Advertisement

1st T20 ಪಂದ್ಯಕ್ಕೆ ಮಳೆ ಅಡಚಣೆ : ಐರ್ಲೆಂಡ್‌ ವಿರುದ್ಧ ಭಾರತಕ್ಕೆ 2 ರನ್‌ ಜಯ

11:00 PM Aug 18, 2023 | Team Udayavani |

ಡಬ್ಲಿನ್‌: ಭಾರತ-ಐರ್ಲೆಂಡ್‌ ನಡುವಿನ ಮೊದಲ ಟಿ20 ಪಂದ್ಯಕ್ಕೆ ಮಳೆಯಿಂದ ಅಡಚಣೆಯಾಗಿದ್ದು, ಭಾರತ ಡಿಎಲ್ ಎಸ್ ನಿಯಮದಂತೆ 2 ರನ್ ಗಳ ಜಯ ಸಾಧಿಸಿದೆ.

Advertisement

ಆತಿಥೇಯ ಐರ್ಲೆಂಡ್‌ 7 ವಿಕೆಟಿಗೆ 139 ರನ್ನುಗಳ ಸಾಮಾನ್ಯ ಮೊತ್ತ ದಾಖಲಿಸಿತ್ತು. ಜವಾಬು ನೀಡಿದ ಭಾರತ 6.5 ಓವರ್‌ಗಳಲ್ಲಿ 2 ವಿಕೆಟಿಗೆ 47 ರನ್‌ ಮಾಡಿದ ವೇಳೆ ಮಳೆ ಸುರಿಯಲಾರಂಭಿಸಿತು. ಆದರೆ ಆಗ ಡಿ-ಎಲ್‌ ನಿಯಮದಂತೆ ಬುಮ್ರಾ ಪಡೆ 2 ರನ್‌ ಮುನ್ನಡೆಯಲ್ಲಿತ್ತು.

ಒಂದು ವರ್ಷದ ಬಳಿಕ ಬೌಲಿಂಗ್‌ ನಡೆಸಿದ ಜಸ್‌ಪ್ರೀತ್‌ ಬುಮ್ರಾಗೆ ಬಾಲ್ಬಿರ್ನಿ ಅವರಿಂದ ಬೌಂಡರಿ ಸ್ವಾಗತ ಲಭಿಸಿತು. ಆದರೆ ಮೊದಲ ಓವರ್‌ನಲ್ಲೇ 2 ವಿಕೆಟ್‌ ಬೇಟೆಯಾಡುವ ಮೂಲಕ ಬುಮ್ರಾ ಭರ್ಜರಿ ಪುನರಾಗಮನ ಸಾರಿದರು.

ದ್ವಿತೀಯ ಎಸೆತದಲ್ಲೇ ಬಾಲ್ಬಿರ್ನಿ (4) ಅವರನ್ನು ಬೌಲ್ಡ್‌ ಮಾಡಿದರೆ, 5ನೇ ಎಸೆತದಲ್ಲಿ ಟ್ಯುಕರ್‌ಗೆ ಪೆವಿಲಿಯನ್‌ ಹಾದಿ ತೋರಿಸಿದರು. ಟ್ಯುಕರ್‌ ಖಾತೆಯನ್ನೇ ತೆರೆಯಲಿಲ್ಲ. ಬುಮ್ರಾ ಮೊದಲ ಓವರ್‌ನಲ್ಲೇ 2 ವಿಕೆಟ್‌ ಹಾರಿಸಿದ ಭಾರತದ 4ನೇ ಬೌಲರ್‌. ಉಳಿದವರೆಂದರೆ ಆರ್‌. ಅಶ್ವಿ‌ನ್‌, ಭುವನೇಶ್ವರ್‌ ಕುಮಾರ್‌ ಮತ್ತು ಹಾರ್ದಿಕ್‌ ಪಾಂಡ್ಯ.

ಪ್ರಸಿದ್ಧ್ ಕೃಷ್ಣ ಕೂಡ ತಮ್ಮ ಮೊದಲ ಓವರ್‌ನಲ್ಲೇ ವಿಕೆಟ್‌ ಹಾರಿಸಿದರು. 9 ರನ್‌ ಮಾಡಿದ ಹ್ಯಾರಿ ಟೆಕ್ಟರ್‌ಗೆ ಪೆವಿಲಿಯನ್‌ ಹಾದಿ ತೋರಿಸಿದರು. ಪ್ರಥಮ ಓವರ್‌ನಲ್ಲಿ ವಿಕೆಟ್‌ ಉಡಾಯಿಸಿದ ಮತ್ತೋರ್ವ ಬೌಲರ್‌ ರವಿ ಬಿಷ್ಣೋಯಿ. ಇವರ ಲೆಗ್‌ಸ್ಪಿನ್‌ ಮೋಡಿಗೆ ಸಿಲುಕಿದವರು ಆರಂಭಕಾರ ಪಾಲ್‌ ಸ್ಟರ್ಲಿಂಗ್‌ (11). ಪವರ್‌ ಪ್ಲೇ ಮುಕ್ತಾಯಕ್ಕೆ 30ಕ್ಕೆ 4 ವಿಕೆಟ್‌ ಕಳೆದುಕೊಂಡ ಸಂಕಟ ಐರ್ಲೆಂಡ್‌ನ‌ದ್ದಾಗಿತ್ತು.

