Advertisement

ಐಪಿಎಲ್‌ 2022: ಡೆಲ್ಲಿ ಕ್ಯಾಪಿಟಲ್ಸ್‌-ಪಂಜಾಬ್‌ ಕಿಂಗ್ಸ್‌: ಮಸ್ಟ್‌ ವಿನ್‌ ಗೇಮ್‌

04:21 PM May 16, 2022 | Team Udayavani |

ನವೀ ಮುಂಬಯಿ: ಐಪಿಎಲ್‌ ಕ್ಲೈಮ್ಯಾಕ್ಸ್‌ ಅತ್ಯಂತ ರೋಚಕ ಘಟ್ಟ ತಲುಪಿದೆ. ಸೋಮವಾರ ಪರಸ್ಪರ ಎದುರಾಗಲಿರುವ ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಪಂಜಾಬ್‌ ಕಿಂಗ್ಸ್‌ ತಂಡಗಳು ಅಗ್ರ ನಾಲ್ಕರಲ್ಲಿ ಕಾಣಿಸಿಕೊಳ್ಳಲು ಇನ್ನಿಲ್ಲದ ಪೈಪೋಟಿಗೆ ಇಳಿಯಲಿವೆ. ಇಲ್ಲಿ ಗೆದ್ದವರಿಗಷ್ಟೇ ಒಂದು ಸ್ಥಾನ ಮೀಸಲು ಎಂಬುದು ಸದ್ಯದ ಲೆಕ್ಕಾಚಾರ. ಹೀಗಾಗಿ ಎರಡೂ ತಂಡಗಳಿಗೆ ಇದು “ಮಸ್ಟ್‌ ವಿನ್‌ ಗೇಮ್‌’.

Advertisement

ಕಳೆದ ಪಂದ್ಯದಲ್ಲಿ ಆರ್‌ಸಿಬಿಯನ್ನು ಭರ್ಜರಿಯಾಗಿ ಮಣಿಸಿದ ಪಂಜಾಬ್‌ 12 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ. ರನ್‌ರೇಟ್‌ +0.023. ಡೆಲ್ಲಿ ಕೂಡ 12 ಅಂಕ ಹೊಂದಿದೆ. ರನ್‌ರೇಟ್‌ನಲ್ಲಿ ಪಂಜಾಬ್‌ಗಿಂತ ಮುಂದಿರುವ ಕಾರಣ (+0.210) 5ನೇ ಸ್ಥಾನದಲ್ಲಿದೆ. ಹಿಂದಿನ ಪಂದ್ಯದಲ್ಲಿ ರಾಜಸ್ಥಾನವನ್ನು ಕೆಡವಿದ ಉತ್ಸಾಹ ಡೆಲ್ಲಿ ಬಳಗದಲ್ಲಿ ಕಂಡುಬರುತ್ತಿದೆ. ಆದರೆ ಪಂಜಾಬ್‌ ಮತ್ತು ಡೆಲ್ಲಿ ಈ ಋತುವಿನಲ್ಲಿ ಸತತ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿಲ್ಲ ಎಂಬುದನ್ನು ಗಮನಿಸಿಬೇಕು. ಸೋಮವಾರ ಒಂದು ತಂಡ ಈ ಸಂಕಟದಿಂದ ಪಾರಾಗಲಿದೆ; ಮತ್ತು ಈ ತಂಡಕ್ಕೆ ಪ್ಲೇ ಆಫ್ ಪ್ರವೇಶಾವಕಾಶ ಹೆಚ್ಚಿರಲಿದೆ. ಸೋತ ತಂಡದ ಹಾದಿ ಬಹುತೇಕ ಮುಚ್ಚಲಿದೆ.

ಡೆಲ್ಲಿಗೆ ಓಪನಿಂಗ್‌ ಸಮಸ್ಯೆ
ಸದ್ಯ ಡೆಲ್ಲಿ ತಂಡದ ಪ್ರಮುಖ ಸಮಸ್ಯೆಯೆಂದರೆ, ಪ್ರಚಂಡ ಫಾರ್ಮ್ನಲ್ಲಿರುವ ಎಡಗೈ ಆರಂಭಕಾರ ಶಿಖರ್‌ ಧವನ್‌ ಅವರಿಗೆ ಸೂಕ್ತ ಜತೆಗಾರ ಇಲ್ಲದಿರುವುದು. ಪೃಥ್ವಿ ಶಾ ಸ್ಥಾನಕ್ಕೆ ಬಂದ ಮನ್‌ದೀಪ್‌ ಸಿಂಗ್‌ ಮತ್ತು ಶ್ರೀಕರ್‌ ಭರತ್‌ ಇಬ್ಬರೂ ವಿಫ‌ಲರಾಗಿದ್ದಾರೆ. ಈ ನಡುವೆ ಶಾ ಟೈಫಾಯ್ಡನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಆದರೆ ಸೋಮವಾರ ಆಡುವುದು ಅನುಮಾನ.

