ಎಚ್.ಡಿ.ಕೋಟೆ: ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿ ಹೆಸರಿನಲ್ಲಿ ಗ್ರಾಮ ಪಂಚಾಯ್ತಿ ಪಿಡಿಒ ಮತ್ತು ಫಲಾನುಭವಿ ಇಬ್ಬರ ನಡುವೆ ಹಣದ ಒಳ ಒಪ್ಪಂದ ಮಾಡಿಕೊಂಡು ಕಾಮಗಾರಿ ನಡೆಸದೇ ಇದ್ದರೂ 4.66 ಲಕ್ಷ ರೂ. ಅನುದಾನ ಗುಳುಂ ಮಾಡಿರುವ ಆರೋಪ ಭೀಮನಹಳ್ಳಿ ಗ್ರಾಪಂನಲ್ಲಿ ಕೇಳಿ ಬಂದಿದೆ.
ಉದ್ಯೋಗ ಖಾತ್ರಿ ಯೋಜನೆಯ ಯಾವ ಕಾಮಗಾರಿಯನ್ನೂ ಯಂತ್ರಗಳಿಂದ ಮಾಡಿಸದೆ ಜನರಿಂದಲೇ ಮಾಡಿಸಬೇಕು ಅನ್ನುವ ನಿಯಮ ಜಾರಿಯಲ್ಲಿದ್ದರೂ, ಬಹುತೇಕ ಪಂಚಾಯ್ತಿಗಳು ಜೆಸಿಬಿ ಯಂತ್ರ ಬಳಸಿ ಕಾಮಗಾರಿ ನಡೆಸಿ ನಿಯಮ ಉಲ್ಲಂಘಿಸುತ್ತಿವೆ.
ಮಾಜಿ ಅಧ್ಯಕ್ಷರ ಆರೋಪ: ಎಚ್.ಡಿ.ಕೋಟೆ ತಾಲೂಕಿನ ಭೀಮನಹಳ್ಳಿ ಗ್ರಾಪಂ ವ್ಯಾಪ್ತಿಗೆ ಒಳಪಡುವ ರಾಜೇಗೌಡನಹುಂಡಿ ಗ್ರಾಮದ ನಿವಾಸಿ ಗುರುಸ್ವಾಮಿ ಎಂಬುವವರ ಜಮೀನಿನಲ್ಲಿದ್ದ ಹಳೆಯ ಮೀನಿನ ಕೊಳವೊಂದಕ್ಕೆ ನೂತನ ಕೊಳ ನಿರ್ಮಾಣದ ಹೆಸರಿನಲ್ಲಿ ಮೀನಿನ ಕೊಳ ನಿರ್ಮಾಣ ಮಾಡಿರುವುದಾಗಿ ನಕಲಿ ದಾಖಲೆ ಸೃಷ್ಟಿಸಲಾಗಿದೆ. ಯಾವುದೇ ಕೂಲಿ ಕಾರ್ಮಿಕರಿಂದ ಕಾಮಗಾರಿ ನಡೆಸಿಲ್ಲ. ಆದರೂ ಕಾಮಗಾರಿ ಪೂರ್ಣಗೊಳಿಸಿರುವುದಾಗಿ ದಾಖಲೆ ನಿರ್ಮಿಸಿಕೊಂಡು ನಾಲ್ಕು ಹಂತದಲ್ಲಿ ಇಲ್ಲಿಯ ತನಕ 4.66 ಲಕ್ಷ ರೂ. ಸರ್ಕಾರದ ಅನುದಾನ ದುರುಪಯೋಗ ಮಾಡಿಕೊಳ್ಳಲಾಗಿದೆ. ಗ್ರಾಮಸ್ಥರಷ್ಟೇ ಅಲ್ಲದೇ ಕಳೆದ ಒಂದುವರೆ ತಿಂಗಳ ಹಿಂದಷ್ಟೇ ಪಂಚಾಯ್ತಿ ಅಧ್ಯಕ್ಷ ಸ್ಥಾನದ ಆಡಳಿತ ಪೂರ್ಣಗೊಳಿಸಿ ನಿರ್ಗಮಿತರಾದ ಆರ್ .ಪಿ.ಜನನ್ನಾಥ್ ಆರೋಪಿಸಿದ್ದಾರೆ.
