Advertisement
ಚೆನ್ನೈ ವಿರುದ್ಧ ಡು ಪ್ಲೆಸಿಸ್ ಬಳಗದ್ದು ಹೀನಾಯ ಸೋಲೇನೂ ಆಗಿರಲಿಲ್ಲ. 216 ರನ್ ಬಿಟ್ಟುಕೊಟ್ಟರೂ ಚೇಸಿಂಗ್ ವೇಳೆ 9ಕ್ಕೆ 193 ರನ್ ಪೇರಿಸುವಲ್ಲಿ ಯಶಸ್ವಿ ಯಾಗಿತ್ತು. ಟಾಪ್ ಆರ್ಡರ್ ಬ್ಯಾಟಿಂಗ್ ಕ್ಲಿಕ್ ಆಗಿದ್ದಿದ್ದರೆ, ದಿನೇಶ್ ಕಾರ್ತಿಕ್ ಕೊನೆಯ ವರೆಗೂ ಕ್ರೀಸ್‌ನಲ್ಲಿ ಉಳಿದಿದ್ದರೆ ಪಂದ್ಯದ ಫಲಿತಾಂಶವೇ ಬೇರೆ ಆಗಲಿತ್ತು. ಇದಕ್ಕೂ ಮಿಗಿಲಾಗಿ ಸ್ಟಾರ್ ಬೌಲರ್ ಹರ್ಷಲ್ ಪಟೇಲ್ ಅನುಪಸ್ಥಿತಿ ತಂಡದ ಬೌಲಿಂಗ್ ವಿಭಾಗದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ಡೆಲ್ಲಿ ವಿರುದ್ಧವೂ ಹರ್ಷಲ್ ಆಡುತ್ತಿಲ್ಲ ಎಂಬುದು ಆರ್‌ಸಿಬಿ ಪಾಲಿಗೆ ಮತ್ತೆ ಹಿನ್ನಡೆ ಎಂಬುದರಲ್ಲಿ ಅನುಮಾನವಿಲ್ಲ.
ಚೆನ್ನೈ ವಿರುದ್ಧದ ಬೃಹತ್ ಮೊತ್ತದ ಚೇಸಿಂಗ್ ವೇಳೆ ಭದ್ರ ಬುನಾದಿ ನಿರ್ಮಿಸುವಲ್ಲಿ ಸ್ವತಃ ನಾಯಕ ಡು ಪ್ಲೆಸಿಸ್ ವಿಫಲರಾಗಿದ್ದರು. ಅನುಭವಿ ವಿರಾಟ್ ಕೊಹ್ಲಿ ವೈಫಲ್ಯ ಮುಂದುವರಿಯಿತು. ಇವರಿಬ್ಬರ ತ್ವರಿತ ನಿರ್ಗಮನದಿಂದ ಪ್ರತಿಭಾನ್ವಿತ ಲೆಫ್ಟಿ ಅನುಜ್ ರಾವತ್ ಸಹಜ ವಾಗಿಯೇ ಒತ್ತಡಕ್ಕೊಳಗಾದರು.
Related Articles
Advertisement
ಓಪನರ್ ಪೃಥ್ವಿ ಶಾ ಸತತ 2 ಫಿಫ್ಟಿ ಮೂಲಕ ಪ್ರಚಂಡ ಫಾರ್ಮ್ ತೋರ್ಪಡಿಸಿದ್ದಾರೆ. ಡೇವಿಡ್ ವಾರ್ನರ್ ಕೂಡ ಲಯ ಕಂಡುಕೊಂಡಿದ್ದಾರೆ. ಪಂತ್ ವನ್‌ಡೌನ್‌ನಲ್ಲಿ ಬಂದು ಸಿಡಿದು ನಿಂತಿದ್ದಾರೆ. ಈ ಮೂವರಿಗೆ ನಿಯಂತ್ರಣ ಹೇರಿದರೆ ಆರ್‌ಸಿಬಿ ಅರ್ಧ ಗೆದ್ದಂತೆ!
ಕುಲದೀಪ್ ಯಾದವ್, ಖಲೀಲ್ ಅಹ್ಮದ್ ಡೆಲ್ಲಿಯ ಬೌಲಿಂಗ್ ಹೀರೋಸ್. ಕ್ರಮವಾಗಿ 10 ಹಾಗೂ 7 ವಿಕೆಟ್ ಕೆಡವಿ ಘಾತಕವಾಗಿ ಪರಿಣಮಿಸಿದ್ದಾರೆ.
