Advertisement

ಅಮೆರಿಕದ ಬಳಿಕ ಇರಾನ್ ನಾಯಕ ಖೋಮೆನಿ ವಿರುದ್ಧ ರೊಚ್ಚಿಗೆದ್ದು ಬೀದಿಗಿಳಿದ ಜನರು!

10:09 AM Jan 15, 2020 | Nagendra Trasi |

ಟೆಹರಾನ್: ಉಕ್ರೇನ್ ವಿಮಾನ ಹೊಡೆದುರುಳಿಸಿದ್ದು ನಾವೇ ಎಂದು ಜಗತ್ತಿನ ಮುಂದೆ ಇರಾನ್ ತಪ್ಪೊಪ್ಪಿಕೊಂಡ ನಂತರ ದೇಶದ ಜನರೇ ಇದೀಗ ಬೀದಿಗಿಳಿದು ಭಾರೀ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನಾಕಾರರನ್ನು ಹತ್ತಿಕ್ಕಲು ಇರಾನ್ ಮಿಲಿಟರಿ ಪಡೆ ಹರಸಾಹಸ ಪಡುತ್ತಿದೆ ಎಂದು ವರದಿ ತಿಳಿಸಿದೆ.

Advertisement

ಉಕ್ರೇನ್ ವಿಮಾನವನ್ನು ಇರಾನ್ ಮಿಲಿಟರಿ ಪಡೆ ಹೊಡೆದುರುಳಿಸಿದ ಪರಿಣಾಮ 176 ಮಂದಿ ಪ್ರಯಾಣಿಕರು ದಾರುಣವಾಗಿ ಸಾವನ್ನಪ್ಪಿದ್ದರು. ಇದೊಂದು ಉದ್ದೇಶಪೂರ್ವಕವಲ್ಲದ ಘಟನೆ, ಆಚಾತುರ್ಯದಿಂದ ಹೀಗಾಇದೆ. ಈ ಬಗ್ಗೆ ಕ್ಷಮೆಯಾಚಿಸುವುದಾಗಿ ಇರಾನ್ ತಪ್ಪೊಪ್ಪಿಕೊಂಡಿತ್ತು.

ಇರಾನ್ ನಿಂದ ಈ ಹೇಳಿಕೆ ಹೊರಬೀಳುತ್ತಿದ್ದಂತೆಯೇ ಟೆಹರಾನ್ ನ ಆಝಾದಿ ಸ್ಕ್ವೇರ್ ನಲ್ಲಿ ಇರಾನ್ ಸರ್ಕಾರದ ವಿರುದ್ಧ ಜನ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇರಾನ್ ಪರಮೋಚ್ಛ ನಾಯಕ ಆಯತೊಲ್ಲಾ ಅಲಿ ಖೋಮೆನಿ ಅಧಿಕಾರದಿಂದ ಕೆಳಗಿಳಿಯಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಸಾವಿನ ಸರ್ವಾಧಿಕಾರಿ ಎಂದು ಟೆಹರಾನ್ ನಲ್ಲಿ ಪ್ರತಿಭಟನಾಕಾರರು ಖೋಮೆನಿ ವಿರುದ್ಧ ಘೋಷಣೆ ಕೂಗುತ್ತಿದ್ದು, ಈ ವಿಡಿಯೋ ಫೋಟೇಜ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಖೋಮೆನಿಗೆ ನಾಚಿಕೆಯಾಗಬೇಕು, ಕೂಡಲೇ ದೇಶ ಬಿಟ್ಟು ತೊಲಗಿ ಎಂದು ವಿದ್ಯಾರ್ಥಿಗಳು, ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಮೂರು ದಶಕಕ್ಕಿಂತಲೂ ಹೆಚ್ಚು ಕಾಲ ಇರಾನ್ ಪರಮೋಚ್ಛ ನಾಯಕನಾಗಿ ಅಧಿಕಾರ ನಡೆಸುತ್ತಿದ್ದ ಖೋಮೆನಿಗೆ ಇದೀಗ ದೇಶದ ಜನರೇ ತಿರುಗಿ ಬಿದ್ದಿರುವುದು ತಲೆನೋವಾಗಿ ಪರಿಣಮಿಸಿದೆ ಎಂದು ವರದಿ ವಿವರಿಸಿದೆ.

Advertisement

ಪ್ರತಿಭಟನಾಕಾರರ ವಿರುದ್ಧ ಇರಾನ್ ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿದ್ದು, ಹಲವರನ್ನು ವಶಕ್ಕೆ ಪಡೆದಿರುವುದಾಗಿ ವರದಿ ತಿಳಿಸಿದೆ. ಇರಾನ್ ರಾಜಧಾನಿ ಟೆಹರಾನ್ ನಲ್ಲಿ ಆರಂಭವಾದ ಪ್ರತಿಭಟನೆ ಈಗ ಹಲವೆಡೆ ವಿಸ್ತರಿಸಿರುವುದಾಗಿ ವರದಿ ಹೇಳಿದೆ.

ಇರಾನ್ ಮಿಲಿಟರಿ ಪಡೆಯ ಜನರಲ್ ಕಮಾಂಡರ್ ಖಾಸಿಂ ಸೊಲೆಮನಿಯನ್ನು ಅಮೆರಿಕ ವಾಯುಪಡೆ ದಾಳಿ ನಡೆಸಿ ಹತ್ಯೆಗೈದ ನಂತರ ಉಭಯ ದೇಶಗಳ ನಡುವೆ ಯುದ್ಧ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿತ್ತು. ನಂತರ ಇರಾನ್ ಕೂಡ ಕ್ಷಿಪಣಿ ಮೂಲಕ ಅಮೆರಿಕ ಪಡೆಯ ಮೇಲೆ ದಾಳಿ ನಡೆಸಿತ್ತು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಉಭಯ ದೇಶಗಳು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಯುದ್ಧಭೀತಿಯನ್ನು ದೂರ ಮಾಡಿದ್ದವು. ಆದರೆ ಇದೀಗ ದೇಶದ ಜನರೇ ಇರಾನ್ ಪರಮೋಚ್ಛ ನಾಯಕ ಖೋಮೆನಿ ವಿರುದ್ಧ ತಿರುಗಿಬಿದ್ದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next