ಆರೋಪಕ್ಕೆ ಪೂರಕವಾಗಿ ಗುರುಸ್ವಾಮಿ ಅವರ ಜಮೀನಿನಲ್ಲಿ ಹಳೆಯ ಮೀನಿನ ಕೊಳವೊಂದರ ಮುಂದೆ 2020-21ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ನಡೆಸಿರುವ ನಕಲಿ ನಾಮಫಲಕ ಅಳವಡಿಸಿ ಹಣ ಮಂಜೂರು ಮಾಡಿ ಪಿಡಿಒ ಮತ್ತು ಗುರುಸ್ವಾಮಿ ಸರ್ಕಾರದ ಹಣ ಹಂಚಿಕೆ ಮಾಡಿಕೊಂಡು ಸರ್ಕಾರಕ್ಕೆ ವಂಚಿಸಿ ಅನುದಾನ ಗುಳುಂ ಮಾಡಿದ್ದಾರೆ.
ಜೆಸಿಬಿ ಯಂತ್ರ ಬಳಕೆ: ಮೀನಿನ ಕೊಳ ನಿರ್ಮಾಣದ ಅನುದಾನ ಕಳೆದ ಒಂದುವರೆ ತಿಂಗಳ ಹಿಂದೆ ಬಿಡುಗಡೆಗೊಂಡ ಹಿನ್ನೆಲೆಯಲ್ಲಿ ಜನರ ಕಣ್ಣೊರೆಸುವ ಸಲುವಾಗಿ ಗುರುಸ್ವಾಮಿ ಕಳೆದ 2-3 ದಿನಗಳ ಹಿಂದಷ್ಟೇ ಜೆಸಿಬಿ ಯಂತ್ರ ಬಳಕೆ ಮಾಡಿ ತನ್ನ ಜಮೀನನ್ನು ಸಮತಟ್ಟು ಮಾಡಿಕೊಂಡಿದ್ದಾರೆ ಎಂದು ರಾಜೇಗೌಡನಹುಂಡಿ ಗ್ರಾಮದ ಜನರು ಆರೋಪಿಸಿದ್ದಾರೆ.
ಕಳೆದ 3 ತಿಂಗಳ ಹಿಂದೆ ಹಾಲಿ ಗ್ರಾಪಂ ಪಿಡಿಒ, ಗುರುಸ್ವಾಮಿ ಅವರು ಮೀನಿನ ಕೊಳ ನಿರ್ಮಿಸದೇ ಇದ್ದರೂ ಅನುದಾನ ಬಿಡುಗಡೆಗೊಳಿಸಲು ಅಧ್ಯಕ್ಷರ ಸಹಿ ಬಯಸಿದಾಗ ನಾನು ನಿರಾಕರಿಸಿದ್ದೆ. ಆದರೆ, ನಾನು ಅಧಿಕಾರದಿಂದ ನಿರ್ಗಮಿಸಿದ 3-4 ದಿನಗಳಲ್ಲೇ ಸುಳ್ಳು ದಾಖಲಿ ಸƒಷ್ಟಿಸಿ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ.
–ಆರ್.ಪಿ.ಜಗನ್ನಾಥ್, ಗ್ರಾಪಂ ಮಾಜಿ ಅಧ್ಯಕ್ಷರು
ಕಳೆದ ಮೂರು ತಿಂಗಳ ಹಿಂದೆ ಮೀನಿನ ಕೊಳ ನಿರ್ಮಾಣಗೊಂಡಿದೆ. ಪರಿಶೀಲನೆ ನಡೆಸಿದ ಕಾಮಗಾರಿಗೆ ಅನುಗುಣವಾಗಿ ಅನುದಾನ ಬಿಡುಗಡೆಗೊಳಿಸಿದ್ದೇವೆ. ಕಾಮಗಾರಿಯ ಲ್ಲಾಗಲೀ, ಅನುದಾನದಲ್ಲಾ ಗಲೀ ಯಾವುದೇ ಅವ್ಯವಹಾರ ನಡೆದಿಲ್ಲ.
–ಮಂಜುನಾಥ್, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ
–ಎಚ್.ಬಿ.ಬಸವರಾಜು