Advertisement
ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಪತ್ತಿನ ಹಾನಿ ಯನ್ನು ತಗ್ಗಿಸುವುದು ಮತ್ತು ಸಂಭವನೀಯ ಅಪಾಯದ ಬಗ್ಗೆ ಜನರನ್ನು ಜಾಗೃತಗೊಳಿಸುವ ಉದ್ದೇಶದಿಂದ 1989ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರತೀ ವರ್ಷ ಅಕ್ಟೋಬರ್ 13ನ್ನು ಅಂತಾರಾಷ್ಟ್ರೀಯ ವಿಪತ್ತು ಅಪಾಯ ತಗ್ಗಿಸುವ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು. ವಿಪತ್ತುಗಳಿಗೆ ಒಳಗಾದಾಗ ಆಗುವ ಅನಾಹುತವನ್ನು ಕಡಿಮೆಗೊಳಿಸುವ ಬಗ್ಗೆ ಹಾಗೂ ವಿಪತ್ತನ್ನು ಸಮರ್ಪಕವಾಗಿ ಎದುರಿಸಲು ಸಿದ್ಧರಾಗುವ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಯಾವುದೇ ವಿಪತ್ತು ಸಂಭವಿಸಿ ದಾಗ ಸಾಮಾನ್ಯವಾಗಿ ಪ್ರಾಣ ಹಾನಿಯ ಜತೆಗೆ ಬದುಕುಳಿದವರಲ್ಲಿ ಮಾನಸಿಕ ಮತ್ತು ದೈಹಿಕ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. ಇದರ ಜತೆಗೆ ಆಸ್ತಿಪಾಸ್ತಿ ನಾಶವಾಗಿ ಸಾಮಾಜಿಕ ಮತ್ತು ಆರ್ಥಿಕ ಅಭದ್ರತೆಯನ್ನು ಉಂಟುಮಾಡುತ್ತದೆ. ಆದರೆ ವಿಪತ್ತನ್ನು ಎದುರಿಸಲು ಸನ್ನದ್ಧರಾಗಿದ್ದರೆ ಅನಾಹುತಗಳನ್ನು ತಡೆಗಟ್ಟಬಹುದು ಅಥವಾ ಹಾನಿಯ ಪ್ರಮಾಣವನ್ನು ಕಡಿಮೆ ಮಾಡಬಹುದು.ಭೂಕಂಪ, ಚಂಡಮಾರುತ, ಸುನಾಮಿ, ಭೂಕುಸಿತ ಇತ್ಯಾದಿ ವಿಪತ್ತುಗಳು ಪ್ರಾಕೃತಿಕವಾಗಿದ್ದರೆ ಪರಮಾಣು, ವಿಕಿರಣ, ಜೈವಿಕ ಹಾಗೂ ರಾಸಾಯನಿಕ ಸಂಬಂಧಿತ ಆಪತ್ತುಗಳು ಮಾನವ ನಿರ್ಮಿತ ಆಪತ್ತುಗಳು. ಆಪತ್ತು ವಿಪತ್ತಿಗೆ ಮೂಲ ಕಾರಣ. ಆದರೆ ಕೇವಲ ಆಪತ್ತು ವಿಪತ್ತನ್ನು ಆಹ್ವಾನಿಸುವುದಿಲ್ಲ, ಆಪತ್ತು ವಿಪತ್ತಾಗಿ ಪರಿವರ್ತನೆಗೊಳ್ಳಲು ನಮ್ಮ ದೌರ್ಬಲ್ಯಗಳೇ ಪ್ರಮುಖ ಕಾರಣವಾಗಿರುತ್ತವೆ.
