Advertisement

ಫೆ.7ರಿಂದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

06:25 AM Dec 29, 2018 | Team Udayavani |

ಬೆಂಗಳೂರು: ಹನ್ನೊಂದನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು 2019ರ ಫೆಬ್ರವರಿ 7ರಿಂದ 14ರವರೆಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಅವರು, ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಚಲನಚಿತ್ರೋತ್ಸವದ ವೆಚ್ಚವನ್ನು ಕಡಿತಗೊಳಿಸಲಾಗಿದೆ. ಅದ್ದೂರಿತನಕ್ಕೆ ಆದ್ಯತೆ ನೀಡದೇ ಗುಣಮಟ್ಟದ ಚಿತ್ರಗಳ ಪ್ರದರ್ಶನಕ್ಕೆ ಒತ್ತು ನೀಡಲಾಗುವುದು ಎಂದು ಹೇಳಿದರು.

ಈ ಚಿತ್ರೋತ್ಸವದಲ್ಲಿ ಜಗತ್ತಿನ ಸುಮಾರು 50 ದೇಶಗಳ 200 ಚಲನಚಿತ್ರಗಳು ಬೆಂಗಳೂರು ಓರಾಯನ್‌ ಮಾಲ್‌ನಲ್ಲಿರುವ 11 ಪರದೆಗಳಲ್ಲಿ ಪ್ರದರ್ಶನಗೊಳ್ಳಲಿವೆ. ಚಿತ್ರೋತ್ಸವದೊಂದಿಗೆ ಚಲನಚಿತ್ರ ರಂಗದ ದೇಶ ವಿದೇಶಗಳ ನಿರ್ದೇಶಕರು, ತಂತ್ರಜ್ಞರೊಂದಿಗೆ ಸಂವಾದ, ವಿಚಾರ ಸಂಕಿರಣ, ಕಾರ್ಯಾಗಾರ ಏರ್ಪಡಿಸಲಾಗುವುದು.

ಚಿತ್ರೋತ್ಸವದಲ್ಲಿ ವಿಶ್ವದ ಸುಮಾರು 7 ಸಾವಿರ ಪ್ರತಿನಿಧಿಗಳು ಪಾಲ್ಗೊಳ್ಳುವ ಸಾಧ್ಯತೆ ಇದೆ. ಮೂರು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಕನ್ನಡ ಸಿನಿಮಾ, ಭಾರತೀಯ ಸಿನಿಮಾ ಹಾಗೂ ಏಷ್ಯಾ ಸಿನಿಮಾ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದು ಹೇಳಿದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್‌ ಮಾತನಾಡಿ, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ವಿಶ್ವ ಮಟ್ಟದಲ್ಲಿ ಗುರುತಿಸುಕೊಂಡಿದೆ. ಅದಕ್ಕಾಗಿಯೇ ಪ್ರತಿ ವರ್ಷ ಫೆಬ್ರವರಿ ಮೊದಲನೇ ಗುರುವಾರವನ್ನು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಆರಂಭದ ದಿನವನ್ನಾಗಿ ನಿಗದಿ ಮಾಡಲು ತೀರ್ಮಾನಿಸಲಾಗಿದೆ.

Advertisement

ಈ ಮೂಲಕ ಅಂತಾರಾಷ್ಟ್ರೀಯ ಮಾನ್ಯತೆ ದೊರೆಯುತ್ತದೆ ಎಂದು ಹೇಳಿದರು.ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಆರ್ಟಿಸ್ಟಿಕ್‌ ಡೈರೆಕ್ಟರ್‌ ವಿದ್ಯಾಶಂಕರ್‌ ಜೊಯಿಸ್‌, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ, ವಾರ್ತಾ ಇಲಾಖೆ ಕಾರ್ಯದರ್ಶಿ ಪಂಕಜ್‌ಕುಮಾರ್‌ ಪಾಂಡೆ ಉಪಸ್ಥಿತರಿದ್ದರು.

ಬಾಲಿವುಡ್‌ ನಟಿಯರ ಆಗಮನ ಅನುಮಾನ: ಈ ವರ್ಷ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಹೆಚ್ಚಿನ ಪ್ರಚಾರಕ್ಕೆ ಬಾಲಿವುಡ್‌ ಸ್ಟಾರ್‌ ನಟಿಯರನ್ನು ಆಹ್ವಾನಿಸುವ ಕುರಿತಂತೆ ಈ ವರ್ಷ ಚಿತ್ರೋತ್ಸವ ಸಮಿತಿ ಆಸಕ್ತಿ ಹೊಂದಿಲ್ಲ ಎನ್ನಲಾಗಿದೆ.

ಕಳೆದ ವರ್ಷ ಬಾಲಿವುಡ್‌ ನಟಿ ಕರೀನಾ ಕಪೂರ್‌ ಅವರನ್ನು ಚಿತ್ರೋತ್ಸವಕ್ಕೆ ಕರೆಸಲು ಒಂದು ಕೋಟಿ ರೂ. ವೆಚ್ಚ ಮಾಡಲಾಗಿತ್ತು. ಇದು ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಹೀಗಾಗಿ ಈ ಬಾರಿ ದೊಡ್ಡ ಸ್ಟಾರ್‌ಗಳನ್ನು ಕರೆಸುವ ಬದಲು, ಕಡಿಮೆ ಸಂಭಾವನೆ ಪಡೆಯುವ ನಟರ ಹುಡುಕಾಟ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next