ಮಹಾನಗರ: ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಹವ್ಯಾಸಿ ಘಟಕದ ವತಿಯಿಂದ ಯಕ್ಷಗಾನ ತೆಂಕುತಿಟ್ಟು ಹವ್ಯಾಸಿ ಕಲಾವಿದರ ಸಮಾವೇಶ ಫೆ.18ರಂದು ಬೆಳಗ್ಗೆ 9.30ರಿಂದ ರಾತ್ರಿ 9ರ ತನಕ ಮಂಗಳೂರು ಪುರಭವನದಲ್ಲಿ ಜರಗಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಲ್ಲಾಲ್‌ಬಾಗ್ ಪತ್ತುಮುಡಿ ಸೌಧದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ಬಸ್ ಮಾಲಕರ ಫೆಡರೇಶನ್‌ನ ಉಪಾಧ್ಯಕ್ಷ ಎ.ಕೆ. ಜಯರಾಮ ಶೇಖ ಬಿಡುಗಡೆಗೊಳಿಸಿದರು.
ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಹುಟ್ಟಿಕೊಂಡ ಯಕ್ಷಧ್ರುವ ಪಟ್ಲ ಫೌಂಡೇಶನ್ ಇಂದು ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯ ಕೆಲಸ ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಹವ್ಯಾಸಿ ಘಟಕದಿಂದ ಯಕ್ಷಗಾನ ತೆಂಕುತಿಟ್ಟು ಹವ್ಯಾಸಿ ಕಲಾವಿದರ ಸಮಾವೇಶದಲ್ಲಿ ಹವ್ಯಾಸಿ ಯಕ್ಷಗಾನ ರಂಗ, ಸ್ವರೂಪ, ಸಮಸ್ಯೆ ಬಗ್ಗೆ ವಿಚಾರಗೋಷ್ಠಿ ನಡೆಯಲಿದೆ. ಪ್ರಶ್ನೋತ್ತರ, ಚರ್ಚೆಗೂ ಅವಕಾಶ ಕಲ್ಪಿಸಲಾಗಿದೆ. ಯಕ್ಷಗಾನ ಹಾಡುಗಾರಿಕೆ, ಯಕ್ಷಗಾನ ಪ್ರದರ್ಶನ ಹೀಗೆ ಇಡೀ ದಿನದ ಕಾರ್ಯಕ್ರಮದಲ್ಲಿ ಯಕ್ಷಗಾನದ ಬೇರೆ ಬೇರೆ ಪ್ರಕಾರಗಳು ನಡೆಯಲಿವೆ ಎಂದರು.
ಡಾ| ಎಂ. ಪ್ರಭಾಕರ ಜೋಶಿ, ಹವ್ಯಾಸಿ ಘಟಕದ ಸಂಚಾಲಕ ಭಾಸ್ಕರ ರೈ ಕುಕ್ಕುವಳ್ಳಿ, ಕೋಶಾಧಿಕಾರಿ ಪುಷ್ಪರಾಜ ಕುಕ್ಕಾಜೆ, ಕಾರ್ಯದರ್ಶಿ ಹರೀಶ್ ಬೊಳಂತಿಮೊಗರು ಹಾಗೂ ಯಕ್ಷಧ್ರುವ ಪಟ್ಲ ಫೌಂಡೇಶನ್ ಕೇಂದ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಕೋಶಾಧಿಕಾರಿ ಸುದೇಶ್ ಕುಮಾರ್ ರೈ, ಸಂಘಟನ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ, ಜಗನ್ನಾಥ್ ಶೆಟ್ಟಿ ಬಾಳ, ರವಿ ಶೆಟ್ಟಿ, ಅಶೋಕ ನಗರ, ಅಶ್ವಿತ್ ಶೆಟ್ಟಿ ಉಪಸ್ಥಿತರಿದ್ದರು.