ಮುಂಬೈ: ಪ್ಲೇ ಆಫ್ ಸ್ಪರ್ಧೆಯಿಂದ ಈಗಾಗಲೇ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್ ತಂಡ, ಶುಕ್ರವಾರ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ತನ್ನ ಅಭಿಯಾನವನ್ನು ಅಂತ್ಯಗೊಳಿಸಲು ಮುಂಬೈ ಯೋಚಿಸುತ್ತಿದೆ.
ಹಲವು ದಿನಗಳ ಹಿಂದೆಯೆ ಮುಂಬೈ ಪ್ಲೇ ಆಫ್ ಸ್ಪರ್ಧೆಯಿಂದ ಹೊರಬಿದ್ದಿದ್ದರೆ ಲಕ್ನೋ ತಂಡ ಶುಕ್ರವಾರದ ಪಂದ್ಯದಲ್ಲಿ ಗೆದ್ದರೂ ಅಂತಿಮ ನಾಲ್ಕರ ಹೋರಾಟಕ್ಕೆ ತೇರ್ಗಡೆಯಾಗುವ ಅವಕಾಶ ಬಹಳ ಕಡಿಮೆ. ಕಳೆದ ಮೂರು ಪಂದ್ಯಗಳಲ್ಲಿ ಸತತ ಸೋಲು ಕಂಡಿರುವ ಲಕ್ನೋ ತಂಡವು ಅಮೂಲ್ಯ ಅಂಕಗಳನ್ನು ಕಳೆದುಕೊಂಡಿತಲ್ಲದೇ ತನ್ನ ರನ್‌ಧಾರಣೆಯನ್ನು ಉತ್ತಮಪಡಿಸಿಕೊಳ್ಳಲು ವಿಫಲವಾಗಿತ್ತು.
ಕೆಕೆಆರ್ ವಿರುದ್ಧ 98 ರನ್ನುಗಳ ಸೋಲು, ಹೈದರಾಬಾದ್ ಕೈಯಲ್ಲಿ 10 ವಿಕೆಟ್‌ಗಳ ಆಘಾತಕಾರಿ ಸೋಲು ಕಂಡಿದ್ದ ಲಕ್ನೋ ತಂಡ ಆಬಳಿಕ ಡೆಲ್ಲಿ ವಿರುದ್ಧ 19 ರನ್ನುಗಳಿಂದ ಪರಾಭವಗೊಂಡು ಪ್ಲೇ ಆಫ್ಗೆ ತೇರ್ಗಡೆಯಾಗುವ ಅವಕಾಶವನ್ನು ಕಳೆದುಕೊಂಡಿತ್ತು. ಸದ್ಯ 12 ಅಂಕ ಹೊಂದಿರುವ ಲಕ್ನೋ -0.787 ರನ್‌ಧಾರಣೆ ಹೊಂದಿದೆ. ಅಂತಿಮ ಪಂದ್ಯದಲ್ಲಿ ಬೃಹತ್ ಅಂತರದಿಂದ ಗೆಲುವು ಸಾಧಿಸಿದರೂ ಅಂತಿಮ ನಾಲ್ಕರ ಹಂತಕ್ಕೇರುವುದು ಬಹಳಷ್ಟು ಕಷ್ಟ. ಲಕ್ನೋ ಕಳೆದ ಋತುವಿನಲ್ಲಿ ಅಂತಿಮ ನಾಲ್ಕರ ಹಂತಕ್ಕೆ ತಲುಪಿತ್ತು.
ಐದು ಬಾರಿಯ ಚಾಂಪಿಯನ್ ಮುಂಬೈ ಈ ಬಾರಿ ಮೊದಲ ತಂಡವಾಗಿ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿತ್ತು. ನಾಯಕತ್ವದ ಬದಲಾವಣೆಯಿಂದ ತಂಡದ ನಿರ್ವಹಣೆ ಮೇಲೆ ಪರಿಣಾಮ ಬೀರಿದೆ. ಹೊಸ ನಾಯಕ ಹಾರ್ದಿಖ್ ಪಾಂಡ್ಯ ನಾಯಕತ್ವದಲ್ಲಿ ತಂಡ ಉತ್ಕೃಷ್ಟ ನಿರ್ವಹಣೆ ನೀಡಲು ವಿಫಲವಾಯಿತು. ಆಡಿದ 13 ಪಂದ್ಯಗಳಲ್ಲಿ ತಂಡ ಕೇವಲ ನಾಲ್ಕು ಪಂದ್ಯಗಳಲ್ಲಿ ಜಯ ದಾಖಲಿಸಲು ಸಾಧ್ಯವಾಗಿತ್ತು. ಅಂತಿಮ ಪಂದ್ಯದಲ್ಲಿ ಗೆದ್ದರೆ ಹತ್ತು ಅಂಕ ಪಡೆಯುವ ಮುಂಬೈ ಕೊನೆಯ ಸ್ಥಾನವನ್ನು ತಪ್ಪಿಸಲು ಸಾಧ್ಯವಿದೆ.
