Advertisement

ಉಡುಪಿಯಲ್ಲಿದೆ ಅಂತಾರಾಷ್ಟ್ರೀಯ ವಲಸೆ ಮಾಹಿತಿ ಕೇಂದ್ರ

10:15 AM Feb 15, 2023 | Team Udayavani |

ಉಡುಪಿ: ವಿದೇಶದಲ್ಲಿ ಉದ್ಯೋಗ ಮಾಡಲು ಆಸಕ್ತಿ ಇರುವವರಿಗೆ ಸರಕಾರವೇ ಅಗತ್ಯ ಸಹಾಯ ಮಾಡಲಿದೆ. ವಿದೇಶಕ್ಕೆ ತೆರಳಲು ಇರಬೇಕಾದ ಅರ್ಹತೆ, ಅಲ್ಲಿ ಎದುರಿಸಬೇಕಾದ ಕಾನೂನು ಪ್ರಕ್ರಿಯೆ, ಸಮಸ್ಯೆಯಾದಲ್ಲಿ ಯಾರನ್ನು ಸಂಪರ್ಕಿಸಬೇಕು,
ಸುರಕ್ಷಿತವಾಗಿ ವಿದೇಶಕ್ಕೆ ತೆರಳಿ, ಸುಗಮವಾಗಿ ಸ್ವದೇಶಕ್ಕೆ ಮರಳು ಅನುಸರಿಸಬೇಕಾದ ವಿಧಾನ? ಈ ರೀತಿಯ ಹತ್ತಾರು ಸಂದೇಹಗಳಿಗೆ ಉಡುಪಿ ಜಿಲ್ಲೆಯಲ್ಲಿ ಆರಂಭವಾಗಿರುವ ಅಂತಾರಾಷ್ಟ್ರೀಯ ವಲಸೆ ಮಾಹಿತಿ ಕೇಂದ್ರದಲ್ಲಿ ಉಚಿತವಾಗಿ ಪರಿಹಾರ ಪಡೆಯಬಹುದು.

Advertisement

ವಿದೇಶಕ್ಕೆ ತೆರಳುವ ರಾಜ್ಯದ ಕಾರ್ಮಿಕರಿಗೆ ರಾಜ್ಯ ಸರಕಾರ, ಕಾರ್ಮಿಕ ಇಲಾಖೆಯ ಅಸಂಘಟಿತ ಕಾರ್ಮಿಕ ಮಂಡಳಿಯ ಮೂಲಕ ಆರಂಭಿಸಿರುವ 4 ಪ್ರಾಯೋಗಿಕ ಅಂತಾರಾಷ್ಟ್ರೀಯ ವಲಸೆ ಕೇಂದ್ರಗಳಲ್ಲಿ ಒಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಕಾರ್ಮಿಕ ಇಲಾಖೆಯಲ್ಲಿದೆ. ಈ ಕೇಂದ್ರಗಳ ಮೂಲಕ ವಿದೇಶಕ್ಕೆ ತೆರಳಿದ್ದಲ್ಲಿ, ವಿದೇಶದಲ್ಲಿ ಯಾವುದೇ ತುರ್ತು ಸಂದರ್ಭದಲ್ಲಿ ಸರಕಾರದ ವತಿಯಿಂದ ಅಗತ್ಯ ನೆರವು ದೊರೆಯಲಿದ್ದು, ವಿದೇಶದಲ್ಲಿದ್ದರೂ ಸಹ ಎಲ್ಲ ಸಂದರ್ಭದಲ್ಲಿ ಸುರಕ್ಷಿತವಾಗಿ ಇರಲು ಸಾಧ್ಯವಾಗಲಿದೆ.

ಅಲ್ಲದೆ ಉದ್ಯೋಗ ನೀಡಿದ ಸಂಸ್ಥೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಆ ದೇಶದಲ್ಲಿನ ಭಾರತೀಯ ರಾಯಭಾರ ಕಚೇರಿಯಿಂದ ಅಗತ್ಯ ನೆರವು ಒದಗಿಸುವುದರ ಜತೆಗೆ ವಿಮೆ ಪಡೆಯಲು ಮತ್ತು ಕಲ್ಯಾಣ ನಿಧಿಯ ಮೊತ್ತ ದೊರೆಯಲು ಈ ಮಾಹಿತಿ ಕೇಂದ್ರ ಸಹಕರಿಸಲಿದೆ. ಈ ಕೇಂದ್ರದ ಮೂಲಕ ಉದ್ಯೋಗಕ್ಕೆ ತೆರಳಲು ಇಚ್ಚಿಸಿದ್ದಲ್ಲಿ ಈಗಾಗಲೇ ಇ-ಮೈಗ್ರೇಟ್‌ ಪೋರ್ಟಲ್‌ನಲ್ಲಿ ಉದ್ಯೋಗದ ಬೇಡಿಕೆ ಕೋರಿರುವ, ನೋಂದಣಿ ಮಾಡಿರುವ ವಿದೇಶಿ ಸಂಸ್ಥೆಗಳ ನೈಜತೆ ಪರಿಶೀಲಿಸಿ, ಉದ್ಯೋಗದಾತ ಸಂಸ್ಥೆಯಲ್ಲಿ ಯಾವುದೇ ಸಂದರ್ಭ ಕಾರ್ಮಿಕರಿಗೆ ಅನಗತ್ಯ ತೊಂದರೆಗಳು ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಿದೆ.

