ಬೆಂಗಳೂರು: ಕೋವಿಡ್ 19 ಸೋಂಕಿತರಿಗೆ ಚಿಕಿತ್ಸೆ ನೀಡಲು ಸರ್ಕಾರ ಒದಗಿಸಿರುವ ಉಪಕರಣಗಳ ಖರೀದಿಯಲ್ಲಿ 2,200 ಕೋಟಿ ರೂ.ಅವ್ಯವಹಾರ ನಡೆದಿದ್ದು ಈ ಬಗ್ಗೆ ತನಿಖೆ ನಡೆಸಬೇಕೆಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ವಿಧಾನಸೌಧದ ತಮ್ಮ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಕೋವಿಡ್ 19 ಹಿನ್ನೆಲೆಯಲ್ಲಿ ಸರ್ಕಾರ ಸುಮಾರು 3 ಸಾವಿರ ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದೆ.
ಯಾವುದಕ್ಕೆ ಎಷ್ಟು ವೆಚ್ಚವಾಗಿ ದೆ ಎಂಬುದರ ಬಗ್ಗೆ ಸರ್ಕಾರ ಶ್ವೇತಪತ್ರ ಪ್ರಕಟಿಸಬೇಕು. ಕೋವಿಡ್ 19 ನಿರ್ವಹಣೆ, ಖರ್ಚು, ವೆಚ್ಚ ಕುರಿತು ನಿಗಾ ವಹಿಸಲು ಸರ್ವಪಕ್ಷಗಳನ್ನು ಒಳಗೊಂಡ ಸಮಿತಿ ರಚಿಸಬೇಕೆಂದು ಆಗ್ರಹಿಸಿದರು. ಕೋವಿಡ್ 19 ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಉಪ ಕರಣಗಳ ಖರೀದಿಯಲ್ಲಿ 2,200 ಕೋಟಿ ರೂ.ಗಳ ಅವ್ಯವಹಾರವಾಗಿದೆ. ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ಹಣ ನೀಡಿ ಉಪಕರಣಗಳನ್ನು ಖರೀದಿಸಲಾಗಿದೆ.
ಇಷ್ಟೂ ಹಣವನ್ನು ಲಪಟಾಯಿಸಲಾಗಿದೆ. ಅವ್ಯವಹಾರ ದಲ್ಲಿ ಭಾಗಿಯಾಗಿರು ವವರು ಯಾರು ಎಂಬುದನ್ನು ತನಿಖೆ ಮೂಲಕ ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಮುಖ್ಯಮಂತ್ರಿಗಳು ಘೋಷಣೆ ಮಾಡಿರುವ ಕೋವಿಡ್ 19 ಪ್ಯಾಕೇಜ್‌ನಲ್ಲಿ ಯಾರಿಗೆ ಎಷ್ಟು ಪರಿಹಾರ ನೀಡಲಾಗಿದೆ ಎಂಬುದರ ವಿವರ ನೀಡಬೇಕು. ಸಿಎಂ ಪರಿಹಾರ ನಿಧಿಗೆ 290 ಕೋಟಿ ರೂ. ಬಂದಿದೆ. ಅದರಲ್ಲಿ ಕೋವಿಡ್ 19 ನಿಯಂತ್ರಣಕ್ಕೆ ಮಾಡಿರುವ ವೆಚ್ಚ ಎಷ್ಟು ಎಂಬ ಮಾಹಿತಿ ಒದಗಿಸಬೇಕು.
ಪಿಎಂ ಕೇರ್ಗೆ 60 ಸಾವಿರ ಕೋಟಿ ರೂ. ಸಂದಾಯವಾಗಿದೆ. ಅದರಲ್ಲಿ ರಾಜ್ಯಕ್ಕೆ ಒದಗಿಸಿರುವ ನೆರವು ಎಷ್ಟು ಎಂಬುದನ್ನೂ ಬಹಿರಂಗಪಡಿಸ ಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು. ಕೋವಿಡ್ 19 ಸೋಂಕಿನಿಂದ ಮೃತರಾದವರ ಶವ ಗಳನ್ನು ಸರ್ಕಾರ ಅಮಾನವೀಯವಾಗಿ ಎಸೆಯುತ್ತಿದೆ. ಬಳ್ಳಾರಿಯಲ್ಲಿ ನಾಲ್ಕು ಶವಗಳನ್ನು ತಿಪ್ಪೆಗೆ ಎಸೆಯುವಂತೆ ಗುಂಡಿಗೆ ಎಸೆಯಲಾಗಿದೆ. ಆರೋಗ್ಯ ಸಚಿವರ ಸ್ವಂತ ಜಿಲ್ಲೆಯಲ್ಲಿಯೇ ಈ ರೀತಿಯಾಗಿದೆ.