Related Articles
Advertisement
ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಪತ್ತು ನಿರ್ವಹಣ ಕಾಯ್ದೆಯ ಅನುಸರಣೆಗೆ ಸಂಬಂಧಿಸಿದಂತೆ ತೆಗದುಕೊಂಡ ಕ್ರಮಗಳು ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಸಾಂಸ್ಥಿಕ, ಆಡಳಿತಾತ್ಮಕ, ಜ್ಞಾನ, ತರಬೇತಿ, ವೈಜ್ಞಾನಿಕ ಸಾಮರ್ಥ್ಯವನ್ನು ಹೆಚ್ಚಿಸಿ ಸಮಗ್ರ ವಿಪತ್ತು ನಿರ್ವಹಣೆಯ ವ್ಯಾಪ್ತಿಯನ್ನು ಹೆಚ್ಚಿಸಿ ತ್ವರಿತಗತಿಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಎದುರಿಸಲು ಸಹಕಾರಿಯಾಗಿದೆ. ಎಲ್ಲ ರಾಜ್ಯಗಳು ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರ, ರಾಜ್ಯ ವಿಪತ್ತು ನಿರ್ವಹಣ ಕಾರ್ಯ ಸಮಿತಿ ಮತ್ತು ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರದ ಮೂಲಕ ವಿಪತ್ತು ನಿರ್ವಹಣ ಕಾಯ್ದೆಯ ಅಂಶಗಳನ್ನು ಅನುಷ್ಠಾನ ಮಾಡಲು ಪ್ರಯತ್ನಿಸುತ್ತಿವೆ. ಹಾಗಾಗಿ ಪ್ರಸ್ತುತ ಹೆಚ್ಚಿನ ರಾಜ್ಯಗಳಲ್ಲಿ ರಾಜ್ಯ ವಿಪತ್ತು ನಿರ್ವಹಣ ವಾರ್ಷಿಕ ಯೋಜನೆ, ಇಲಾಖಾವಾರು ವಿಪತ್ತು ನಿರ್ವಹಣ ಯೋಜನೆ, ವಿಪತ್ತು ನಿರ್ವಹಣ ನೀತಿ ಇತ್ಯಾದಿಗಳನ್ನು ಅಭಿವೃದ್ಧಿ ಪಡಿಸಿದ್ದು ಇದು ಸಮಗ್ರ ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಪೂರ್ವಭಾವಿ ಮತ್ತು ಪ್ರತಿಕ್ರಿಯಾ ತ್ಮಕ ಸನ್ನದ್ಧತೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಕಾರಿಯಾಗಿದೆ.
ಸುವ್ಯವಸ್ಥಿತ ಮುಂಜಾಗ್ರತ ವ್ಯವಸ್ಥೆ, ಸಂವಹನ, ಮುಂಚಿತವಾಗಿ ಜನರ ಮತ್ತು ಜಾನುವಾರುಗಳ ಸ್ಥಳಾಂತರ, ತುರ್ತು ಸಂದರ್ಭದಲ್ಲಿ ರಕ್ಷಣ ಕಾರ್ಯಾಚರಣೆ, ನೀರು, ನೈರ್ಮಲ್ಯ, ಸ್ವತ್ಛತೆ, ಆಹಾರ, ಆರೋಗ್ಯ, ವಸತಿಯನ್ನೊಳಗೊಂಡ ತುರ್ತು ಪರಿಹಾರ ಕಾರ್ಯಾಚರಣೆ, ಪುನಶ್ಚೇತನ ಮತ್ತು ಪುನರ್ವಸತಿ ವಿಪತ್ತು ನಿರ್ವಹಣ ಕೇಂದ್ರಿತ ರಚನಾ ತ್ಮಕ ಬದಲಾವಣೆಗಳ ಪರಿಣಾಮದಿಂದಾಗಿ ಇದು ಸಾಧ್ಯವಾಗಿದೆ. ಆದರೂ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ನಗರಸಭೆ, ನಗರಪಾಲಿಕೆ ಗಳನ್ನು ಒಳಗೊಂಡಂತೆ ಸ್ಥಳೀಯ ಆಡಳಿತ ವಿಪತ್ತು ನಿರ್ವಹಣೆಗೆ ಇನ್ನು ಹೆಚ್ಚಿನ ಪ್ರಾಮುಖ್ಯ ಕೊಡಬೇಕಾಗಿದೆ. ಪೂರ್ವಭಾವಿ ಸನ್ನದ್ಧತೆ ಮತ್ತು ಪ್ರತಿಕ್ರಿಯಾ ತ್ಮಕ ವಿಪತ್ತು ನಿರ್ವಹಣ ಯೋಜನೆಗಳು ಹೆಚ್ಚು ಸ್ಥಳೀಯ ಆಡಳಿತ ಕೇಂದ್ರೀಕೃತವಾದಾಗ ಮಾತ್ರ ಹೆಚ್ಚು ಪರಿಣಾ ಮಕಾರಿಯಾದ ಸಮಗ್ರ ವಿಪತ್ತು ನಿರ್ವಹಣೆ ಸಾಧ್ಯ.
