ಕೋಲಾರ: ದಲಿತ ಆದಿವಾಸಿಗಳ ಸಂಸ್ಕೃತಿಗಳಲ್ಲಿರುವ ವಿಚಾರಗಳು ಮತ್ತು ಒಳನೋಟಗಳನ್ನು ಪಾಶ್ಚಿಮಾತ್ಯ ಯುರೋಪ್ ದೇಶಗಳಿಗೊ ಪರಿಚಯಿಸಲಾಗುತ್ತಿದೆ ಎಂದು ಫ್ರಾನ್ಸಿನ ಫಾಲ್ ವ್ಯಾಲರಿ ವಿವಿ ಆಂಗ್ಲ ಪ್ರಾಧ್ಯಾಪಕಿ ಡಾ.ಜುಡಿತ್ ಮಿಸ್ರಾಹಿ- ಬರಾಕ್ ಹೇಳಿದರು.
ಆದಿಮ ಸಾಂಸ್ಕೃತಿಕ ಕೇಂದ್ರ, ಆರ್ಟ್ಸ್ ಅಂಡ್ ಹ್ಯೂಮಾನಿಟಿಸ್ ರಿಸರ್ಚ್ ಸೆಂಟರ್ ನಾಟಿಂಗ್ ಹ್ಯಾಂ ಟ್ರೆಂಟ್ ಯೂನಿವರ್ಸಿಟಿ ಯುಕೆ, ಫಾಲ್ ವ್ಯಾಲರಿ ವಿಶ್ವವಿದ್ಯಾಲಯ, ಫ್ರಾನ್ಸ್ ಸಹಭಾಗಿತ್ವದಲ್ಲಿ ಆದಿಮ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ದಲಿತ ಆದಿವಾಸಿ ಸಾಹಿತ್ಯ ಮತ್ತು ಪ್ರದರ್ಶನ ಕಲೆ ಉತ್ಸವ ಒಂದು ದಿನದ ಅಂತಾರಾಷ್ಟ್ರೀಯ ಕಾರ್ಯಾಗಾರವನ್ನು ಚರ್ಮವಾದ್ಯ ನುಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪ್ರಪಂಚದ ಪರಿವರ್ತನೆಗೆ ಕಾರಣವಾಗಿರುವ ದಲಿತ ಆದಿವಾಸಿಗಳ ವಿವಿಧ ಸಂಸ್ಕೃತಿ, ಸಾಂಸ್ಕೃತಿಕ ಕಲಾ ಪ್ರಕಾರಗಳನ್ನು ನಮ್ಮ ವೆಬ್ ಸೆ„ಟ್ ನಲ್ಲಿ ದಾಖ ಲಿಸುವ ಮೂಲಕ ವಿಶ್ವ ಸಾಂಸ್ಕೃತಿಕ ಲೋಕಕ್ಕೆ ಪರಿಚಯಿಸಲಾಗುತ್ತಿದೆ. ಆದ್ದರಿಂದ ಪ್ರಪಂಚದ ಯಾವುದೇ ಭಾಷೆಯ ಸಾಹಿತ್ಯ ಸಂಶೋಧನೆಗೆ ಅನುಕೂಲವಾಗುವ ದೃಷ್ಟಿಯಿಂದ ಅನುವಾದ ಆಗಲೇಬೇಕಿದೆ. ಈ ಕಾರ್ಯಕ್ರಮಕ್ಕೆ ಆದಿಮ ಕೇಂದ್ರ ಹೇಳಿಮಾಡಿಸಿ ದಂತಿದೆಯೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಮಾತನಾಡಿ, 7 ವರ್ಷಗಳಿಂದ ಭಾರತ, ಇಂಗ್ಲೆಂಡ್ ಮತ್ತು ಫ್ರಾನ್ಸ್ ಈ ಮೂರು ದೇಶಗಳಲ್ಲಿ ದಲಿತ ಆದಿವಾಸಿಗಳಿಗೆ ಸಂಬಂಧ ಪಟ್ಟ ಕಲೆ, ಸಾಹಿತ್ಯವನ್ನು ವಿನಿಮಯ ಮಾಡಿಕೊಂಡು “ಇಲ್ಲಿನವರನ್ನು ಅಲ್ಲಿಗೆ, ಅಲ್ಲಿನವರನ್ನು ಇಲ್ಲಿಗೆ’ ಕರೆಸಿಕೊಳ್ಳಲಾಗುತ್ತಿದೆ. ಭಾರತದಲ್ಲಿನ ದೆಹಲಿಯಿಂದ ತೆಮಿಳುನಾಡು ಕನ್ಯಾಕುಮಾರಿವರೆಗೂ ದಲಿತ ಆದಿವಾಸಿಗಳ ಸಾಹಿತ್ಯ, ಪ್ರದರ್ಶನ ಕಲಾ ಪ್ರಕಾರಗಳನ್ನು ಅಂತಾರಾಷ್ಟ್ರೀಯ ವೆಬ್‌ಸೈಟ್‌ನಲ್ಲಿ ಪ್ರಚಾರ ಮಾಡಲು ಈ ಕಾರ್ಯಾಗಾರ ಸಹಕಾರಿ ಎಂದರು.
