ಗ್ರಾಪಂ ಸಿಬ್ಬಂದಿವರೆಗೆ ಹಣ ಕೊಡಬೇಕೆಂದು ಸುಮಾರು ಶೇ.44 ಹಣ ಕೇಳುತ್ತಿದ್ದಾರೆ ಎಂದು ಆರೋಪ ಮಾಡಿದರಲ್ಲದೆ, ಗ್ರಾಮದಲ್ಲಿ ಆ ಪಕ್ಷ ಈ ಪಕ್ಷ ಎಂದು ಗುಂಪುಗಾರಿಕೆ ಮಾಡುತ್ತಿರುವ ಇವರಿಂದ ಗ್ರಾಮದಲ್ಲಿ ಅಭಿವೃದ್ಧಿಗಿಂತ ಗುಂಪುಗಾರಿಕೆಯೇ ಅಧಿಕವಾಗಿದ್ದು, ಇವರ ಬಗ್ಗೆ ಜಿಪಂ ಸಿಇಒ ಮತ್ತು ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಬೇರೆಡೆ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು. ಗ್ರಾಪಂ ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.