ವಿಪತ್ತು ನಿರ್ವಹಣೆ ಕೇವಲ ಸರಕಾರದ ಜವಾಬ್ದಾರಿ ಯಲ್ಲದೆ ಪ್ರತಿಯೊಬ್ಬರ ಜವಾಬ್ದಾರಿ, ಹೀಗಿರುವಾಗ ವಿಪತ್ತು ನಿರ್ವಹಣೆಯಲ್ಲಿ ಸಮುದಾಯದ ಭಾಗ ವಹಿಸುವಿಕೆ ಅತೀ ಮುಖ್ಯ. ತುರ್ತು ಪರಿಸ್ಥಿಯಲ್ಲಿ ಮೊದಲು ಪ್ರತಿಕ್ರಿಯಿಸುವವರು ಸಮುದಾಯವೇ ಆದರೂ ಪೂರ್ವಭಾವಿ ತಯಾರಿಯಲ್ಲಿ ಸಮುದಾ ಯದ ಭಾಗವಹಿಸುವಿಕೆ ಇನ್ನೂ ವಿರಳ. ಹಾಗಾಗಿ ವೈಯಕ್ತಿಕವಾಗಿ, ಕೌಟುಂಬಿಕವಾಗಿ, ಸಮುದಾಯವಾಗಿ ವಿಪತ್ತಿನ ಪೂರ್ವಭಾವಿ ಸನ್ನದ್ಧತೆ ಮತ್ತು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕ್ರಿಯಾತ್ಮಕವಾಗಿ ಮತ್ತು ಯೋಜನೆಯೊಂದಿಗೆ ಪ್ರತಿಕ್ರಿಯಿಸಿದರೆ ಪುನಶ್ಚೇ ತನ ಮತ್ತು ಪುನರ್ವಸತಿಯನ್ನು ಹೆಚ್ಚು ಪರಿಣಾಮಕಾರಿ ಯಾಗಿ ಮತ್ತು ತ್ವರಿತವಾಗಿ ನಿರ್ವಹಿಸಲು ಸಾಧ್ಯ.
ಪ್ರಸ್ತುತ ವಿಪತ್ತಿಗೆ ಉತ್ತಮ ಪ್ರತಿಕ್ರಿಯಾತ್ಮಕ ವ್ಯವಸ್ಥೆ ಮತ್ತು ಜಾಲವನ್ನು ಹೊಂದಿದ್ದರೂ ವಿಪತ್ತಿನ ಹಾನಿ ತಗ್ಗಿ ಸುವಲ್ಲಿ ನಾವಿನ್ನೂ ಯಶಸ್ಸು ಕಾಣಬೇಕಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಪತ್ತು ನಿರ್ವಹಣ ಪ್ರಾಧಿಕಾರದ ಮೂಲಕ ಸಂಬಂಧಿತ ಇಲಾಖೆಗಳನ್ನು ಒಳಗೊಂಡಂತೆ ರಚನಾತ್ಮಕವಾಗಿ ಕಾರ್ಯನಿರ್ವಹಿಸಿ ಎಲ್ಲ ಅಭಿವೃದ್ಧಿ ಯೋಜನೆಯಲ್ಲೂ ಅಪಾಯನ್ನು ಗುರುತಿಸಿ ಅದರ ಉಪಶಮನ ಯೋಜನೆಯ ಭಾಗವಾಗಿರಬೇಕು ಹಾಗೂ ಕಠಿನ ಕ್ರಮವನ್ನು ಜರಗಿಸಬೇಕು. ಇನ್ನು ಸ್ಥಳೀಯ ಆಡಳಿತ ಮತ್ತು ಸಮುದಾಯದ ಭಾಗವಹಿಸುವಿಕೆ ವಿಪತ್ತು ನಿರ್ವ ಹಣೆಯ ಯಶಸ್ಸಿಗೆ ಬಹಳ ಮುಖ್ಯ.
-ಡಾ| ಮಟಪಾಡಿ ಪ್ರಭಾತ್ ಕಲ್ಕೂರ