Advertisement
ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ದ್ವಿತೀಯಾರ್ಧದ ಆಟದಲ್ಲಿ ತೀವ್ರ ರನ್ ಬರಗಾಲಕ್ಕೆ ಸಿಲುಕಿತು. ಕೇವಲ 3 ವಿಕೆಟ್ ಉರುಳಿದರೂ ಸ್ಕೋರ್‌ಬೋರ್ಡ್‌ನಲ್ಲಿ ದಾಖಲಾದದ್ದು 149 ರನ್ ಮಾತ್ರ. ಜವಾಬಿತ್ತ ಲಕ್ನೋ 19.4 ಓವರ್‌ಗಳಲ್ಲಿ 4 ವಿಕೆಟಿಗೆ 155 ರನ್ ಬಾರಿಸಿ ತನ್ನ 3ನೇ ಜಯವನ್ನು ಸಾಧಿಸಿತು. ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿತು.
Related Articles
Advertisement
ಚೇಸಿಂಗ್ ವೇಳೆಯೂ ಅಷ್ಟೇ, ಲಕ್ನೋ ಆರಂಭದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿತು. ಕೆ.ಎಲ್. ರಾಹುಲ್-ಕ್ವಿಂಟನ್ ಡಿ ಕಾಕ್ 8.4 ಓವರ್‌ಗಳಿಂದ ಮೊದಲ ವಿಕೆಟಿಗೆ 73 ರನ್ ಪೇರಿಸಿದರು. ಕೆಲವು ಓವರ್ ಬಾಕಿ ಇರುವಾಗಲೇ ಲಕ್ನೋ ಗೆದ್ದು ಬರಲಿದೆ ಎಂಬ ನಿರೀಕ್ಷೆ ದಟ್ಟವಾಗಿತ್ತು. ಆದರೆ ಡೆಲ್ಲಿ ಬೌಲರ್ ಕೂಡ ಬಿಗಿ ದಾಳಿ ಸಂಘಟಿಸತೊಡಗಿದರು. ಹೀಗಾಗಿ ಪಂದ್ಯ ಕೊನೆಯ ಓವರ್ ತನಕ ಸಾಗಿತು.
ಕ್ವಿಂಟನ್ ಡಿ ಕಾಕ್ 80 ರನ್ ಬಾರಿಸಿ ಲಕ್ನೋ ದಾರಿಯನ್ನು ಸುಗಮಗೊಳಿಸಿದರು (52 ಎಸೆತ, 9 ಫೋರ್, 2 ಸಿಕ್ಸರ್). ರಾಹುಲ್ 24 ರನ್ ಮಾಡಿದರು. ಅಂತಿಮ ಓವರ್‌ನಲ್ಲಿ ಕೇವಲ 5 ರನ್ ಅಗತ್ಯವಿತ್ತು. ಠಾಕೂರ್ ಅವರ ಮೊದಲ ಎಸೆತದಲ್ಲೇ ಹೂಡಾ ಔಟಾದರು. ಕೊನೆಯಲ್ಲಿ ಈ ವರ್ಷದ ಐಪಿಎಲ್ ತಾರೆ ಆಯುಷ್ ಬದೋನಿ ಸತತ ಬೌಂಡರಿ, ಸಿಕ್ಸರ್ ಬಾರಿಸಿ ತಂಡದ ಗೆಲುವನ್ನು ಸಾರಿದರು.
ಪೃಥ್ವಿ ಶಾ ಪ್ರಚಂಡ ಆಟ :
ಪೃಥ್ವಿ ಶಾ ಡೆಲ್ಲಿ ಕ್ಯಾಪಿಟಲ್ಸ್‌ಗೆ ಬಿರುಸಿನ ಆರಂಭ ಒದಗಿಸಿದರು. ಪವರ್ ಪ್ಲೇ ಅವಧಿಯಲ್ಲಿ ಲಕ್ನೋ ಬೌಲರ್‌ಗಳ ಮೇಲೆ ದಂಡೆತ್ತಿ ಹೋದರು. ಈ ವೇಳೆ ನಾಯಕ ರಾಹುಲ್ 5 ಮಂದಿ ಬೌಲರ್‌ಗಳನ್ನು ದಾಳಿಗಿಳಿಸಿದರೂ ಪ್ರಯೋಜನವಾಗಲಿಲ್ಲ. ಹೋಲ್ಡರ್, ಕೆ. ಗೌತಮ್, ಆವೇಶ್ ಖಾನ್, ಟೈ… ಎಲ್ಲರೂ ದಂಡಿಸಿಕೊಂಡರು. ಡೆಲ್ಲಿ ವಿಕೆಟ್ ನಷ್ಟವಿಲ್ಲದೆ 52 ರನ್ ಪೇರಿಸಿ ದೊಡ್ಡ ಮೊತ್ತದ ಸೂಚನೆ ನೀಡಿತು. ಇದರಲ್ಲಿ ಶಾ ಪಾಲೇ 47 ರನ್ ಆಗಿತ್ತು. 30 ಎಸೆತಗಳಲ್ಲಿ ಶಾ ಅರ್ಧ ಶತಕ ಪೂರೈಸಿದರು.