ಇದನ್ನೂ ಓದಿ:ಎಫ್ಐಎಚ್ ಪ್ರೊ ಲೀಗ್ ಹಾಕಿ: ಜರ್ಮನಿಯೆದುರು ಭಾರತಕ್ಕೆ ಗೆಲುವು
ಆರ್‌ಸಿಬಿ ಹರ್ಷಕ್ಕೆ ಹರ್ಷಲ್ ಅನಿವಾರ್ಯ
ಮುಂಬಯಿ: ಆರ್‌ಸಿಬಿಯ ಬೌಲಿಂಗ್ ವಿಭಾಗಕ್ಕೆ ಹರ್ಷಲ್ ಪಟೇಲ್ ಎಷ್ಟು ಅನಿವಾರ್ಯ ಎಂಬುದು ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಕಳೆದ ಪಂದ್ಯದಲ್ಲಿ ಚೆನ್ನಾಗಿ ಅರಿವಾಗಿದೆ. ಪ್ರಸಕ್ತ ಋತುವಿನಲ್ಲಿ ಗೆಲುವನ್ನೇ ಕಾಣದ ಹಾಲಿ ಚಾಂಪಿಯನ್ ಚೆನ್ನೈ ಇನ್ನೂರರ ಗಡಿ ದಾಟಿ ಅಂಕದ ಖಾತೆ ತೆರೆಯಿತು. ಈ ಪಂದ್ಯಕ್ಕೂ ಮುನ್ನ ಬೆಂಗಳೂರು ತಂಡ ಹ್ಯಾಟ್ರಿಕ್ ಗೆಲುವಿನ ಸಂಭ್ರಮದಲ್ಲಿತ್ತು ಎಂಬುದನ್ನು ಮರೆಯುವಂತಿಲ್ಲ. ಇದೀಗ ಶನಿವಾರ ರಾತ್ರಿ ಆರ್‌ಸಿಬಿ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಳಿಲಿಯಲಿದೆ. ಈ ಪಂದ್ಯದಲ್ಲೂ ಹರ್ಷಲ್ ಪಟೇಲ್ ಆಡುತ್ತಿಲ್ಲ. ಸಹಜವಾಗಿಯೇ ಆರ್‌ಸಿಬಿ ಬೌಲಿಂಗ್ ದುರ್ಬಲವಾಗಿ ಗೋಚರಿಸುತ್ತಿದೆ. ಮುಖ್ಯವಾಗಿ ಡೆತ್ ಓವರ್‌ಗಳಲ್ಲಿ ರನ್ ನಿಯಂತ್ರಿಸಲು ಡು ಪ್ಲೆಸಿಸ್ ಬಳಗ ಪರದಾಡಬೇಕಿದೆ ಎಂಬುದು ಸದ್ಯದ ಲೆಕ್ಕಾಚಾರ. “ಹರ್ಷಲ್ ಪಟೇಲ್ ಅವರ ಮೌಲ್ಯವೇನು ಎಂಬುದು ನಿಮ್ಮೆಲ್ಲರ ಅರಿವಿಗೆ ಬಂದಿದೆ. ಎದುರಾಳಿ ತಂಡದ ಬ್ಯಾಟಿಂಗ್ ಆಕ್ರಮಣವನ್ನು ಸಂಪೂರ್ಣವಾಗಿ ನಿಯಂತ್ರಿಸಬಲ್ಲ ತಾಕತ್ತು ಅವರಿಗಿದೆ. ಅವರಿಲ್ಲದೆ ನಮ್ಮ ಬೌಲಿಂಗ್ ವಿಭಾಗಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಕೂಡಲೇ ಅವರು ತಂಡವನ್ನು ಕೂಡಿಕೊಳ್ಳುತ್ತಾರೆಂಬ ವಿಶ್ವಾಸ ನಮ್ಮದು’ ಎಂದಿದ್ದಾರೆ ಆರ್‌ಸಿಬಿ ನಾಯಕ ಫಾ ಡು ಪ್ಲೆಸಿಸ್. ಅಂದಮೇಲೆ ಪಟೇಲ್ ಡೆಲ್ಲಿ ವಿರುದ್ಧವೂ ಲಭ್ಯರಿರುವುದಿಲ್ಲ ಎಂಬುದು ಸಾಬೀತಾಗಿದೆ. ಸಹೋದರಿಯ ಆಗಲಿಕೆಯ ನೋವಿನಲ್ಲಿರುವ ಹರ್ಷಲ್ ಪಟೇಲ್ ತಂಡವನ್ನು ಯಾವಾಗ ಕೂಡಿಕೊಳ್ಳುವರೆಂಬುದು ಇನ್ನೂ ಖಾತ್ರಿಯಾಗಿಲ್ಲ. ಅವರು ಕ್ವಾರಂಟೈನ್ ಪೂರೈಸಿ ಜೈವಿಕ ಸುರಕ್ಷಾ ವಲಯವನ್ನು ಪ್ರವೇಶಿಸಬೇಕಾಗುತ್ತದೆ. ಗುಜರಾತ್‌ನವರಾದ 31 ವರ್ಷದ ಹರ್ಷಲ್ ಪಟೇಲ್ 2021ರ ಸೀಸನ್‌ನಲ್ಲಿ 32 ವಿಕೆಟ್ ಉಡಾಯಿಸಿದ್ದರು. ಟಿ20ಯ ಅತ್ಯಂತ ಘಾತಕ ಬೌಲರ್ ಎಂಬುದು ಅವರ ಹೆಗ್ಗಳಿಕೆ. ಅಪಾಯಕಾರಿ ಆಫ್ ಕಟರ್, ನಿಧಾನ ಗತಿಯ ಎಸೆತಗಳೆಲ್ಲ ಪಟೇಲ್ ಬತ್ತಳಿಕೆಯಲ್ಲಿನ ಪ್ರಮುಖ ಅಸ್ತ್ರಗಳು. ಈ ಬಾರಿ 4 ಪಂದ್ಯಗಳಿಂದ 6 ವಿಕೆಟ್ ಕೆಡವಿದ್ದಾರೆ.