Advertisement

ಜಲ ಜೀವನ್‌ ಮಿಷನ್‌ ಯೋಜನೆಯಲ್ಲಿ ಅಕ್ರಮ

03:11 PM Dec 12, 2022 | Team Udayavani |

ಕನಕಪುರ: ಜಲ ಜೀವನ್‌ ಮಿಷನ್‌ ಯೋಜನೆಯಡಿಯಲ್ಲಿ ಕೈಗೊಂಡಿರುವ ಕಾಮಗಾರಿಗಳಲ್ಲಿ ಆಗಿರುವ ಅಕ್ರಮದ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ, ಡಿ.13ರ ಮಂಗಳವಾರದಂದು ಜಿಪಂ ಎದುರು ಉಪವಾಸ ಸತ್ಯಾಗ್ರಹ ಮಾಡುದಾಗಿ ದೂರುದಾರ ಶರತ್‌ ಎಚ್ಚರಿಕೆ ಕೊಟ್ಟಿದ್ದಾರೆ.

Advertisement

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಲಜೀವನ್‌ ಮಿಷನ್‌ ಯೋಜನೆಯಡಿಯಲ್ಲಿ ಪ್ರತಿ ಮನೆಗಳಿಗೂ ಶುದ್ಧ ನೀರು ಪೂರೈಸುವ ಮಹತ್ವಕಾಂಕ್ಷಿ ಯೋಜನೆಗೆ ತಾಲೂಕಿಗೆ ಕೋಟ್ಯಂತರ ರೂ. ಹಣ ಬಿಡುಗಡೆಯಾಗಿದೆ. ಆದರೆ, ಕ್ರಿಯಾಯೋಜನೆಯಂತೆ ಕಾಮಗಾರಿ ಮಾಡದೆ ಈ ಯೋಜನೆಯ ಕೋಟ್ಯಂತರ ಹಣ ದುರ್ಬಳಕೆ ಆಗುತ್ತಿದೆ. ಕ್ರಿಯಾಯೋಜನೆ ತಕ್ಕಂತೆ ಪರಿಕರಗಳನ್ನು ಬಳಸದೆ ಮೂರನೇ ವ್ಯಕ್ತಿಯ ಪರಿಶೀಲನಾ ವರದಿಯನ್ನು ಸಹ ನಡೆಸದೆ ಕಳಪೆ ಕಾಮಗಾರಿ ಮತ್ತು ಗುಣಮಟ್ಟವಿಲ್ಲದ ಪರಿಕರ ಬಳಸಿ ಕಾಮಗಾರಿ ಮುಗಿಸಿ ಕೋಟ್ಯಂತರ ರೂಪಾಯಿ ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಕಳಪೆ ಕಾಮಗಾರಿ ಮಾಡಿ ಹಣ ದುರ್ಬಳಕೆ: ಇಂತಿಷ್ಟು ಆಳದಲ್ಲಿ ಪೈಪುಗಳನ್ನು ಅಳವಡಿಸಬೇಕು ಎಂಬ ನಿಯಮವಿದ್ದರೂ, ಅದನ್ನು ಲೆಕ್ಕಿಸದೆ ಕಾಟಾಚಾರಕ್ಕೆ ನಿಯಮ ಗಾಳಿಗೆ ತೂರಿ ನಲ್ಲಿ ಸಂಪರ್ಕವನ್ನು ಕಲ್ಪಿಸಲಾಗಿದೆ. ಕೆಲವು ಕಡೆಗಳಲ್ಲಿ ಗ್ರಾಪಂನಿಂದ ಅಳವಡಿಸಿದ್ದ ಪೈಪುಗಳಿಗೆ ಸಂಪರ್ಕ ಕಲ್ಪಿಸಿ ಕಾಂಕ್ರೀಟ್‌ ಇಲ್ಲದಿರುವ ಕಡೆಯೂ ಕಾಂಕ್ರೀಟ್‌ ತೆರವು ಮಾಡಿ ಪೈಪ್‌ ಅಳವಡಿಸಿರುವುದಾಗಿ ಇಲ್ಲದ ದಾಖಲೆ ಸೃಷ್ಟಿಸಿ ಹಣ ಬಿಡುಗಡೆ ಮಾಡಿಕೊಂಡಿದ್ದಾರೆ. ಇದಕ್ಕೆ ಎಂಜಿನಿಯರ್‌, ಅಧಿಕಾರಿಗಳು ಸಹ ಶಾಮೀಲಾಗಿ ಗುಣಮಟ್ಟದ ಕಾಮಗಾರಿ ಮಾಡಬೇಕಾದ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿ ಹಣವನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದರು.

ಯಾವುದೇ ಕ್ರಮಕೈಗೊಂಡಿಲ್ಲ: ಜಲಜೀವನ್‌ ಮೀಷನ್‌ ಯೋಜನೆಯ ಕಾಮಗಾರಿಯಲ್ಲಿ ನಡೆದಿರುವ ಅಕ್ರಮ ಮತ್ತು ಹಣ ದುರ್ಬಳಕೆ ಬಗ್ಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಮೇಳಾಧಿಕಾರಿಗಳಿಗೂ ದೂರು ನೀಡಿದರೂ ಯೋಜನೆಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಿಪಂ ಎದುರು ಉಪವಾಸ ಸತ್ಯಾಗ್ರಹ ಮಾಡುವುದಾಗಿ ದೂರುದಾರ ಶರತ್‌ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next