Advertisement

ಜೈಲು ಅಧಿಕ್ಷಕರ ಹೇಳಿಕೆ ದಾಖಲಿಸಿದ ತನಿಖಾ ತಂಡ

11:15 AM Aug 15, 2017 | |

ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಕುರಿತು ನಿವೃತ್ತ ಐಎಎಸ್‌ ಅಧಿಕಾರಿ ವಿನಯ್‌ ಕುಮಾರ್‌ ನೇತೃತ್ವದ ತಂಡ ತನಿಖೆ ಚುರುಕುಗೊಳಿಸಿದ್ದು, ಜೈಲಿನ ಅಧೀಕ್ಷಕ ಕೃಷ್ಣಕುಮಾರ್‌ ಮತ್ತು ಉಪಾಧೀಕ್ಷಕಿ ಅನಿತಾ ಅವರಿಂದ ಹೇಳಿಕೆ ದಾಖಲಿಸಿಕೊಂಡಿದೆ.

Advertisement

ಜುಲೈ 13ರಂದು ಡಿಐಜಿ ರೂಪಾ ಜೈಲಿನ ಅಕ್ರಮಗಳ ಬಗ್ಗೆ ಸಾಕ್ಷ್ಯಾಗಳ ಸಮೇತ ಅಂದಿನ ಡಿಜಿ ಸತ್ಯನಾರಾಯಣರಾವ್‌ ಅವರಿಗೆ  ವರದಿ ಸಲ್ಲಿಸಿದ್ದರು. ಈ ವರದಿಯಲ್ಲಿ ಜೈಲಿನ ಅಧೀಕ್ಷಕ ಕೃಷ್ಣಕುಮಾರ್‌ ವಿರುದ್ಧ ಗಂಭೀರ ಆರೋಪ ಮಾಡಲಾಗಿತ್ತು. ಇದೇ ವೇಳೆ ಜೈಲಿನ ಕೆಲ ಕೈದಿಗಳು ಅನಿತಾ ವಿರುದ್ಧ ಲಂಚ ಪಡೆದ ಆರೋಪ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಪ್ರತ್ಯೇಕವಾಗಿ 3-4 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ ಬಹುಮಹಡಿಯ ಕಟ್ಟಡದಲ್ಲಿರುವ ವಿನಯ್‌ ಕುಮಾರ್‌ ಕಚೇರಿಗೆ ಕರೆಸಿಕೊಂಡ ತನಿಖಾಧಿಕಾರಿಗಳು, ಅನಿತಾ ಅವರನ್ನು ಸುಮಾರು 3ಗಂಟೆಗೂ ಅಧಿಕ ಕಾಲ ಪ್ರಶ್ನಾವಳಿಗಳನ್ನು ನೀಡಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಹಾಗೆಯೇ ಕೃಷ್ಣಕುಮಾರ್‌ ಅವರಿಂದಲೂ ಈಗಾಗಲೇ ಒಂದು ಬಾರಿ ಹೇಳಿಕೆ ದಾಖಲಿಸಿಕೊಂಡಿದ್ದು, ಮತ್ತೂಮ್ಮೆ ಕಚೇರಿಗೆ ಬರುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ ಕೃಷ್ಣಕುಮಾರ್‌ ಹೇಳಿಕೆಯಲ್ಲಿ “ರೂಪಾ ಅವರು ಮಾಡಿರುವ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ಇದರಲ್ಲಿ ತಮ್ಮ ಪಾತ್ರವೇನಿಲ್ಲ. ವಿನಾಃ ಕಾರಣ ತಮ್ಮ ವಿರುದ್ಧ ದೂರುತ್ತಿದ್ದಾರೆ,’ ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next