Advertisement

ತಪ್ಪಿತಸ್ಥರ ವಿರುದ್ಧ ಇಲಾಖೆ ತನಿಖೆ: ರಾಮಲಿಂಗಾರೆಡ್ಡಿ

03:16 PM May 31, 2017 | |

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ 5 ಕೋಟಿ ರೂ. ಅವ್ಯವಹಾರಕ್ಕೆ ಸಂಬಂಧಿಸಿ ತನಿಖೆ ನಡೆಸಿದ ವೇಳೆ ಮೇಲ್ನೋಟಕ್ಕೆ ಓರ್ವ ಅಧಿಕಾರಿ ಸೇರಿದಂತೆ ಐವರು ತಪ್ಪಿತಸ್ಥರು ಎಂಬುದು ಕಂಡುಬಂದಿದೆ. ಅವರ ವಿರುದ್ಧ ಇಲಾಖಾವಾರು ಆಂತರಿಕ ತನಿಖೆ ಕೈಗೊಳ್ಳಬೇಕೆಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಶಿಫಾರಸು ಪತ್ರ ಸಲ್ಲಿಕೆಯಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. 

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ವಾಕರಸಾ ಸಂಸ್ಥೆಯ ಪ್ರಾದೇಶಿಕ ಕಾರ್ಯಾಗಾರದಲ್ಲಿ 2014-15ನೇ ಸಾಲಿನಲ್ಲಿ ಟೂಲ್ಸ್‌ 20 ಲಕ್ಷ ರೂ., ಸಾಂಪ್‌ 3.04 ಕೋಟಿ ರೂ., ಸ್ಥಳೀಯವಾಗಿ ಉಪಕರಣ ಖರೀದಿ 1.25 ಕೋಟಿ ರೂ., ಹೊರ ಗುತ್ತಿಗೆ ಮೂಲಕ ಬಸ್‌ ಕವಚ ನಿರ್ಮಾಣದಲ್ಲಿ 59 ಲಕ್ಷ ರೂ. ಸೇರಿ ಒಟ್ಟು 5.10 ಕೋಟಿ ರೂ. ಅವ್ಯವಹಾರ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ಇಲಾಖಾವಾರು ತನಿಖೆ ನಡೆದಿದೆ. 

ಬೆಂಗಳೂರಿಗೆ ತೆರಳಿದ ನಂತರ ತನಿಖೆ ಯಾವ ಹಂತ ತಲುಪಿದೆ ಎಂಬುದನ್ನು ವಿಚಾರಿಸಲಾಗುವುದು ಎಂದರು. ಸಂಸ್ಥೆಯಲ್ಲಿ ಸಿಬ್ಬಂದಿ ರಜೆ ಹಿನ್ನೆಲೆಯಲ್ಲಿ ತಂತ್ರಾಂಶ ಆಧಾರಿತ ರಜೆ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ 20 ಘಟಕಗಳಲ್ಲಿ ಜಾರಿಗೊಳಿಸಲಾಗಿದೆ. ಇದರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇನ್ನುಳಿದ ಘಟಕಗಳಿಗೂ ಇದನ್ನು ವಿಸ್ತರಿಸುವ ಸಿದ್ಧತೆ ನಡೆದಿದೆ. ಈ ವ್ಯವಸ್ಥೆಯನ್ನು ಶೀಘ್ರದಲ್ಲೆ ಎಲ್ಲ ಘಟಕಗಳಲ್ಲೂ ಜಾರಿಗೊಳಿಸಲಾಗುವುದು.

ಸೇವಾ ಸ್ಪಂದನವನ್ನು ಕೆಳ ಹಂತದಿಂದ ಆರಂಭಿಸುವ ನಿಟ್ಟಿನಲ್ಲಿ ಬಸ್‌ ನಿಲ್ದಾಣಗಳಿಂದಲೇ ಅದನ್ನು ಶೀಘ್ರ ಜಾರಿಗೊಳಿಸಲಾಗುವುದು. ಅಂತರ ವಿಭಾಗ ವರ್ಗಾವಣೆಗೆ ಆದೇಶಿಸಲಾಗಿದೆ. ಡಿಪಿಆರ್‌ ಆದ ಮೇಲೆ ವರ್ಗಾವಣೆ ಪ್ರಕ್ರಿಯೆ ಸರಳವಾಗಲಿದೆ. ವಾಕರಸಾ ಸಂಸ್ಥೆಯಲ್ಲಿ ಮುಂದಿನ ದಿನಗಳಲ್ಲಿ 1200 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಅಧಿಕಾರಿಗಳು ಸಿಬ್ಬಂದಿಗಳಿಗೆ ಅನವಶ್ಯಕವಾಗಿ ಕಿರುಕುಳ ನೀಡುವುದು ಕಂಡುಬಂದರೆ, ದೂರು ದಾಖಲಾದರೆ ಕೂಡಲೇ ಅಂಥವರ ಮೇಲೆ ಕ್ರಮಕೈಗೊಳ್ಳುವಂತೆ ಸಂಸ್ಥೆಯ ವ್ಯವಸ್ಥಾಪಕರಿಗೆ ಸೂಚಿಸಲಾಗಿದೆ ಎಂದರು. 

