ಮುಂಬೈ: ಟೀಂ ಇಂಡಿಯಾ ಆಟಗಾರ, ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಶ್ರೇಯಸ್ ಅಯ್ಯರ್ ಅವರ ಫಿಟ್ನೆಸ್ ಬಗೆಗಿನ ಊಹಾಪೋಹಗಳು ಕ್ರಿಕೆಟ್ ವಲಯಗಳಲ್ಲಿ ಇನ್ನೂ ಮುಂದುವರಿದಿದೆ. ಗುರುವಾರದಂದು ರಣಜಿ ಟ್ರೋಫಿಯಲ್ಲಿ ಮುಂಬೈನ ಜೊತೆಗಿನ ಅಯ್ಯರ್ ಅವರ ಬೆನ್ನಿನ ಗಾಯವು ಉಲ್ಬಣಗೊಂಡಿತು ಎಂದು ವರದಿಯಾಗಿತ್ತು. ಕೆಲವು ಮೂಲಗಳು ಅವರು ಗಾಯದ ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಕೆಲವು ಆರಂಭಿಕ ಪಂದ್ಯಗಳಿಂದ ಹೊರಗುಳಿಯಬಹುದು ಎಂದು ಸೂಚಿಸಿದರೆ, ಸಂಬಂಧಪಟ್ಟ ಅಧಿಕಾರಿಗಳು ಪಂದ್ಯಾವಳಿಯಲ್ಲಿ ಅವರ ಭಾಗವಹಿಸುವಿಕೆಗೆ ಯಾವುದೇ ಅಪಾಯವನ್ನು ನಿರಾಕರಿಸಿದ್ದಾರೆ.
“ಆತಂಕಕ್ಕೆ ಕಾರಣವಿಲ್ಲ; ಅವರು ಆರೋಗ್ಯವಾಗಿದ್ದಾರೆ ಮತ್ತು ಎರಡು ದಿನಗಳಲ್ಲಿ ಐಪಿಎಲ್ ಪೂರ್ವ ಶಿಬಿರಕ್ಕಾಗಿ ಕೋಲ್ಕತ್ತಾಗೆ ಹೋಗಲಿದ್ದಾರೆ” ಎಂದು ಮುಂಬೈ ತಂಡದ ಮ್ಯಾನೇಜರ್ ಭೂಷಣ್ ಪಾಟೀಲ್ ಹೇಳಿದ್ದಾರೆ.
ಕೆಕೆಆರ್ ಫ್ರಾಂಚೈಸಿ ಕೂಡಾ ಅಯ್ಯರ್ ಫಿಟ್ ಆಗಿದ್ದಾರೆ ಎಂದು ಹೇಳಿದೆ ಎಂದು ಕ್ರಿಕ್ ಬಜ್ ವರದಿ ಮಾಡಿದೆ. ಆದಾಗ್ಯೂ, ಅಯ್ಯರ್ ಮಾತ್ರ ತನ್ನ ಫಿಟ್ನೆಸ್ ಸ್ಥಿತಿಯನ್ನು ಇನ್ನೂ ಖಚಿತಪಡಿಸಿಲ್ಲ.
ಗುರುವಾರ ಮುಕ್ತಾಯಗೊಂಡ ರಣಜಿ ಟ್ರೋಫಿ ಫೈನಲ್ ನ ನಾಲ್ಕನೇ ಮತ್ತು ಐದನೇ ದಿನಗಳಲ್ಲಿ ವಿದರ್ಭದ ಎರಡನೇ ಇನ್ನಿಂಗ್ಸ್ ನಲ್ಲಿ ಅಯ್ಯರ್ ಫೀಲ್ಡಿಂಗ್ ಬಾರದೆ ಇದ್ದಾಗ ಅವರ ಫಿಟ್ನೆಸ್ ಬಗ್ಗೆ ಪ್ರಶ್ನೆಗಳು ಎದ್ದವು.
ಮುಂಬೈ ಪರವಾಗಿ ಎರಡನೇ ಇನ್ನಿಂಗ್ಸ್ ನಲ್ಲಿ 95 ರನ್ ಗಳಿಸುವ ಸಮಯದಲ್ಲಿ, ಅಯ್ಯರ್ ಅವರು ಎರಡು ಸಂದರ್ಭಗಳಲ್ಲಿ ಫಿಸಿಯೋ ನೆರವು ಪಡೆದರು.