ಮಂಗಳೂರು: ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಪ್ರಾಡಕ್ಟ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮಂಗಳೂರಿನ ನಿಶಾನ್ ಶಶಿಧರ ಅವರು 10 ಗಂಟೆಗಳಲ್ಲಿ 101 ವೈದ್ಯರೊಡನೆ 100 ರೋಗಗಳ ಕುರಿತು ಫೇಸ್‌ಬುಕ್ ವಿಡಿಯೋ ಲೈವ್‌ನಲ್ಲಿ ಸಂದರ್ಶನ ಮಾಡುವ ಮೂಲಕ ಏಷ್ಯಾ ಬುಕ್ ಆಫ್ ರೆಕಾರ್ಡ್ ಹಾಗೂ ಇಂಡಿಯಾ ಬುಕ್ ಆಫ್
ರೆಕಾರ್ಡ್ಸ್‌ನಲ್ಲಿ ಸ್ಥಾನ ಗಳಿಸಿದ್ದಾರೆ.
ಶನಿವಾರ ನಗರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು, ವಿವಿಧ ರೋಗಗಳ ಲಕ್ಷಣಗಳು ಯಾವ ರೀತಿ ಕಾಣಿಸಿಕೊಳ್ಳುತ್ತವೆ, ರೋಗ ಬಂದಾಗ ವೈದ್ಯರನ್ನು ಭೇಟಿಯಾಗಿ ಹೇಗೆ ಚಿಕಿತ್ಸೆ ಪಡೆಯಬಹುದು ಎಂದು ವಿಶ್ವದ ಆರೋಗ್ಯ ಕಾಳಜಿಯ ಕುರಿತು ನಾನು ಜುಲೈ 20ರಂದು ಇಂತಹ ಸಂದರ್ಶನ ನಡೆಸಿದ್ದೆ ಎಂದರು.
ಮಣಿಪಾಲ್ ಆಸ್ಪತ್ರೆಯವರು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಹೃದಯಾಘಾತ, ಅಧಿಕ ರಕ್ತದೊತ್ತಡ, ಲಿವರ್ ಬದಲಾವಣೆ, ಮಧುಮೇಹ, ಮಂಡಿ ನೋವು ಮೊದಲಾದ ರೋಗಗಳ ಕುರಿತು ತಜ್ಞ ವೈದ್ಯರಲ್ಲಿ ಚರ್ಚಿಸಲಾಗಿತ್ತು. ಬೆಂಗಳೂರು ಮಣಿಪಾಲ್ ಆಸ್ಪತ್ರೆಯ ಫೇಸ್‌ಬುಕ್ ಪೇಜ್‌ನಲ್ಲಿ ಸಂದರ್ಶನದ ವೀಡಿಯೋಗಳು ಲಭ್ಯವಿದ್ದು, ಆಸಕ್ತರು ವೀಕ್ಷಿಸಬಹುದು ಎಂದರು.
ನಿಶಾನ್ ಅವರು ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ, ಮಾರ್ಕೆಟಿಂಗ್‌ನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ನಿಶಾನ್ ಅವರ ಸಹೋದರ ಡಾ| ನಿತಿನ್ ಉಪಸ್ಥಿತರಿದ್ದರು.