Advertisement
ಟ್ರೆಂಟ್ ಬೌಲ್ಟ್ ಅವರ ಘಾತಕ ಬೌಲಿಂಗ್, ಮೊದಲ ಎಸೆತದಲ್ಲೇ ಉರುಳಿದ ಸ್ಟೋಯಿನಿಸ್, 3 ವಿಕೆಟ್‌ಗಳ ಕ್ಷಿಪ್ರ ಪತನ, ಅಯ್ಯರ್-ಪಂತ್ ಜೋಡಿಯ ಹೋರಾಟ ಹಾಗೂ ಅರ್ಧ ಶತಕದ ಆಟ ಮೊದಲರ್ಧದ ಹೈಲೈಟ್ ಆಗಿತ್ತು. ಪಂತ್ 56 ರನ್ ಹೊಡೆದರೆ, ಭರ್ತಿ 50 ಎಸೆತ ನಿಭಾಯಿಸಿದ ಶ್ರೇಯಸ್ ಅಯ್ಯರ್ 65 ರನ್ ಬಾರಿಸಿ ಅಜೇಯರಾಗಿ ಉಳಿದರು. ಅವರ ಈ ಕಪ್ತಾನನ ಆಟದಲ್ಲಿ 6 ಬೌಂಡರಿ, 2 ಸಿಕ್ಸರ್ ಸೇರಿತ್ತು.
ಟ್ರೆಂಟ್ ಬೌಲ್ಟ್ ಪಂದ್ಯದ ಮೊದಲ ಎಸೆತದಲ್ಲೇ ಮಾರ್ಕಸ್ ಸ್ಟೋಯಿನಿಸ್ ವಿಕೆಟ್ ಕಿತ್ತು ಡೆಲ್ಲಿಗೆ ಶಾಕ್ ಕೊಟ್ಟರು. ಡೆಲ್ಲಿಗೆ ಅರ್ಧ ಬ್ಯಾಟಿಂಗ್ ಶಕ್ತಿ ಉಡುಗಿ ಹೋದ ಅನುಭವವಾಯಿತು. ಈ ಆಘಾತದೊಂದಿಗೆ ಡೆಲ್ಲಿ ಪ್ರಸಕ್ತ ಐಪಿಎಲ್‌ನ ಮೊದಲ ಓವರಿನಲ್ಲಿ ಸರ್ವಾಧಿಕ 10 ವಿಕೆಟ್ ಉದುರಿಸಿಕೊಂಡ ಸಂಕಟಕ್ಕೆ ಸಿಲುಕಿತು. ಇದರಲ್ಲಿ 5 ವಿಕೆಟ್ ಮುಂಬೈ ವಿರುದ್ಧವೇ ಉರುಳಿತ್ತು. ಈ ಪರಾಕ್ರಮದೊಂದಿಗೆ 2020ರ ಐಪಿಎಲ್‌ನ ಮೊದಲ ಓವರಿನಲ್ಲೇ ಟ್ರೆಂಟ್ ಬೌಲ್ಟ್ ಕಿತ್ತ ವಿಕೆಟ್‌ಗಳ ಸಂಖ್ಯೆ 8ಕ್ಕೆ ಏರಿತು. ಇದು ಐಪಿಎಲ್ ದಾಖಲೆಯಾಗಿದೆ. 2016ರಲ್ಲಿ ಭುವನೇಶ್ವರ್ ಕುಮಾರ್ 6 ವಿಕೆಟ್ ಉರುಳಿಸಿದ್ದು ಹಿಂದಿನ ದಾಖಲೆ. ಬೌಲ್ಟ್ 15 ಸಲ ಪಂದ್ಯದ ಮೊದಲ ಓವರ್ ಎಸೆದಿದ್ದರು.