ಕಾಂಗರೂ ನಾಡಿನ ಬಿಗ್‌ ಹಿಟ್ಟಿಂಗ್‌ ಆಲ್‌ರೌಂಡರ್‌ ಮಿಚೆಲ್‌ ಮಾರ್ಷ್‌ ಉತ್ತಮ ಲಯದಲ್ಲಿದ್ದಾರೆ. ರಾಜಸ್ಥಾನ್‌ ವಿರುದ್ಧ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗಗಳೆರಡರಲ್ಲೂ ಮಿಂಚಿದ್ದಾರೆ. ಇವರ ಪಾತ್ರ ಮತ್ತೆ ನಿರ್ಣಾಯಕವಾಗಲಿದೆ. ಆದರೆ ನಾಯಕ ರಿಷಭ್‌ ಪಂತ್‌ ಅವರ ಬ್ಯಾಟಿಂಗ್‌ ಚಿಂತೆಯ ಸಂಗತಿಯಾಗಿದೆ. ಅವರಿನ್ನೂ ತಮ್ಮ ಸ್ಫೋಟಕ ಆಟಕ್ಕೆ ಮುಂದಾಗಿಲ್ಲ; ಮ್ಯಾಚ್‌ ವಿನ್ನರ್‌ ಕೂಡ ಆಗಿಲ್ಲ.

ಡೆಲ್ಲಿ ಬೌಲಿಂಗ್‌ ವಿಭಾಗದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಶಾದೂìಲ್‌ ಠಾಕೂರ್‌, ಆ್ಯನ್ರಿಚ್‌ ನೋರ್ಜೆ ಇನ್ನಷ್ಟು ಘಾತಕವಾಗಿ ಪರಿಣಮಿಸಬೇಕಿದೆ. ಖಲೀಲ್‌ ಅಹ್ಮದ್‌ ಬದಲು ಬಂದ ಚೇತನ್‌ ಸಕಾರಿಯ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಸ್ಪಿನ್‌ದ್ವಯರಾದ ಕುಲದೀಪ್‌ ಯಾದವ್‌, ಅಕ್ಷರ್‌ ಪಟೇಲ್‌ ಅವರನ್ನು ತಂಡ ಹೆಚ್ಚು ಅವಲಂಬಿಸಿದೆ.

Advertisement

ಪಂಜಾಬ್‌ ಕಿಂಗ್ಸ್‌
ಬ್ಯಾಟಿಂಗ್‌ ಬಲಿಷ್ಠ
ಪಂಜಾಬ್‌ ಪಾಳೆಯದಲ್ಲಿ ಜಾನಿ ಬೇರ್‌ಸ್ಟೊ, ಲಿಯಮ್‌ ಲಿವಿಂಗ್‌ಸ್ಟೋನ್‌, ಶಿಖರ್‌ ಧವನ್‌, ಭನುಕ ರಾಜಪಕ್ಸ ಅವರಂಥ ಹೊಡಿಬಡಿ ಆಟಗಾರರಿದ್ದಾರೆ. ಆರ್‌ಸಿಬಿ ಬೌಲರ್‌ಗಳನ್ನು ಇವರು ದಂಡಿಸಿದ ರೀತಿ ಇನ್ನೂ ಕಣ್ಮುಂದಿದೆ. ಡೂ ಆರ್‌ ಡೈ ಪಂದ್ಯವಾದ್ದರಿಂದ ಇವರೆಲ್ಲ ಇನ್ನಷ್ಟು ಅಪಾಯಕಾರಿಯಾಗಿ ಗೋಚರಿಸುವ ಎಲ್ಲ ಸಾಧ್ಯತೆ ಇದೆ. ಇಬ್ಬರು ಸಿಡಿದು ನಿಂತರೂ ಅಲ್ಲಿ ರನ್‌ ಪ್ರವಾಹವೇ ಹರಿದು ಬರಲಿದೆ. ಮಾಯಾಂಕ್‌ ಅಗರ್ವಾಲ್‌ ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿಯುವುದರಿಂದ ಪಂಜಾಬ್‌ ಬ್ಯಾಟಿಂಗ್‌ ಲೈನ್‌ಅಪ್‌ ಇನ್ನಷ್ಟು ಬಲಿಷ್ಠವಾಗಿ ಗೋಚರಿಸುತ್ತಿದೆ.

ಆರ್‌ಸಿಬಿ ವಿರುದ್ಧ ಪಂಜಾಬ್‌ ಬೌಲಿಂಗ್‌ ಕೂಡ ಭರ್ಜರಿ ಯಶಸ್ವಿಯಾಗಿತ್ತು. ಕಾಗಿಸೊ ರಬಾಡ, ರಿಷಿ ಧವನ್‌, ರಾಹುಲ್‌ ಚಹರ್‌, ಆರ್ಷದೀಪ್‌ ಸಿಂಗ್‌, ಹರ್‌ಪ್ರೀತ್‌ ಬ್ರಾರ್‌ ಎಲ್ಲರೂ ವಿಕೆಟ್‌ ಉಡಾಯಿಸಿದ್ದರು. ಡೆಲ್ಲಿಯನ್ನು ನಿಯಂತ್ರಿಸುವುದು ಇವರಿಗೆ ಸಾಧ್ಯವಾದರೆ ಪಂಜಾಬ್‌ ಮೇಲುಗೈಯನ್ನು ನಿರೀಕ್ಷಿಸಬಹುದು.

 

Advertisement

Udayavani is now on Telegram. Click here to join our channel and stay updated with the latest news.

Next