ನವೆಂಬರ್‌ನಲ್ಲಿ ಸಿಬಿಟಿ ಉದ್ಘಾಟನೆ: ನಗರದಲ್ಲಿ ನಿರ್ಮಾಣವಾಗುತ್ತಿರುವ ನೂತನ ಸಿಬಿಟಿ ಸಂಕೀರ್ಣದ ಮೊದಲ ಹಂತದ ಉದ್ಘಾಟನೆ ನವೆಂಬರ್‌ 1ರಂದು ನಡೆಯಲಿದೆ. ಆಗ ಅಲ್ಲಿಂದಲೇ ಸಾರ್ವಜನಿಕ ಪ್ರಯಾಣಿಕರಿಗೆ ನಗರ ಸಾರಿಗೆ ಬಸ್‌ಗಳ ಸೇವೆಯು ಆರಂಭಗೊಳ್ಳಲಿದೆ. ನಂತರದ ದಿನಗಳಲ್ಲಿ ಬಿಆರ್‌ಟಿಎಸ್‌ ಸೇರಿದಂತೆ ಇನ್ನಿತರೆ ವಾಣಿಜ್ಯ ಸಂಕೀರ್ಣವು ಕಾರ್ಯಾರಂಭಗೊಳ್ಳಲಿದೆ ಎಂದರು. 

Advertisement

ವಾಕರಸಾ ಸಂಸ್ಥೆ ಮೊದಲು ಸಿಬಿಟಿಯನ್ನು 3 ಕೋಟಿ ರೂ. ವೆಚ್ಚದಲ್ಲಿ 3 ಅಂತಸ್ತನಲ್ಲಿ ನಿರ್ಮಾಣ ಮಾಡಲು ಯೋಜಿಸಿತ್ತು. ತದನಂತರ ಬಿಆರ್‌ಟಿಎಸ್‌ ಯೋಜನೆ ಬಂದ ಮೇಲೆ ಮತ್ತೆ 2 ಅಂತಸ್ತುಗಳನ್ನು ಹೆಚ್ಚಿಸಲಾಯಿತು. ಹೀಗಾಗಿ ನಿರ್ಮಾಣ ಹಂತದ ಕಟ್ಟಡದ ಎತ್ತರವು ಹೆಚ್ಚಾಗಿದ್ದರಿಂದ ವಿಮಾನ ನಿಲ್ದಾಣ ಪ್ರಾಧಿಕಾರ, ಅಗ್ನಿಶಾಮಕದಳ, ಪಾಲಿಕೆ ಸೇರಿದಂತೆ ಐದು ಇಲಾಖೆಗಳ ಪರವಾನಗಿ ಪಡೆಯಬೇಕಾಗಿದ್ದರಿಂದ ಸಿಬಿಟಿಯ ವಾಣಿಜ್ಯ ಸಂಕೀರ್ಣ ಕಟ್ಟಡದ ನಿರ್ಮಾಣ ಕಾಮಗಾರಿ ವಿಳಂಬವಾಗಿದೆ.

ಈಗ ಅಂದಾಜು 14 ಕೋಟಿ ರೂ. ವೆಚ್ಚದಲ್ಲಿ ಈ ಕಟ್ಟಡವು ನಿರ್ಮಾಣವಾಗುತ್ತಿದೆ ಎಂದರು. ಹಳೆಯ ಬಸ್‌ ನಿಲ್ದಾಣವನ್ನು ಹೊಸ ಬಸ್‌ ನಿಲ್ದಾಣಕ್ಕೆ ಸ್ಥಳಾಂತರವಾಗದಿರುವುದಕ್ಕೆ ಯಾವುದೇ ಲಾಬಿ ಇಲ್ಲ. ಸಂಸ್ಥೆಗೆ ನಗರದ ಉತ್ತಮ ಭಾಗದಲ್ಲಿ ಸ್ಥಳ ದೊರೆತಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುವುದು. ಮುಖ್ಯದ್ವಾರದಲ್ಲಿ ಸಿಮೆಂಟ್‌ ಕಾಂಕ್ರೀಟ್‌ ರಸ್ತೆ ನಿರ್ಮಿಸಲಾಗುವುದು.

ಶೀಘ್ರ ಹೊಸ ಬಸ್‌ ನಿಲ್ದಾಣದಿಂದ ದೂರ ಪ್ರದೇಶಗಳಿಗೆ ತೆರಳುವ ಬಸ್‌ಗಳನ್ನು ಅಲ್ಲಿಂದಲೇ ಕಾರ್ಯಾರಂಭ ಮಾಡಲಾಗುವುದು ಎಂದರು. ಸಚಿವರಿಗೆ ಮಾಧ್ಯಮದವರು ವಾಕರಸಾ ಸಂಸ್ಥೆಗೆ ಸಂಬಂಧಿಸಿ ಕೇಳಿದ ಬಹುತೇಕ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲಿಲ್ಲ. ಅಲ್ಲದೆ ಆ ಕುರಿತು ಮಾಹಿತಿ ಪಡೆದುಕೊಳ್ಳಲಾಗುವುದು ಎಂದು ನುಣುಚಿಕೊಂಡರು. ಇದಕ್ಕೂ ಮುನ್ನ ಸಚಿವರು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ವಾಕರಸಾ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ, ವ್ಯವಸ್ಥಾಪಕ ನಿರ್ದೇಶಕ ಪಾಂಡುರಂಗ ನಾಯ್ಕ ಸೇರಿದಂತೆ ಇನ್ನಿತರೆ ವಿಭಾಗಗಳ ಅಧಿಕಾರಿಗಳು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next