ಮಹಿಳೆಯರಿಗೂ ಅವಕಾಶ

ವಿದೇಶದಲ್ಲಿ ಉದ್ಯೋಗಕ್ಕೆ ತೆರಳುವ ಮಹಿಳೆಯರ ಬಗ್ಗೆ ಕೇಂದ್ರವು ಹೆಚ್ಚಿನ ಕಾಳಜಿ ವಹಿಸಲಿದೆ. ವಿದೇಶದಿಂದ ವಾಪಸಾದ ಬಳಿಕ ಕಾರ್ಮಿಕರ ಕೌಶಲ ಸಂಗ್ರಹ ಮತ್ತು ಮರು ವಲಸೆಗೆ ಸಹಾಯ ಮಾಡುವುದರ ಜತೆಗೆ ಪುರ್ನವಸತಿ ಬಗ್ಗೆ ಮಾಹಿತಿ ನೀಡಲಿದ್ದು, ಕುಂದು ಕೊರತೆಗಳನ್ನು ನಿವಾರಿಸಲಿದೆ.

Advertisement

ಸಮಗ್ರ ತರಬೇತಿ

ವಿದೇಶಕ್ಕೆ ತೆರಳುವ ಮೊದಲು 8 ಗಂಟೆಗಳ ಸಮಗ್ರ ತರಬೇತಿಯನ್ನು ಅಭ್ಯರ್ಥಿಗಳಿಗೆ ನೀಡಲಿದ್ದು, ವಿದೇಶ ಪ್ರಯಾಣದ ಅವಧಿಯಲ್ಲಿ ಮತ್ತು ಅನಂತರ ವಹಿಸಬೇಕಾದ ಮುನ್ನೆಚ್ಚರಿಕೆ ವಿಧಾನ, ಸಿದ್ಧತೆ, ವಿಮಾನ ನಿಲ್ದಾಣದಲ್ಲಿ ವ್ಯವಹರಿಸುವ ರೀತಿಯ ಬಗ್ಗೆಯೂ ತರಬೇತಿ ನೀಡಲಾಗುತ್ತದೆ.

ವಿದೇಶದಲ್ಲಿ ಉದ್ಯೋಗದ ಕುರಿತು ಉದ್ಯೋಗಾಕಾಂಕ್ಷಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ 130ಕ್ಕೂ ಹೆಚ್ಚು ಮಂದಿನೋಂದಣಿ ಮಾಡಿಕೊಂಡಿದ್ದಾರೆ.
– ಕುಮಾರ್‌ ಬಿ. ಆರ್‌, ಜಿಲ್ಲಾ ಕಾರ್ಮಿಕ ಅಧಿಕಾರಿ, ಉಡುಪಿ ಉಪ ವಿಭಾಗ

ಕೇಂದ್ರ ಎಲ್ಲೆಲ್ಲಿದೆ?
ಪ್ರಸ್ತುತ ರಾಜ್ಯದಲ್ಲಿ ಪ್ರಾಯೋಗಿಕವಾಗಿ ಉಡುಪಿ, ದಾವಣಗೆರೆ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಈ ಕೇಂದ್ರಗಳನ್ನು ತೆರೆಯಲಾಗಿದೆ. ಉಡುಪಿ ಕೇಂದ್ರದ ವ್ಯಾಪ್ತಿಗೆ ಉಡುಪಿ, ದ.ಕ., ಶಿವಮೊಗ್ಗ ಮತ್ತು ಚಿಕ್ಕಮಗಳೂರು ಸೇರಲಿದೆ. ಉಡುಪಿ ಮತ್ತು ದ.ಕ. ಜಿಲ್ಲೆಗಳಿಂದ 40,000 ಕ್ಕೂ ಅಧಿಕ ಮಂದಿ ಮಧ್ಯಪ್ರಾಚ್ಯ ದೇಶದಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.

ಮಾಹಿತಿಗೆ ದೂ : 0820-2574851 ಅಥವಾ ಕಾರ್ಮಿಕ ಸಹಾಯವಾಣಿ 155214 ಸಂಪರ್ಕಿಸಬಹು.

Advertisement

Udayavani is now on Telegram. Click here to join our channel and stay updated with the latest news.

Next