Related Articles
Advertisement
4ನೇ ಓವರ್ ಮೂಲಕ ದಾಳಿಗಿಳಿದ ಜಯಂತ್ ಯಾದವ್ ಕೂಡ ಡೆಲ್ಲಿಗೆ ಕಂಟಕವಾಗಿ ಕಾಡಿದರು. ಶಿಖರ್ ಧವನ್ ಅವರ ಬಿಗ್ ವಿಕೆಟನ್ನು ಬುಟ್ಟಿಗೆ ಹಾಕಿಕೊಂಡರು. ಸ್ವೀಪ್ ಹೊಡೆತಕ್ಕೆ ಮುಂದಾದ ಧವನ್ (15) ಕ್ಲೀನ್‌ಬೌಲ್ಡ್ ಆಗಿ ನಿರ್ಗಮಿಸಿದರು. ಪವರ್ ಪ್ಲೇ ಅವಧಿಯಲ್ಲಿ ಡೆಲ್ಲಿ ಸ್ಕೋರ್ 3ಕ್ಕೆ 43 ರನ್ ಆಗಿತ್ತು. ಆಗಲೇ ಮುಂಬೈ ಫೀಲ್ಡರ್ 3 ಕ್ಯಾಚ್‌ಗಳನ್ನು ನೆಲಕ್ಕೆ ಚೆಲ್ಲಿಯಾಗಿತ್ತು.ಕುಸಿದ ಡೆಲ್ಲಿ ಸರದಿಗೆ ನಾಯಕ ಶ್ರೇಯಸ್ ಅಯ್ಯರ್ ಮತ್ತು ಕೀಪರ್ ರಿಷಭ್ ಪಂತ್ ಸೇರಿ ಆಸರೆ ಒದಗಿಸಿದರು. ನಿಧಾನವಾಗಿ ಸ್ಕೋರ್ ಗತಿ ಏರುತ್ತ ಹೋಯಿತು. 10 ಓವರ್ ಮುಕ್ತಾಯಕ್ಕೆ ಡೆಲ್ಲಿ 75 ರನ್ ಪೇರಿಸಿ ಹೋರಾಟದ ಸೂಚನೆ ನೀಡಿತು. ಅಯ್ಯರ್ ಜವಾಬ್ದಾರಿಯುತ ಆಟವಾಡಿದರೆ, ಪಂತ್ ನೈಜ ಸ್ಫೋಟಕ ರೂಪ ತೋರತೊಡಗಿದರು. ಸರಿಯಾದ ಹೊತ್ತಿನಲ್ಲಿ ಕ್ರೀಸ್ ಆಕ್ರಮಿಸಿಕೊಂಡ ಪಂತ್ 12ನೇ ಅರ್ಧ ಶತಕೊಂದಿಗೆ ಮೆರೆದರು. 38 ಎಸೆತಗಳಿಂದ 56 ರನ್ ಸಿಡಿಸಿದರು (4 ಬೌಂಡರಿ, 2 ಸಿಕ್ಸರ್). ಅಯ್ಯರ್ ಜತೆ 4ನೇ ವಿಕೆಟಿಗೆ 69 ಎಸೆತಗಳಿಂದ 96 ರನ್ ಒಟ್ಟುಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಕೋಲ್ಟರ್ ನೈಲ್ ಈ ಜತೆಯಾಟವನ್ನು ಬೇರ್ಪಡಿಸಿದರು. ಅನಂತರ ಬಂದ ಹೆಟ್‌ಮೈರ್ ಬರೀ 5 ರನ್ನಿಗೆ ಆಟ ಮುಗಿಸಿದರು. ಬೌಲ್ಟ್ ಬುಟ್ಟಿಗೆ 3ನೇ ವಿಕೆಟ್ ಬಿತ್ತು. ಅಕ್ಷರ್ ಪಟೇಲ್ 9 ರನ್ ಮಾಡಿ ವಾಪಸಾದರು. ಮುಂಬೈ ಪರ ಬೌಲ್ಟ್ 3, ಕೋಲ್ಟರ್ ನೈಲ್ 2 ವಿಕೆಟ್ ಕಿತ್ತರು. ಆದರೆ ಬುಮ್ರಾ ವಿಫಲರಾದರು. ಒಂದೇ ಬದಲಾವಣೆ
ಫೈನಲ್ ಪಂದ್ಯಕ್ಕಾಗಿ ಮುಂಬೈ ತಂಡದಲ್ಲಿ ಒಂದು ಬದಲಾವಣೆ ಕಂಡು ಬಂತು. ರಾಹುಲ್ ಚಹರ್ ಬದಲು ಜಯಂತ್ ಯಾದವ್ ಆಡಲಿಳಿದರು. ಆದರೆ ಡೆಲ್ಲಿ ತನ್ನ ತಂಡದಲ್ಲಿ ಯಾವುದೇ ಪರಿವರ್ತನೆ ಮಾಡಿಕೊಳ್ಳಲಿಲ್ಲ. ಹೈದರಾಬಾದ್ ವಿರುದ್ಧ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಜಯಿಸಿದ ತಂಡವನ್ನೇ ನೆಚ್ಚಿಕೊಂಡಿತು.