ಹೋರಾಟಗಾರ್ತಿ, ಕಲಾವಿದೆ ದು.ಸರಸ್ವತಿ ಅವರು ಕಾರ್ಯಾಗಾರದ ಮುಖ್ಯ ಉದ್ದೇಶ ಹಾಗೂ ಗುರಿಯ ಬಗ್ಗೆ ಬಹಳ ಸಂಕ್ಷಿಪ್ತವಾಗಿ ಹೇಳುತ್ತಾ ಕಾರ್ಯಾಗಾರಕ್ಕೆ ಉತ್ಸಾಹದ ಚಾಲನೆ ನೀಡಿದರು. ಕವಿಗೋಷ್ಠಿಯಲ್ಲಿ ಆರು ಮಂದಿ ಕವಿಗಳು ತಲಾ ಎರಡು ಮೂರು ಕವಿತೆಗಳನ್ನು ಮೂಲ ಭಾಷೆಯಲ್ಲಿ ವಾಚನ ಮಾಡಿದರು. ಇಂಗ್ಲಿಷ್ ಗೆ ಅನುವಾದಿಸಿದ ಕವನಗಳನ್ನು ಡಾ. ಜುಡಿತ್ ಮತ್ತು ವಂಶಿ, ಬೆಂಗಳೂರು ವಾಚಿಸಿದರು.
ಆದಿಮ ಕಾರ್ಯದರ್ಶಿ ಕೊಮ್ಮಣ್ಣ ಮಾತನಾಡಿದರು. ಆದಿಮ ಕಲಾವಿದೆಯರಾದ ಅಂಜುಲ ಹಾಗೂ ಚಂದ್ರಮ್ಮ, ಹರೀಶ್ ಕುಮಾರ್, ಆದಿಮ, ನಾಯಕ್ ಅಮಾಸ ಆದಿವಾಸಿ ಕಲೆಯನ್ನು ಪ್ರದರ್ಶಿಸಿದರು. ಅಂತಿಮವಾಗಿ ಪ್ರದರ್ಶನಗೊಂಡ ನಾಟಕ “ಸೂತ ಶಬರ’ ಪ್ರದರ್ಶನ ಕುರಿತು, ಕಲಾವಿದರ ಕುರಿತು ದು. ಸರಸ್ವತಿ ಪರಿಚಯಿಸಿದರು. ಗೇಬ್ರಿಯಲ್ ಮ್ಯಾಕ್ ಕ್ಯಾಮ್ಲೆ- ಲಾಂಜರ್ ಇಡೀ ಕಾರ್ಯಕ್ರಮವನ್ನು ದಾಖ ಲೀಕರಣ ಮಾಡಿದರು. ಚಲಪತಿ, ಕರ್ನಾಟಕ ರಾಜ್ಯ ಮಹಿಳಾ ವಿವಿ ನಿವೃತ್ತ ರಿಜಿಸ್ಟ್ರಾರ್ ಆರ್. ಸುನಂದಮ್ಮ, ನವೋದಯ ಶಾಲಾ ಶಿಕ್ಷಕ ಗಣೇಶ್, ಡಾ.ಶಿವಪ್ಪ ಅರಿವು, ಪ್ರಾಧ್ಯಾಪಕ ಗುಂಡಪ್ಪ ದೇವಿಕೇರಿ, ಪ್ರಾಧ್ಯಾಪಕ ಮುರಳಿ, ಆದಿಮ ನೀಲಕಂಠೇಗೌಡರು, ಆದಿಮ ಎನ್.ಗೋವಿಂದಪ್ಪ, ಜನಾರ್ಧನ್ ಮತ್ತು ಜಗದೀಶ್ ನಾಯಕ್ ಕೆಜಿಎಫ್ ಸಮುದಾಯ ತಂಡ. ಕಡತೂರ್ ಮಂಜು, ಟೀಚರ್ ಡಿ,ನಾರಾಯಣಸ್ವಾಮಿ. ಗಾಯಕ ಚಂದ್ರಶೇಖರ್ ಇದ್ದರು.