ರೋಹಿತ್ ಅವರ ಬದಲಿಗೆ ಹಾರ್ದಿಕ್ ಅವರನ್ನು ನಾಯಕರನ್ನಾಗಿ ಬದಲಾಯಿಸಿದ್ದರಿಂದ ಅಭಿಮಾನಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ತಂಡ ಬಲಿಷ್ಠ ಬ್ಯಾಟಿಂಗ್, ಬೌಲಿಂಗ್ ಶಕ್ತಿಯನ್ನು ಹೊಂದಿದ್ದರೂ ಶ್ರೇಷ್ಠ ನಿರ್ವಹಣೆ ನೀಡಲು ವಿಫಲವಾಗಿತ್ತು. ಟಿ20 ತಂಡಕ್ಕೆ ಆಯ್ಕೆಯಾಗಿರುವ ರೋಹಿತ್, ಸೂರ್ಯಕುಮಾರ್ ಯಾದವ್, ಪಾಂಡ್ಯ ಸಹಿತ ತಂಡದ ಬ್ಯಾಟಿಂಗ್ ಸಮಗ್ರವಾಗಿ ನಿರೀಕ್ಷಿತ ನಿರ್ವಹಣೆ ನೀಡಿಲ್ಲ. ಆದರೆ ಬೌಲಿಂಗ್‌ನಲ್ಲಿ ಜಸ್‌ಪ್ರೀತ್ ಬುಮ್ರಾ ಅವರ ವೈಯಕ್ತಿಕ ಶ್ರೇಷ್ಠ ಸಾಧನೆ (13 ಪಂದ್ಯಗಳಿಂದ 20 ವಿಕೆಟ್) ತಂಡಕ್ಕೆ ಯಾವುದೇ ನೆರವು ನೀಡಲಿಲ್ಲ.
ಮುಂಬೈಯಂತೆ ಲಕ್ನೋ ತಂಡ ಅಗತ್ಯದ ಸಂದರ್ಭ ಸಿಡಿಯದಿರುವುದು ಮತ್ತು ಉತ್ತಮ ಕ್ಷಣಗಳಲ್ಲಿ ವೈಫಲ್ಯ ಕಂಡಿರುವುದು ಹಿನ್ನಡೆಗೆ ಕಾರಣವಾಗಿದೆ. ನಾಯಕ ರಾಹುಲ್ ಬ್ಯಾಟಿಂಗ್‌ನಲ್ಲಿ ಯಶಸ್ವಿಯಾಗಿದ್ದರೂ ಉಳಿದವರು ನಿರೀಕ್ಷಿತ ನಿರ್ವಹಣೆ ನೀಡಲಿಲ್ಲ.
ಅಂಕಣಗುಟ್ಟು:
ಮುಂಬೈಯ ವಾಂಖೇಡೆ ಮೈದಾನ ಬ್ಯಾಟಿಂಗ್‌ಗೆ ಹೆಚ್ಚು ನೆರವಾಗುವ ಪಿಚ್. ಆದರೆ ಇದು ಕೆಲವೊಮ್ಮೆ ನಿರ್ದಿಷ್ಟ ಸ್ಪಿನ್ನರ್‌ಗಳಿಗೆ ನೆರವಾಗುವುದಿದೆ. ಈ ಮೈದಾನದಲ್ಲಿ ಒಟ್ಟು 115 ಐಪಿಎಲ್ ಪಂದ್ಯಗಳು ನಡೆದಿದ್ದು ಇದರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ 53 ಪಂದ್ಯಗಳಲ್ಲಿ ಗೆದ್ದಿದ್ದರೆ, ಬೌಲಿಂಗ್ ಮಾಡಿದ ತಂಡ 62 ಪಂದ್ಯಗಳಲ್ಲಿ ಗೆದ್ದಿದೆ. ಮೊದಲ ಇನಿಂಗ್ಸ್ ಸರಾಸರಿ ಸ್ಕೋರ್ 170.
ಮುಂಬೈ-ಲಕ್ನೋ ಮುಖಾಮುಖಿ
ಒಟ್ಟು ಪಂದ್ಯ: 5
ಮುಂಬೈ ಜಯ: 1
ಲಕ್ನೋ ಜಯ: 4
ಸಂಭಾವ್ಯ ತಂಡಗಳು:
ಮುಂಬೈ: ರೋಹಿತ್, ಇಶಾನ್, ಸೂರ್ಯಕುಮಾರ್, ತಿಲಕ್, ಹಾರ್ದಿಕ್ ಪಾಂಡ್ಯ, ನೇಹಲ್, ಟಿಮ್ ಡೇವಿಡ್, ಪೀಯೂಷ್, ಜಸ್‌ಪ್ರೀತ್, ಕಾಂಬೋಜ್, ನುವಾನ್.
ಲಕ್ನೋ: ರಾಹುಲ್, ಡಿಕಾಕ್, ಹೂಡಾ, ಸ್ಟಾಯಿನಿಸ್, ಕೃನಾಲ್, ಪೂರನ್, ಬದೋನಿ, ಅರ್ಷಾದ್, ಬಿಷ್ಣೋಯಿ, ನವೀನ್, ಯಶ್.
ಸ್ಥಳ: ವಾಂಖೇಡೆ ಮೈದಾನ, ಮುಂಬೈ
ನೇರಪ್ರಸಾರ: ಸ್ಟಾರ್‌ನ್ಪೋರ್ಟ್ಸ್ (ಟೀವಿ), ಜಿಯೋ ಸಿನಿಮಾ (ಆ್ಯಪ್)
ಪಂದ್ಯ ಆರಂಭ: ರಾತ್ರಿ 7.30