Advertisement

ಪ್ರಸಿದ್ಧ್ ಕೃಷ್ಣ ತಮ್ಮ ದ್ವಿತೀಯ ಓವರ್‌ನಲ್ಲಿ ಮತ್ತೂಂದು ಆಘಾತವಿಕ್ಕಿದರು. ಜಾರ್ಜ್‌ ಡಾಕ್ರೆಲ್‌ (1) ಆಟ ಮುಗಿಸಿದರು. ಮಾರ್ಕ್‌ ಅಡೈರ್‌ (16) ಪತನದೊಂದಿಗೆ 59ಕ್ಕೆ 6 ವಿಕೆಟ್‌ ಕಳೆದುಕೊಂಡು ಸಂಕಟಕ್ಕೆ ಸಿಲುಕಿತು. ಆಗ ಜತೆಗೂಡಿದ ಕರ್ಟಿಸ್‌ ಕ್ಯಾಂಫ‌ರ್‌ (39) ಮತ್ತು ಬ್ಯಾರಿ ಮೆಕಾರ್ಥಿ ಹೋರಾಟವೊಂದನ್ನು ನಡೆಸಿ 7ನೇ ವಿಕೆಟಿಗೆ 57 ರನ್‌ ಒಟ್ಟುಗೂಡಿಸಿದರು. ಮೆಕಾರ್ಥಿ ಐರ್ಲೆಂಡ್‌ ಸರದಿಯ ಏಕೈಕ ಅರ್ಧ ಶತಕಕ್ಕೆ ಸಾಕ್ಷಿಯಾದರು. ಅವರ ಕೊಡುಗೆ ಅಜೇಯ 51 ರನ್‌ (33 ಎಸೆತ, 4 ಬೌಂಡರಿ, 4 ಸಿಕ್ಸರ್‌). ಇದು ಭಾರತದ ವಿರುದ್ಧ 8ನೇ ಹಾಗೂ ಇದಕ್ಕೂ ಕೆಳ ಕ್ರಮಾಂಕದ ಆಟಗಾರನಿಂದ ದಾಖಲಾದ ಮೊದಲ ಅರ್ಧ ಶತಕ.

ಚೇಸಿಂಗ್‌ ವೇಳೆ ಭಾರತ ಯಶಸ್ವಿ ಜೈಸ್ವಾಲ್‌ (24) ಮತ್ತು ತಿಲಕ್‌ ವರ್ಮ (0) ಅವರ ವಿಕೆಟ್‌ ಕಳೆದುಕೊಂಡಿತು. ವರ್ಮ ಗೋಲ್ಡನ್‌ ಡಕ್‌ ಸಂಕಟಕ್ಕೆ ಸಿಲುಕಿದರು. ರುತುರಾಜ್‌ ಗಾಯಕ್ವಾಡ್‌ 19 ಮತ್ತು ಸಂಜು ಸ್ಯಾಮ್ಸನ್‌ ಒಂದು ರನ್‌ ಬ್ಯಾಟಿಂಗ್‌ ಕಾಯ್ದುಕೊಂಡಿದ್ದರು.

ಪ್ರಸಿದ್ಧ್ ಕೃಷ್ಣ, ರಿಂಕು ಪದಾರ್ಪಣೆ
ಭಾರತ ಪರ ಕರ್ನಾಟಕದ ಮಧ್ಯಮ ವೇಗಿ ಪ್ರಸಿದ್ಧ್ ಕೃಷ್ಣ ಮತ್ತು ಈ ಬಾರಿಯ ಐಪಿಎಲ್‌ ಹೀರೋ, ಹಾರ್ಡ್‌ ಹಿಟ್ಟರ್‌ ರಿಂಕು ಸಿಂಗ್‌ ಟಿ20 ಕ್ರಿಕೆಟಿಗೆ ಪದಾರ್ಪಣೆ ಮಾಡಿದರು. ಇವರಲ್ಲಿ ಪ್ರಸಿದ್ಧ್ ಕೃಷ್ಣ ಗಾಯಾಳಾಗಿ ಕಳೆದ ಕೆಲವು ಸಮಯದಿಂದ ವಿಶ್ರಾಂತಿಯಲ್ಲಿದ್ದರು. ಅವರು ಭಾರತದ ಪರ 14 ಏಕದಿನ ಪಂದ್ಯಗಳನ್ನಾಡಿದರೂ ಈವರೆಗೆ ಟಿ20 ಅಂತಾರಾಷ್ಟ್ರೀಯ ಪಂದ್ಯ ಆಡಿರಲಿಲ್ಲ.

ಸಂಕ್ಷಿಪ್ತ ಸ್ಕೋರ್‌: ಐರ್ಲೆಂಡ್‌-7 ವಿಕೆಟಿಗೆ 139 (ಮೆಕಾರ್ಥಿ ಔಟಾಗದೆ 51, ಕ್ಯಾಂಫ‌ರ್‌ 39, ಅಡೈರ್‌ 16, ಬಿಷ್ಣೋಯಿ 23ಕ್ಕೆ 2, ಬುಮ್ರಾ 24ಕ್ಕೆ 2, ಪ್ರಸಿದ್ಧ್ ಕೃಷ್ಣ 32ಕ್ಕೆ 2, ಅರ್ಷದೀಪ್‌ 35ಕ್ಕೆ 1).

Advertisement

Udayavani is now on Telegram. Click here to join our channel and stay updated with the latest news.

Next