8ನೇ ಓವರ್‌ನಲ್ಲಿ ಕೃಷ್ಣಪ್ಪ ಗೌತಮ್ ಲಕ್ನೋಗೆ ಮೊದಲ ಯಶಸ್ಸು ತಂದಿತ್ತರು. ಗುಡುಗುತ್ತ ಸಾಗಿದ್ದ ಶಾ ಅವರ ವಿಕೆಟ್ ಉಡಾಯಿಸಿದರು. 34 ಎಸೆತ ಎದುರಿಸಿದ ಶಾ 9 ಬೌಂಡರಿ, 2 ಸಿಕ್ಸರ್ ನೆರವಿನಿಂದ 61 ರನ್ ಬಾರಿಸಿದರು.
ಪ್ರಸಕ್ತ ಋತುವಿನಲ್ಲಿ ಮೊದಲ ಪಂದ್ಯವಾಡಿದ ಡೇವಿಡ್ ವಾರ್ನರ್‌ಗೆ ಇನ್ನೊಂದು ತುದಿಯಲ್ಲಿ ನಿಂತು ಶಾ ಆಟವನ್ನು ವೀಕ್ಷಿಸುವುದೇ ಕೆಲಸವಾಯಿತು. ಇವರ ಗಳಿಕೆ ಕೇವಲ 4 ರನ್ (12 ಎಸೆತ). ಶಾ ನಿರ್ಗಮಿಸಿದ ಮರು ಓವರ್‌ನಲ್ಲೇ ರವಿ ಬೊಷ್ಣೋಯಿ ವಾರ್ನರ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ವಾರ್ನರ್ ಬಿಷ್ಣೋಯಿಗೆ ವಿಕೆಟ್ ಒಪ್ಪಸಿದ 3ನೇ ನಿದರ್ಶನ ಇದಾಗಿದೆ. ಅಲ್ಲಿಗೆ ಡೆಲ್ಲಿಯ ಆರ್ಭಟ ಕಡಿಮೆಯಾಗುತ್ತ ಹೋಯಿತು. 10 ಓವರ್‌ಗಳ ಅಂತ್ಯಕ್ಕೆ ಡೆಲ್ಲಿ 2 ವಿಕೆಟಿಗೆ 73 ರನ್ ಮಾಡಿತ್ತು.
ರವಿ ಬಿಷ್ಣೋಯಿ ತಮ್ಮ ಮುಂದಿನ ಓವರ್‌ನಲ್ಲೇ ಮತ್ತೂಂದು ದೊಡ್ಡ ಬೇಟೆಯಾಡಿದರು. ವಿಂಡೀಸ್‌ನ ಬಿಗ್ ಹಿಟ್ಟರ್ ರೋವ್ಮನ್ ಪೊವೆಲ್ ಅವರನ್ನು ಬೌಲ್ಡ್ ಮಾಡಿದರು. 10 ಎಸೆತ ಎದುರಿಸಿದ ಪೊವೆಲ್, ಗಳಿಸಿದ್ದು ಮೂರೇ ರನ್.
ಪಂತ್-ಸರ್ಫರಾಜ್‌ಗೆ ಸವಾಲು :
4ನೇ ವಿಕೆಟಿಗೆ ನಾಯಕ ರಿಷಭ್ ಪಂತ್ ಮತ್ತು ಸರ್ಫರಾಜ್ ಖಾನ್ ಜತೆಗೂಡಿದರು. ಆಗಿನ್ನೂ ಅರ್ಧದಷ್ಟು ಆಟ ಬಾಕಿ ಇತ್ತು. ಪೃಥ್ವಿ ಶಾ ಸಿಡಿದು ನಿಂತ ರೀತಿಯಲ್ಲೇ ಇವರಿಬ್ಬರು ಅಬ್ಬರಿಸಿದ್ದೇ ಆದಲ್ಲಿ ತಂಡದ ಮೊತ್ತ ಇನ್ನೂರರ ಗಡಿ ತಲುಪುವ ಎಲ್ಲ ಸಾಧ್ಯತೆ ಇತ್ತು. ಆದರೆ ಲಕ್ನೋದ ಬಿಗಿಯಾದ ಬೌಲಿಂಗ್ ದಾಳಿ ಇಬ್ಬರಿಗೂ ಸವಾಲಾಗಿ ಪರಿಣಮಿಸಿತು. ಈ ಜೋಡಿಯನ್ನು ಬೇರ್ಪಡಿಸಲು ಲಕ್ನೋಗೆ ಸಾಧ್ಯವಾಗದೆ ಹೋದರೂ 4ನೇ ವಿಕೆಟಿಗೆ ಡೆಲ್ಲಿಯಿಂದ ಪೇರಿಸಲು ಸಾಧ್ಯವಾದದ್ದು 75 ರನ್ ಮಾತ್ರ.
ರಿಷಭ್ ಪಂತ್ 3 ಫೋರ್, 2 ಸಿಕ್ಸರ್ ಸಿಡಿಸಿದರೂ 39 ರನ್ನಿಗೆ 36 ಎಸೆತ ತೆಗೆದುಕೊಂಡರು. ಸಫìರಾಜ್ 28 ಎಸೆತಗಳಿಂದ 36 ರನ್ ಹೊಡೆದರು (3 ಬೌಂಡರಿ). ರವಿ ಬಿಷ್ಣೋಯಿ, ಕೃಷ್ಣಪ್ಪ ಗೌತಮ್ ನಿಯಂತ್ರಿತ ಬೌಲಿಂಗ್ ಮೂಲಕ ಗಮನ ಸೆಳೆದರು.