ಇದಕ್ಕೆ ಸಚಿವರೇ ಜವಾಬ್ದಾರಿ ಹೊರಬೇಕು. ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಬೆಡ್, ಆಹಾರ ಆರೈಕೆ ಸಿಗುತ್ತಿಲ್ಲ. ಸರ್ಕಾ ರದ ಮಾಹಿತಿ ಪ್ರಕಾರ ಸೋಂಕಿತರಿಗೆ 4,663 ಬೆಡ್‌ಗಳು ನಿಗದಿಯಾಗಿದೆ. ಈವರೆಗೆ 2,694 ಹಾಸಿಗೆಗಳನ್ನು ಸೋಂಕಿತರಿಗೆ ಒದಗಿಸಲಾಗಿದೆ. ಹೀಗಿರುವಾಗ ಸೋಂಕಿತರು ಬೆಡ್ ಸಿಗದೆ ಏಕೆ ಪರದಾಡಬೇಕು? ಸರ್ಕಾರ ನಿಗದಿ ಮಾಡಿರುವ ಬೆಡ್‌ಗಳ ಸಂಖ್ಯೆ ಯಾವುದಕ್ಕೂ ಸಾಕಾಗುವುದಿಲ್ಲ. ಇದನ್ನು ಹೇಳಿದರೆ ಪ್ರತಿಪಕ್ಷಗಳು ರಾಜಕೀಯ ಮಾಡುತ್ತಿವೆ ಎನ್ನುತ್ತಾರೆ.
ಖಾಸಗಿ ಆಸ್ಪತ್ರೆಗಳಲ್ಲಿ, ಮೆಡಿಕಲ್ ಕಾಲೇಜುಗಳಲ್ಲಿ ಎಲ್ಲಿವೆ ಬೆಡ್‌ಗಳು? ಅವುಗಳ ಮಾಲೀಕರು ಸರ್ಕಾರದ ಮಾತು ಕೇಳುತ್ತಿಲ್ಲ. ಕೆಲವು ಖಾಸಗಿ ಆಸ್ಪತ್ರೆಗಳು ಮುಚ್ಚು ತ್ತಿವೆ. ವಿಕ್ರಮ್ ಆಸ್ಪತ್ರೆಗೆ ಸರ್ಕಾರವೇ ನೋಟಿಸ್ ನೀಡಿದೆ. ಬೆಡ್‌ಗಳು ಬೇಡಿಕೆಗೆ ತಕ್ಕಂತೆ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ವಾಗ್ಧಾಳಿ ನಡೆಸಿದರು. ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಈ ಕುರಿತು ಮಾತನಾಡಿದರೆ ಸಭಾಧ್ಯಕ್ಷರು ತಪಾಸಣೆ ಮಾಡಬಾರದು ಎಂದು ತಡೆಯಾಜ್ಞೆ ಕೊಡುತ್ತಾರೆ.
ಇದು ಭ್ರಷ್ಟಾಚಾರ ಮುಚ್ಚಿ ಹಾಕುವ ಪ್ರಯತ್ನ. ಉಪಕರಣಗಳ ಖರೀದಿ ಕುರಿತು ಹಣಕಾಸು ಇಲಾಖೆಯೇ ಆಕ್ಷೇಪ ವ್ಯಕ್ತಪಡಿಸಿದೆ ಎಂದರು. ವಿಧಾನಸಭೆ ಪ್ರತಿಪಕ್ಷದ ಮುಖ್ಯ ಸಚೇತಕ ಡಾ. ಅಜಯಸಿಂಗ್, ಶಾಸಕರಾದ ಯಶವಂತರಾಯಗೌಡ ಪಾಟೀಲ್, ಪ್ರಕಾಶ್ ರಾಥೋಡ್, ಆರ್.ಬಿ. ತಿಮ್ಮಾಪುರ, ಕಂಪ್ಲಿ ಗಣೇಶ್, ಮಾಜಿ ಶಾಸಕ ಅಶೋಕ್ ಪಟ್ಟಣ ಪತ್ರಿಕಾಗೋಷ್ಠಿಯಲ್ಲಿದ್ದರು.