ನಾಗ್ಪುರ: ರಣಜಿ ಚಾಂಪಿಯನ್ ವಿದರ್ಭ ಹೊಸ ದಾಖಲೆ ನಿರ್ಮಿಸಿದೆ. ಇರಾನಿ ಕಪ್ ಇತಿಹಾಸದಲ್ಲಿ 800 ರನ್ ಪೇರಿಸಿದ ಮೊದಲ ತಂಡವೆಂಬ ಹಿರಿಮೆಗೆ ಪಾತ್ರವಾಗಿದೆ. ಶೇಷ ಭಾರತ ವಿರುದ್ಧ ನಡೆಯುತ್ತಿರುವ ಪಂದ್ಯದ 4ನೇ ದಿನವಾದ ಶನಿವಾರ ವಿದರ್ಭ ಈ ದಾಖಲೆ ಬರೆಯಿತು. ಒಟ್ಟು 226.3 ಓವರ್‌ಗಳ ಬ್ಯಾಟಿಂಗ್ ನಡೆಸಿ 7 ವಿಕೆಟಿಗೆ ಭರ್ತಿ 800 ರನ್ ಪೇರಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿತು.
ಜವಾಬಿತ್ತ ಶೇಷ ಭಾರತ 6 ವಿಕೆಟಿಗೆ 236 ರನ್ ಗಳಿಸಿ ತೀವ್ರ ಸಂಕಟಕ್ಕೆ ಸಿಲುಕಿದೆ. ರಣಜಿ ಹೀರೋ ರಜನೀಶ್ ಗುರ್ಬಾನಿ 4 ವಿಕೆಟ್ ಉರುಳಿಸಿ ಕರುಣ್ ನಾಯರ್ ಪಡೆಯನ್ನು ಕಾಡಿದ್ದಾರೆ. ಆರಂಭಕಾರ ಪೃಥ್ವಿ ಶಾ (51), ಹನುಮ ವಿಹಾರಿ (ಬ್ಯಾಟಿಂಗ್ 81) ಮತ್ತು ಜಯಂತ್ ಯಾದವ್ (ಬ್ಯಾಟಿಂಗ್ 62) ಹೊರತುಪಡಿಸಿ ಉಳಿದವರ್ಯಾರೂ ಬ್ಯಾಟಿಂಗ್‌ನಲ್ಲಿ ಕ್ಲಿಕ್ ಆಗಲಿಲ್ಲ. ಅದರಲ್ಲೂ ಕರ್ನಾಟಕದ ಕ್ರಿಕೆಟಿಗರು ತೀವ್ರ ವೈಫಲ್ಯ ಅನುಭವಿಸಿದರು. ಆರ್. ಸಮರ್ಥ್ ಖಾತೆಯನ್ನೇ ತೆರೆಯಲಿಲ್ಲ. ಮಾಯಾಂಕ್ ಅಗರ್ವಾಲ್ ಕೇವಲ 11 ರನ್ ಮಾಡಿದರೆ, ನಾಯಕ ಕರುಣ್ ನಾಯರ್ 21 ರನ್ ಗಳಿಸಿ ನಿರ್ಗಮಿಸಿದರು.
ಶೇಷ ಭಾರತದ 6 ವಿಕೆಟ್ 98 ರನ್ ಆಗುವಷ್ಟರಲ್ಲಿ ಉರುಳಿತ್ತು. ಆಗ ಜತೆಗೂಡಿದ ಹನುಮ ವಿಹಾರಿ-ಜಯಂತ್ ಯಾದವ್ ಮುರಿಯದ 7ನೇ ವಿಕೆಟಿಗೆ 138 ರನ್ ಪೇರಿಸಿದರು.ವಿದರ್ಭ 5ಕ್ಕೆ 702 ರನ್ ಮಾಡಿದಲ್ಲಿಂದ 4ನೇ ದಿನದಾಟ ಮುಂದುವರಿಸಿತ್ತು. 99 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಗಣೇಶ್ ಸತೀಶ್ 157ರ ತನಕ ಬ್ಯಾಟಿಂಗ್ ವಿಸ್ತರಿಸಿದರು (221 ಎಸೆತ, 16 ಬೌಂಡರಿ).
ಶೇಷ ಭಾರತ ಪರ 8 ಮಂದಿ ಬೌಲಿಂಗ್ ದಾಳಿಗಿಳಿದರು. ಸಿದ್ಧಾರ್ಥ್ ಕೌಲ್ 91 ರನ್ನಿಗೆ 2 ವಿಕೆಟ್ ಕಿತ್ತು ಹೆಚ್ಚಿನ ಯಶಸ್ಸು ಕಂಡರು.
ರವಿವಾರ ಪಂದ್ಯದ ಅಂತಿಮ ದಿನವಾಗಿದ್ದು, ಮೊದಲ ಸಲ ರಣಜಿ ಟ್ರೋಫಿ ಗೆದ್ದ ವಿದರ್ಭ ಮೊದಲ ಬಾರಿಗೆ ಇರಾನಿ ಕಪ್ ಗೆಲ್ಲುವುದು ಖಾತ್ರಿಯಾಗಿದೆ.